ಸಾಂಕ್ರಾಮಿಕ ರೋಗ: ಜಾಗ್ರತೆ ವಹಿಸಿ
ಕ.ಪ್ರ.ವಾರ್ತೆ ಶಿರಾಳಕೊಪ್ಪ ಮೇ 23
ಡೆಂಘೀ, ಚಿಕೂನ್ಗುನ್ಯ ಮತ್ತು ಇತರ ಸಾಂಕ್ರಾಮಿಕ ರೋಗಗಳು ಬಾರದಂತೆ ಎಚ್ಚರ ವಹಿಸಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಎಲ್ಲ ರೀತಿಯ ಸಹಕಾರ ಕೊಡಲು ಸಿದ್ದ ಎಂದು ತಾಲೂಕು ವೈದ್ಯಾಧಿಕಾರಿ ನಾಗರಾಜ್ ನಾಯಕ್ ಹೇಳಿದರು.
ಇಲ್ಲಿಯ ಪಪಂ ಕಚೇರಿಯಲ್ಲಿ ಮನೆಬಾಗಿಲಿಗೆ ಆರೋಗ್ಯ ಇಲಾಖೆ ಮತ್ತು ಚಿಕನ್ಗುನ್ಯ ಮತ್ತು ಡೆಂಗ್ಯೂ ಕಾಯಿಲೆಗಳ ಅರಿವು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಮಾರಕ ಕಾಯಿಲೆಗಳು ಮತ್ತು ವಾಂತಿ ಭೇದಿ ಕಂಡು ಬಂದಲ್ಲಿ ಸಾರ್ವಜನಿಕರು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಬಂದಲ್ಲಿ ಸೂಕ್ತ ಚಿಕಿತ್ಸೆ ಕೊಡುವದರ ಜೊತೆಗೆ ಮುಂಜಾಗ್ರತೆ ವಹಿಸಲು ಸಾದ್ಯವಾಗುತ್ತದೆ ಎಂದರು.
ಸೊಳ್ಳೆ ನಿರ್ಮೂಲನೆಗೆ ಕ್ರಮ: ಘನತ್ಯಾಜ್ಯ ವಸ್ತುಗಳಲ್ಲಿ ನೀರು ನಿಲ್ಲುವದು, ಮನೆಯಲ್ಲಿ ಸಂಗ್ರಹಿಸಿದ ಶುದ್ದ ನೀರಲ್ಲಿ ಲಾರ್ವಾ ಮುಖಾಂತರ ಸೊಳ್ಳೆ ಉತ್ಪತ್ತಿ ಆಗುತ್ತಿವೆ. ಹಾಗೆಯೇ ಚರಂಡಿಯಲ್ಲಿ ನೀರುನಿಂತು ಸೊಳ್ಳೆ ಉತ್ಪತ್ತಿ ಆಗುತ್ತಿವೆ. ಆದ್ದರಿಂದ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿರ್ಮೂಲನ ಮಾಡಲು ಆರೋಗ್ಯ ಇಲಾಖೆ ಬದ್ದವಾಗಿದೆ ಎಂದರು.
ಸೊಳ್ಳೆ ನಿರ್ಮೂಲನೆಗೆ ಪಪಂ ಪಂಚಾಯ್ತಿ ಸಹಕಾರ ಅತ್ಯವಶ್ಯಕ,ಆರೋಗ್ಯ ಇಲಾಖೆ ಪಪಂ ಗೆ ಎಲ್ಲ ಸಹಕಾರ ಕೊಡಲು ಸಿದ್ದ ಹಾಗೆಯೇ ವಾರದಲ್ಲಿ 2ದಿನ ಲಾರ್ವನಾಶ ಮಾಡಲು ಸರ್ವೇಕಾರ್ಯ ಕೈಗೊಳ್ಳಲು ಪಪಂ ಸಹಕಾರ ಮುಖ್ಯ ಎಂದು ನಾಗರಾಜ್ ನಾಯಕ್ ತಿಳಿಸಿದರು.
ಸಹಕಾರದ ಭರವಸೆ: ಕಾರ್ಯಕ್ರಮದ ಮುಖ್ಯ ಅತಿಥಿ ಪಪಂ ಮುಖ್ಯಾಧಿಕಾರಿ ರಾಜ್ಕುಮಾರ್ ಮಾತನಾಡಿ ಆರೋಗ್ಯ ಇಲಾಖೆ ಯಾವ ಸಂದರ್ಭದಲ್ಲಿ ಆದರೂ ಸಹಕಾರ ಕೋರಿದರೆ ನಮ್ಮ ಸಂಪೂರ್ಣ ಸಹಕಾರ ನೀಡಲಾಗುವುದು. ಪಟ್ಟಣದ ಘನತ್ಯಾಜ್ಯ ವಿಲೆವಾರಿಯನ್ನು ಸೂಕ್ತವಾಗಿ ನಿರ್ವಹಿಸುತ್ತಿದ್ದು, ಶುದ್ದ ನೀರು ಸರಬರಾಜು ಮಾಡುವದಾಗಿ ತಿಳಿಸಿದರು.
ಪಪಂ ಅಧ್ಯಕ್ಷೆ ಖಾತೂನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಪಂ ಆರೋಗ್ಯ ಇಲಾಖೆಗೆ ಎಲ್ಲ ಸಹಕಾರ ಕೊಡುವದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜು ನಾಯಕ್, ಪಪಂ ಸದಸ್ಯರು ಹಾಗು ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು. ಆರೋಗ್ಯ ಇಲಾಖೆಯ ಕು. ರಾಜೇಶ್ವರಿ ಪ್ರಾರ್ಥಿಸಿದರೆ, ರೇವಣಪ್ಪ ಸ್ವಾಗತಿಸಿದರು. ಹಿರಿಯ ಸಹಾಯಕ ಸೀತಾರಾಮ ವಂದಿಸಿದರು. ಶಬ್ಬೇರ್ ನಿರೂಪಿಸಿದರು.