ಬಿಎಸ್‌ವೈಗಿಲ್ಲ ಮಂತ್ರಿಗಿರಿ, ಕಾರ್ಯಕರ್ತರಿಗೆಲ್ಲ ಚಿಂತೆ ಬರೀ
ವಿಶೇಷ ವರದಿ
ಶಿವಮೊಗ್ಗ: ಯಡಿಯೂರಪ್ಪ ಕೇಂದ್ರ ಮಂತ್ರಿಯಾಗುವುದು ಸದ್ಯ ಕಷ್ಟ ಎಂಬ ಸುದ್ದಿಯಿಂದ ಶಿವಮೊಗ್ಗ ಬಿಜೆಪಿ ಮಂಕಾಗಿದೆ. ಹಾಗೆಯೇ ಬಿಎಸ್‌ವೈಗೆ ಸಾರಾಸಗಟಾಗಿ ಮತ ಹಾಕಿದವರಲ್ಲೂ, ಆರ್ಥಿಕ ಚಟುವಟಿಕೆ ಚೇತರಿಕೆಯಾಗುವ ನಿರೀಕ್ಷೆಯಲ್ಲಿದ್ದ ಉದ್ಯಮಿಗಳಲ್ಲಿ ಚಡಪಡಿಕೆ ಆರಂಭವಾಗಿದೆ.
ನಮೋ ಕ್ಯಾಬಿನೇಟ್‌ನಲ್ಲಿ ಪ್ರಮುಖ ಹುದ್ದೆ ಶಿವಮೊಗ್ಗಕ್ಕೆ ಸಿಗುತ್ತದೆ ಎಂಬ ಉತ್ಸಾಹದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಮೌನಕ್ಕೆ ಶರಣಾಗಿದ್ದು, ಅಧಿಕಾರ ಸಿಗದೇ ಇರುವುದಕ್ಕೆ ಒಳಗೊಳಗೆ ಸಂಕಟ ಅನುಭವಿಸಲಾರಂಭಿಸಿದ್ದಾರೆ.
ಯಡಿಯೂರಪ್ಪನವರು ಗೆಲುವು ಸಾಧಿಸಿದರೆ ಕೇಂದ್ರದಲ್ಲಿ ಕೃಷಿ ಸಚಿವರಾಗುವುದೂ ಖಚಿತ ಎಂದೇ ಪ್ರಚಾರದ ವೇಳೆ ಪ್ರಮುಖ ವಿಷಯವಾಗಿ ಪ್ರಸ್ತಾಪಿಸಲಾಗಿತ್ತು. ಸಹಜವಾಗಿ ಚುನಾವಣೆ ವೇಳೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದರೆ ಯಡಿಯೂರಪ್ಪನವರು ಮಂತ್ರಿಯಾಗುತ್ತಾರೆ ಎಂಬ ಮಾತು ಕ್ಷೇತ್ರದಲ್ಲಿ ಜನಜನಿತವಾಗಿತ್ತು.
ಆದರೆ ಯಡಿಯೂರಪ್ಪನವರಿಗೆ ಕೇಂದ್ರ ಸಂಪುಟದಲ್ಲಿ ಸದ್ಯ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂಬುದು ವೇದ್ಯವಾಗುತ್ತಿದ್ದಂತೆ ಕಾರ್ಯಕರ್ತರು ಮೌನಕ್ಕೆ ಶರಣಾಗಿದ್ದಾರೆ.
ಅಧಿಕಾರ ಏಕೆ ಬೇಕು: ಯಡಿಯೂರಪ್ಪನವರು 2006 ಫೆಬ್ರವರಿ 3ರಂದು ಉಪಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದಾಗಿನಿಂದ ಬಿಜೆಪಿ ಸರ್ಕಾರದ ಅಧಿಕಾರದಲ್ಲಿ ಕೊನೆ ಘಳಿಗೆವರೆಗೆ ಶಿವಮೊಗ್ಗ ಒಂದು ರೀತಿಯ ಶಕ್ತಿಕೇಂದ್ರವಾಗಿತ್ತು. ಒಂದಷ್ಟು ಅಭಿವೃದ್ಧಿ ಕಾರ್ಯಗಳು ಮತ್ತು ಸರ್ಕಾರದ ಮಟ್ಟದಲ್ಲಿ ನಡೆಯುವ ಕೆಲಸ ಕಾರ್ಯಗಳು ಶಿವಮೊಗ್ಗದ ಪಾಲಿಗೆ ಸುಲಭ ಎಂಬಂತಾಗಿತ್ತು. 2006 ಮಾರ್ಚ್, 2007ರ ಮಾರ್ಚ್ 2008 ಜುಲೈ, 2009ರ ಫೆಬ್ರವರಿ, 2010ರ ಮಾರ್ಚ್, 2011ರ ಫೆಬ್ರವರಿಯಲ್ಲಿ ಯಡಿಯೂರಪ್ಪನವರು ಮಂಡಿಸಿದ ಬಜೆಟ್‌ನಲ್ಲಿ ಉಳಿದ ಜಿಲ್ಲೆಗೆ ಹೋಲಿಸಿದರೆ ಶಿವಮೊಗ್ಗಕ್ಕೆ ಸಿಂಹಪಾಲು ಸಿಕ್ಕಿತ್ತು.
ಆದರೆ, ಬದಲಾದ ಸರ್ಕಾರ ಬಂದು ವರ್ಷ ಕಳೆದರೂ ಶಿವಮೊಗ್ಗದಲ್ಲಿ ಆರ್ಥಿಕ ಚಟುವಟಿಕೆಗಳು ಮೇಲೇಳದೇ ಇರುವುದು, ಅಭಿವೃದ್ಧಿ ಕಾಮಗಾರಿ ನಡೆಯದೇ ಇರುವುದರಿಂದ ಒಂದು ರೀತಿಯಲ್ಲಿ ಮಂಕು ಆವರಿಸಿದೆ. ಯಡಿಯೂರಪ್ಪನವರಿಗೆ ಮಂತ್ರಿ ಸ್ಥಾನ ಸಿಕ್ಕರೆ ಮತ್ತೆ ಚಟುವಟಿಕೆಗಳು ಚುರುಕಾಗಲಿದೆ, ಶಿವಮೊಗ್ಗದಲ್ಲಿ ನಿಂತುಹೋದ ಅಭಿವೃದ್ಧಿ ಕಾಮಗಾರಿಗಳು ಪುನಾರಂಭವಾಗುವ ಜೊತೆಗೆ ಮತ್ತಷ್ಟು ಯೋಜನೆಗಳು ಬರುತ್ತವೆ. ಜೊತೆ ಜೊತೆಗೆ ಆರ್ಥಿಕ ಚಟುವಟಿಕೆಗಳು ಸುಧಾರಿಸುತ್ತವೆ ಎಂಬುದು ಸಾರ್ವಜನಿಕವಾಗಿ ನಡೆಯುತ್ತಿರುವ ಚರ್ಚೆ.
ಯಡಿಯೂರಪ್ಪನವರು ಮಂತ್ರಿಯಾದರೆ ಅನುದಾನಗಳು, ಯೋಜನೆಗಳು ಶಿವಮೊಗ್ಗಕ್ಕೆ ನಿರೀಕ್ಷೆಗೆ ಮೀರಿ ಬರುತ್ತದೆ. ಇದರಿಂದ ಸಹಜವಾಗಿ ಇಲ್ಲಿನ ಆರ್ಥಿಕ ವಹಿವಾಟು ಸುಧಾರಿಸಲಿದೆ ಎಂಬುದು ಉದ್ಯಮಿ ಮಂಜುನಾಥ ವಾದ.
ವಿಜಯೋತ್ಸವವೂ ಇಲ್ಲ: ಯಡಿಯೂರಪ್ಪನವರಿಗೆ ಸಿಕ್ಕಿದ್ದು ಅಭೂತಪೂರ್ವ ಗೆಲುವು. 3.6 ಲಕ್ಷ ಮತಗಳ ಅಂತರವನ್ನು ಅವರೇ ನಿರೀಕ್ಷಿಸಿರಲಿಲ್ಲ. ಪಕ್ಷದ ಸಂಘಟನೆ ನಿರೀಕ್ಷಿಸಿದ್ದಕ್ಕಿಂತ 6 ಪಟ್ಟು ಹೆಚ್ಚು ಮತಗಳು ಬಂದಿದ್ದು ಕಾರ್ಯಕರ್ತರು, ಮುಖಂಡರಲ್ಲಿ ಹೊಸ ಚೇತನ ಮೂಡಿಸಿತ್ತು. ಅಚ್ಚರಿ ಅಂದರೆ, ಇಂತಹ ಗೆಲುವು ಪಡೆದರೂ ಸಹ ಬಿಜೆಪಿಯಿಂದ ವಿಜಯೋತ್ಸವ ಆಚರಣೆ ಅಥವಾ ಮತದಾರರಿಗೆ ಮತ್ತು ಮುಖಂಡರಿಗೆ ಅಭಿನಂದಿಸುವ ಕಾರ್ಯಕ್ರಮದ ಆಲೋಚನೆಗಳು ನಡೆದಿಲ್ಲ. ಯಡಿಯೂರಪ್ಪನವರಿಗೆ ಮಂತ್ರಿ ಸ್ಥಾನದ ವಿಚಾರವೇ ಸದ್ಯ ಪ್ರಧಾನ ಚರ್ಚಾ ವಿಷಯ.
ಬಿಜೆಪಿ ಆಶಾಭಾವನೆ: ಈ ಬೆಳವಣಿಗೆ ಕುರಿತು 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ದತ್ತಾತ್ರಿ, ಯಡಿಯೂರಪ್ಪನವರಿಗೆ ಮಂತ್ರಿ ಸ್ಥಾನ ಸಿಗುವ ಆಶಾಭಾವನೆ ನಮಗೆ ಇನ್ನೂ ಇದೆ ಎಂದು ಹೇಳಿದ್ದಾರೆ.
ಸಂಸದೀಯ ಮಂಡಳಿಯ ಸಭೆಯಲ್ಲಿ ಮೋದಿಯವರ ಐತಿಹಾಸಿಕ ಭಾಷಣದಿಂದ ಪ್ರೇರೇಪಿತರಾಗಿ ಎಲ್ಲೋ ಒಂದು ಕಡೆ ಮಂತ್ರಿ ಸ್ಥಾನ ಮುಖ್ಯವಲ್ಲ, ಪಕ್ಷದ ಸಂಘಟನೆಯೇ ಮುಖ್ಯ ಎಂಬ ಮಾನಸಿಕತೆಗೆ ಬಂದಿರುವ ಯಡಿಯೂರಪ್ಪನವರು ಸ್ವಯಂಪ್ರೇರಿತವಾಗಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವುದು ಸ್ವಾಗತಾರ್ಹ. ಇಂತಹವರ ಸಂಖ್ಯೆ ಹೆಚ್ಚಾದಾಗ ಪಕ್ಷದ ಸಂಘಟನೆ, ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಅವರು ಹೇಳಿದ್ದಾರೆ.
ಯಡಿಯೂರಪ್ಪನವರಿಗೆ ಮಂತ್ರಿ ಸ್ಥಾನ ಸಿಗುತ್ತದೆ, ಸಿಗುವುದಿಲ್ಲ ಎಂಬ ವಿಚಾರ ಇನ್ನೂ ಅಂತಿಮವಾಗಿಲ್ಲ. ಮಂತ್ರಿಯಾಗುವ ಅವಕಾಶ ಇನ್ನೂ ಇದೆ, ನಾವು ಕೂಡ ಯಡಿಯೂರಪ್ಪನವರು ಮಂತ್ರಿಯಾಗಬೇಕೆಂಬ ಹಂಬಲ, ಅಪೇಕ್ಷೆಯಲ್ಲೇ ಇದ್ದೇವೆ ಎಂದು ಹೇಳಿದ ಅವರು, ಯಡಿಯೂರಪ್ಪನವರಿಗೆ ಮಂತ್ರಿ ಸ್ಥಾನ ನೀಡುವ ಮೂಲಕ ಬಲಿಷ್ಠ ಮಾಸ್ ಲೀಡರ್ ಒಬ್ಬನನ್ನು ಮೋದಿಯವರು ಗುರುತಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.