ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಪಘಾತ, ಪ್ರತಿಭಟನೆ, ಲಾಠಿ ಪ್ರಹಾರ

Rashmi Kasaragodu
Updated On : 26 May 2014, 10:48 am

ಕ.ಪ್ರ.ವಾರ್ತೆ   ಶಿವಮೊಗ್ಗ   ಮೇ 25
ರಸ್ತೆ ಅಪಘಾತವೊಂದು ತೀವ್ರ ಮಾರಾಮಾರಿಗೆ ಕಾರಣವಾಗಿ ಪೊಲೀಸರು ಲಾಠಿ ಪ್ರಹಾರ ನಡೆಸುವುದರೊಂದಿಗೆ ಪರಿಸ್ಥಿತಿ ತಿಳಿಯಾಗಿಸಿದ ಪ್ರಸಂಗ ಇಲ್ಲಿನ ಗಾಡಿಕೊಪ್ಪ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಭಾನುವಾರ ನಡೆಯಿತು.
ಗಾಡಿಕೊಪ್ಪದ ಲಕ್ಷ್ಮೀ ರೈಸ್‌ಮಿಲ್ ಮುಂಭಾಗದ ರಸ್ತೆಯಲ್ಲಿ ಕಾರೊಂದು ಯೂ ಟರ್ನ್ ತೆಗೆದುಕೊಳ್ಳುತ್ತಿದ್ದ ವೇಳೆ ಆಟೋಗೆ ಡಿಕ್ಕಿಯಾಗಿದೆ. ನಂತರ ಎದುರಿನಿಂದ ಬರುತ್ತಿದ್ದ ಮತ್ತೊಂದು ಆಟೋಕ್ಕೆ ಅಪಘಾತವಾಗಿದೆ.
ಇದರಿಂದ 2 ಆಟೋದಲ್ಲಿದ್ದ ಚಾಲಕರು ಗಾಯಗೊಂಡಿದ್ದಾರೆ. ಹಾಗೆಯೇ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ. ತಕ್ಷಣವೇ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಧರ್ಮದೇಟು: ಈ ಮಧ್ಯೆಯೇ ಒಬ್ಬ ಚಾಲಕನಿಗೆ ಅಲ್ಲಿದ್ದವರು ಧರ್ಮದೇಟು ನೀಡಿದ್ದಾರೆ. ಈ ಸಂದರ್ಭದಲ್ಲಿ ಪರಿಸ್ಥಿತಿ ಕೈ ಮೀರಿದ್ದು ಭಾರೀ ಪ್ರಮಾಣದಲ್ಲಿ ತಳ್ಳಾಟ ನಡೆದಿದೆ. ಪೊಲೀಸರಿಗೆ ಮಾಹಿತಿ ನೀಡಿ ಸಾಕಷ್ಟು ಸಮಯದ ನಂತರ ಸ್ಥಳಕ್ಕೆ ಆಗಮಿಸಿದ್ದರು, ಇದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರುವುದು ತಡವಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಮಧ್ಯೆ ಅಪಘಾತದಿಂದ ರೊಚ್ಚಿಗೆದ್ದ ನಾಗರೀಕರು ರಸ್ತೆಯಲ್ಲಿ ಹಂಪ್ ಹಾಕಬೇಕು, ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗಳು ಆಗಮಿಸಬೇಕು ಎಂದು ಪಟ್ಟು ಹಿಡಿದು ರಸ್ತೆತಡೆ ನಡೆಸಲಾರಂಭಿಸಿದರು. ಪ್ರತಿಭಟನಾಕಾರರ ಮನವೊಲಿಸುವ ಪೊಲೀಸರ ಯತ್ನ ಫಲ ನೀಡಲಿಲ್ಲ.
ಲಾಠಿ ಪ್ರಹಾರ: ರಸ್ತೆ ತಡೆಯಿಂದ ಸುಮಾರು ಮುಕ್ಕಾಲು ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಯಿತು. ನೂರಾರು ವಾಹನಗಳು ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತವು. ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿ ಚದುರಿಸುವಲ್ಲಿ ಯಶಸ್ವಿಯಾದರು.
ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಹಾಗೂ ರಸ್ತೆ ತಡೆ ನಡೆಸಿ ನಾಗರೀಕರಿಗೆ ತೊಂದರೆ ಉಂಟು ಮಾಡಿದ ಆರೋಪದ ಮೇರೆಗೆ ತುಂಗಾ ನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಪ್ರತಿಭಟನೆ ನಡೆಸುತ್ತಿದ್ದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇನ್ಸ್‌ಪೆಕ್ಟರ್ ಶಿವಕುಮಾರ್, ಜೈರಾಜ್, ಎಸ್‌ಐ ಭರತ್‌ಕುಮಾರ್, ರಾಘವೇಂದ್ರ, ಬಸವರಾಜ್, ರಂಗಪ್ಪ, ಸಿದ್ದೇಗೌಡ ಮತ್ತವರ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement