'ವರಿಷ್ಠರ ಮುಂದಾಳತ್ವದಲ್ಲಿ ಜೆಡಿಎಸ್‌ಗೆ ಭದ್ರ ಬುನಾದಿ'
ಶಿರಾಳಕೊಪ್ಪ: ಕರ್ನಾಟಕದಲ್ಲಿ ಭಾಷೆ, ಜಲ, ಗಡಿ, ಇತರ ಸಾಮಾನ್ಯ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಲು ಜೆಡಿಎಸ್‌ನಂತಹ ಪ್ರಾದೇಶಕ ಪಕ್ಷಗಳ ಅವಶ್ಯಕತೆ ಇದೆ. ಈ ಬಾರಿ ಜೆಡಿಎಸ್ ಪಕ್ಷಕ್ಕೆ ಸೋಲು ಉಂಟಾಗಿರಬಹುದು. ಮುಂಬರುವ ದಿನಗಳಲ್ಲಿ ಜನರ ನಿರೀಕ್ಷೆ ಹುಸಿ ಆಗದಂತೆ ಪಕ್ಷವನ್ನು ಸದೃಢವಾಗಿ ಕಟ್ಟಲಾಗುವುದು ಎಂದು ತಾಲೂಕು ಜೆಡಿಎಸ್ ಮುಖಂಡ ಎಸ್.ಎಚ್. ಬಳಿಗಾರ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಸೂಕ್ತವಾಗಿ ಪಕ್ಷ ಸಂಘಟಿಸಿ, ಭದ್ರ ಬುನಾದಿಗೆ ಪ್ರಯತ್ನಿಸ ಲಾಗುವುದು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ತೀರ್ಮಾನದಂತೆ ಹೋರಾಟ ಅನಿವಾರ್ಯ ಎಂದರು.
ಇದು ರಾಷ್ಟ್ರೀಯ ವಿಷಯದ ಚುನಾವಣೆ. ಆದರೆ ಮುಂದೆ ಬರಲಿರುವ ಚುನಾವಣೆ ಸ್ಥಳೀಯ ಸಮಸ್ಯೆಗಳ ಆಧಾರಿತ ಚುನಾವಣೆ ಆಗಲಿದೆ. ಬಿಜೆಪಿ ಅಲೆಯಲ್ಲಿಯೂ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳದಲ್ಲಿ ಜಯ ಗಳಿಸಿದಂತೆ ಮುಂಬರುವ ದಿನದಲ್ಲಿ ಜೆಡಿಎಸ್ ರಾಜ್ಯದಲ್ಲಿ ತಲೆ ಎತ್ತಲಿದೆ ಎಂದರು.
ಅಭಿನಂದನೆ: ಮೋದಿ ಅಲೆಯ ಮಧ್ಯೆಯೂ ಶಿಕಾರಿಪುರ ತಾಲೂಕಿನಲ್ಲಿ ಜೆಡಿಎಸ್‌ಗೆ 27000 ಮತ ಹಾಕಿ ಆಶೀರ್ವದಿಸಿರುವ ತಾಲೂಕಿನ ಮತದಾರರಿಗೆ ಅಭಿನಂದನೆ ತಿಳಿಸಿದ ಅವರು, ಭಾರತ ಸ್ವಾತಂತ್ರ್ಯಾನಂತರ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ ಎಂದರು.
ಬಿಎಸ್‌ವೈಗೆ ಅಭಿನಂದನೆ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಭಾರಿ ಬಹುಮತದಿಂದ ಆಯ್ಕೆ ಆಗಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಅವರು, ಸ್ವತಹ ಬಿ.ಎಸ್.ವೈ. ಅವರಿಗೇ ತಾನು ಗೆಲ್ಲುತ್ತೇನೆ ಎಂಬ ಭರವಸೆ ಇತ್ತು. ಆದರೆ 3 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲ್ಲುತ್ತೇನೆಂಬ ವಿಶ್ವಾಸ ಇರಲಿಲ್ಲ ಎಂದರು.
ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಯಾನಾಯ್ಕ್, ಶಿರಾಳಕೊಪ್ಪ ಪಟ್ಟಣದ ಅಧ್ಯಕ್ಷ ಪರ್ವೇಜ್, ಹಿರಿಯ ಮುಖಂಡ ಹಿರೇಜಂಬೂರು ಚಂದ್ರಣ್ಣ, ಉಡುಗಣಿ ಹೋಬಳಿ ಅಧ್ಯಕ್ಷ ತೇಜ್ಯಾನಾಯ್ಕ್, ಶಿಕಾರಿಪುರ ಪಟ್ಟಣದ ಅಧ್ಯಕ್ಷ ಮಲ್ಲೇಶಪ್ಪ, ರಾಜಾಸಾಬ್, ನೂರುಲ್ಲಾ ಇತರರು ಇದ್ದರು.