ಕಾಮಗಾರಿ ಪರಿಶೀಲನೆಗೆ ಮಾಸ್ಟರ್ ಲ್ಯಾಬ್: ಸಚಿವ ಕಿಮ್ಮನೆ ರತ್ನಾಕರ್
ಕ.ಪ್ರ.ವಾರ್ತೆ , ಶಿವಮೊಗ್ಗ , ಮೇ 26
ಲೋಕೋಪಯೋಗಿ ಇಲಾಖೆಯು ಶಿವಮೊಗ್ಗದಲ್ಲಿ ಮಾಸ್ಟರ್ ಲ್ಯಾಬ್ ಸ್ಥಾಪಿಸುವ ಸಂಬಂಧ ಪ್ರಕ್ರಿಯೆ ನಡೆದಿದೆ. ಇನ್ನೊಂದು ವಾರದಲ್ಲಿ ಯೋಜನೆಯ ನೀಲನಕ್ಷೆ ಹಾಗೂ ಪ್ರಸ್ತಾವನೆ ಸಲ್ಲಿಕೆಯಾಗಲಿದೆ.
ಈ ಕುರಿತು ಮಾಹಿತಿ ನೀಡಿರುವ ಲೋಕೋಪಯೋಗಿ ಇಲಾಖೆ ಶಿವಮೊಗ್ಗ ವೃತ್ತದ ಸೂಪರಿಟೆಂಡಿಂಗ್ ಎಂಜಿನಿಯರ್ ಬಿ.ಎಸ್. ಬಾಲಕೃಷ್ಣ, ಮನುಷ್ಯನನ್ನು ಸ್ಕ್ಯಾನ್ ಮಾಡುವ ರೀತಿ, ಥರ್ಮೋಗ್ರಫಿ ಮಾದರಿಯಲ್ಲಿ ಕಟ್ಟಡಗಳನ್ನು ಅತಿ ಸೂಕ್ಷ್ಮವಾಗಿ ಗಮನಿಸುವ ವಿಶೇಷ ಯಂತ್ರೋಪಕರಣಗಳಿರುವ ಮಾಸ್ಟರ್ ಲ್ಯಾಬ್ ಶಿವಮೊಗ್ಗದಲ್ಲಿ ಸ್ಥಾಪಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಗುಣಮಟ್ಟ ಲ್ಯಾಬ್: ಉಪ- ವಿಭಾಗ ಮಟ್ಟದಲ್ಲಿ ನಡೆಯುವ ಲೋಕೋಪಯೋಗಿ ಇಲಾಖೆಯ ಎಲ್ಲಾ ಕಾಮಗಾರಿಗಳ ಗುಣಮಟ್ಟ ಪರೀಕ್ಷಿಸಲು ಅಗತ್ಯವಿರುವ ಎಲ್ಲಾ ಉಪಕರಣಗಳೊಂದಿಗೆ ಪ್ರಯೋಗ ಶಾಲೆ ಶಿವಮೊಗ್ಗದಲ್ಲಿ ಕಾರ್ಯಾರಂಭ ಮಾಡಿದೆ.
ರಸ್ತೆ, ಸೇತುವೆ ಮತ್ತು ಕಾಮಗಾರಿಗಳು ನಡೆಯುವಾಗ ಪ್ರತಿ ಹಂತದಲ್ಲಿ ಫ್ರೀಕ್ವೆನ್ಸಿಗೆ ಅನುಗುಣವಾಗಿ ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುವ ಎಂಜಿನಿಯರ್ ಗುಣ ಭರವಸೆ ಪರೀಕ್ಷೆಗಳನ್ನು ಮಾಡುತ್ತಾರೆ. ಈ ಪ್ರಯೋಗಗಳ ಫಲಿತಾಂಶವನ್ನು ಈಗಾಗಲೇ ಒದಗಿಸಿರುವ ನಿರ್ದಿಷ್ಟ ಗುಣ ಭರವಸೆ ರಿಜಿಸ್ಟರ್ಗಳಲ್ಲಿ ದಾಖಲಿಸಿ ಸಹಿ ಮಾಡುತ್ತಾರೆ. ಹಿರಿಯ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ಕೊಟ್ಟು ಅವರು ಸಹ ಕೆಲವು ಪ್ರಯೋಗಗಳನ್ನು ಮಾಜಿ ರಿಜಿಸ್ಟರ್ಗಳಲ್ಲಿ ದಾಖಲಿಸುತ್ತಾರೆ. ಉಪ- ವಿಭಾಗ ಅಧಿಕಾರಿ ಕಾಮಗಾರಿಯ ಬಿಲ್ಲುಗಳನ್ನು ಕಾರ್ಯಪಾಲಕ ಎಂಜಿನಿಯರ್ ಅವರಿಗೆ ಸಲ್ಲಿಸುವಾಗ ಇಲ್ಲಿಯವರೆಗೆ ಮಾಡಿರುವ ಗುಣ ಭರವಸೆ ಪ್ರಯೋಗಗಳ ಫಲಿತಾಂಶಗಳನ್ನು ದಾಖಲಿಸಿದ ರಿಜಿಸ್ಟರ್ಗಳ ಪ್ರತಿಗಳನ್ನು ಬಿಲ್ನ್ನೊಂದಿಗೆ ಸಲ್ಲಿಸಲಾಗುತ್ತದೆ. ಇದರಿಂದ ಗುಣಮಟ್ಟ ಪರೀಕ್ಷಿಸಿದವರ ಹೊಣೆಗಾರಿಕೆಯೂ ದಾಖಲಾದಂತಾಗುತ್ತದೆ.
ಕಾರ್ಯಪಾಲಕ ಎಂಜಿನಿಯರ್ ಬಿಲ್ಲು ಪಾಸು ಮಾಡುವ ಮೊದಲು ಇದನ್ನು ಖಾತರಿಪಡಿಸಿಕೊಳ್ಳುತ್ತಾರೆ. ಅಲ್ಲದೆ, ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರು ಸಹ ಕಾಮಗಾರಿಯ ಸ್ಥಳದಲ್ಲಿ ಒಂದು ಪ್ರಯೋಗಾಲಯ ಸ್ಥಾಪಿಸಿ, ಅವರ ಎಂಜಿನಿಯರ್ಗಳು ಕೂಡ ಅವಶ್ಯ ಗುಣ ಭರವಸೆ ಪ್ರಯೋಗ ಮಾಡುವಂತೆ ನೋಡಿಕೊಳ್ಳಲಾಗುತ್ತದೆ.
18 ಪ್ರಯೋಗಾಲಯ: ಈ ರೀತಿ ಮುಂದಿನ ಮೂರು ತಿಂಗಳಲ್ಲಿ ಎಲ್ಲಾ ತಾಲೂಕು ಮಟ್ಟದಲ್ಲಿ 18 ಗುಣ ನಿಯಂತ್ರಣ ಪ್ರಯೋಗಾಲಯ ತೆರೆಯಲಾಗುವುದು. ಈ ಎಲ್ಲಾ ಕ್ರಮಗಳ ಹೊರತಾಗಿ ಕಳಪೆ ಕಾಮಗಾರಿಯಾದರೆ ಸಂಬಂಧಿಸಿದವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ. ಲೋಕೋಪಯೋಗಿ ಇಲಾಖೆ ಶಿವಮೊಗ್ಗ ವೃತ್ತದ ಸೂಪರಿಟೆಂಡಿಂಗ್ ಎಂಜಿನಿಯರ್ ತಿಳಿಸಿದ್ದಾರೆ.