ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪರೀಕ್ಷಾ ಕೇಂದ್ರ ಅಗತ್ಯ

Vishwanath S
Updated On : 27 May 2014, 11:15 am

ಶಿವಮೊಗ್ಗ: ರಾಜ್ಯದ ಪ್ರತಿ ತಾಲೂಕು ಕೇಂದ್ರಗಳಲ್ಲೂ ನಿರ್ಮಾಣ ಸಾಮಗ್ರಿ ಗುಣಮಟ್ಟ ಪರೀಕ್ಷಾ ಕೇಂದ್ರಗಳನ್ನು ಆರಂಭಿಸುವ ಅಗತ್ಯವಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅಭಿಪ್ರಾಯಪಟ್ಟರು.
ನಗರದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವಿಶೇಷ ವಿಭಾಗದ ಆವರಣದಲ್ಲಿ ನೂತನವಾಗಿ ಆರಂಭಿಸಲಾದ ನಿರ್ಮಾಣ ಸಾಮಗ್ರಿ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಗುಣಮಟ್ಟದ ಕೊರತೆಯಿಂದ ಪ್ರಪಂಚವೇ ನರಳುತ್ತಿದೆ. ಗುಣಮಟ್ಟ ಕಾಯ್ದುಕೊಳ್ಳುವುದು ಯಾವುದೇ ವ್ಯಕ್ತಿ ಅಥವಾ ಇಲಾಖೆಗೆ ಸೀಮಿತವಾದುದ್ದಲ್ಲ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಾಮಾಜಿಕ ಬದುಕಿನಲ್ಲಿಯೂ ಗುಣಮಟ್ಟ ಕಾಯ್ದುಕೊಳ್ಳುವ ಅಗತ್ಯವಿದೆ ಎಂದ ಅವರು, ಉತ್ತಮ ಉದ್ದೇಶದಿಂದ ಆರಂಭಿಸಲಾಗುವ ಪ್ರಯೋಗಾಲಯಗಳಲ್ಲಿ ಎಲ್ಲಾ ವ್ಯವಸ್ಥೆ ಅಳವಡಿಸಿದ್ದು, ಸಕಾಲಿಕವಾಗಿ ಬಳಕೆ ಮಾಡಿಕೊಳ್ಳದಿದ್ದರೆ ಏನು ಲಾಭ, ಪ್ರಯೋಗಾಲಯ ಪರಿಣಾಮಕಾರಿಯಾಗಿ ಸದ್ಬಳಕೆ ಆಗುವಲ್ಲಿ ಎಂಜಿನಿಯರುಗಳು ಶ್ರಮಿಸಬೇಕು ಎಂದರು.
ದುರಂತ: ಪ್ರಯೋಗಾಲಯಗಳೇ ಇಲ್ಲದ ಕಾಲದಲ್ಲಿ ನಿರ್ಮಿಸಲಾದ ಕಟ್ಟಡ, ಸೇತುವೆಗಳು ಇನ್ನೂ ನಮ್ಮೆದುರು ನಿಂತಿವೆ. ಆದರೆ, ಇತ್ತೀಚೆಗೆ ಎಂಜಿನಿಯರುಗಳ ಮಾರ್ಗದರ್ಶನದಲ್ಲಿ ಮಾಡಲಾದ ಅನೇಕ ಕಾಮಗಾರಿಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿವೆ, ಇನ್ನೂ ಕೆಲವು ಅವಶೇಷಗಳಿಲ್ಲದಂತೆ ಮಾಯವಾಗಿರುವುದು ದುರಂತವೇ ಸರಿ ಎಂದ ಅವರು, ಎಂಜಿನಿಯರರು ಕೈಗೊಳ್ಳುವ ಪ್ರತಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ವ್ಯವಸ್ಥೆ ಸುಧಾರಿಸುವುದು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿ.ಎಸ್. ಬಾಲಕೃಷ್ಣ, ಇಲಾಖೆ ವತಿಯಿಂದ ಕೈಗೊಳ್ಳುವ ಪ್ರತಿ ಕಾಮಗಾರಿಗಳ ಗುಣಮಟ್ಟವನ್ನು ಸಕಾಲದಲ್ಲಿ ಪರೀಕ್ಷಿಸಲು ಅನುಕೂಲವಾಗುವಂತೆ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯ ಆರಂಭಿಸಲಾಗಿದೆ. ಇಂತಹ ಕಾರ್ಯಕ್ಕೆ ಸರ್ಕಾರದಿಂದ ಅಗತ್ಯ ನೆರವು- ಸಹಕಾರ ದೊರೆಯಲಿದೆ. ಇದರಿಂದಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಇನ್ನಷ್ಟು ಉತ್ತಮ ಸೇವೆ ನೀಡಲು ಸಾಧ್ಯವಾಗಲಿದೆ ಎಂದರು.
ಶಾಸಕ ಕೆ.ಬಿ. ಪ್ರಸನ್ನಕುಮಾರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಕಿಮ್ಮನೆ ರತ್ನಾಕರ್, ಸುಂದರೇಶ್, ಹಾರೋಗೊಳಿಗೆ ಪದ್ಮನಾಭ, ನಗರಸಭಾ ಸದಸ್ಯ ವಿಶ್ವನಾಥ ಕಾಶಿ, ಅಭಿಯಂತರರಾದ ಮಲ್ಲಿಕಾರ್ಜುನ ಮತ್ತು ರಮೇಶ್ ಸೇರಿದಂತೆ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು. ಕಾರ್ಯಕ್ರಮದ ಆರಂಭದಲ್ಲಿ ವಾಣಿ ಮತ್ತು ಪುಷ್ಪಾ ಪ್ರಾರ್ಥಿಸಿದರು. ಬಾಲಕೃಷ್ಣ ಸ್ವಾಗತಿಸಿದರು.
ವೆಬ್‌ಸೈಟ್ ಲೋಕಾರ್ಪಣೆ
ಸಾಗರ: ಚಿತ್ಪಾವನ ಸಮಾಜವು ಪ್ರಾಚೀನ ಇತಿಹಾಸ ಹೊಂದಿದ್ದು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜನಾಂಗದ ಅನೇಕ ಮಹಾತ್ಮರು ಪಾಲ್ಗೊಂಡು ದೇಶವನ್ನು ದಾಸ್ಯದಿಂದ ಮುಕ್ತಿಗೊಳಿಸುವ ನಿಟ್ಟಿನಲ್ಲಿ ತಮ್ಮದೆ ಕೊಡುಗೆ ನೀಡಿದ್ದಾರೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಕಾರ್ಯದರ್ಶಿ ದಿನೇಶಕುಮಾರ್ ಎನ್. ಜೋಷಿ ಹೇಳಿದರು.
ಇಲ್ಲಿನ ಚಿತ್ಪಾವನ ಸಮಾಜ ಹಾಗೂ ಅಖಿಲ ಕರ್ನಾಟಕ ಚಿತ್ಪಾವನ ಸಮಾಜ ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿವಮೊಗ್ಗ ಪ್ರಾಂತ್ಯ-4ರ ಪ್ರಾಂತೀಯ ಸಮ್ಮೇಳನದಲ್ಲಿ ಮಾತನಾಡಿ, ಸಮಾಜ ನಡೆದು ಬಂದ ಹಾದಿ ಕುರಿತು ಇಂದಿನ ಯುವಜನರಿಗೆ ಹಂತಹಂತವಾಗಿ ಅರಿವು ಮೂಡಿಸಿ ಅವರನ್ನು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದು ತಿಳಿಸಿದರು.
ವೆಬ್‌ಸೈಟ್ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಮಾಜದ ಅಧ್ಯಕ್ಷ ಜಿ.ಎನ್. ಫಡ್ಕೆ, ಸಮಾಜದ ಆಚಾರ-ವಿಚಾರ, ನಡೆದು ಬಂದ ರೀತಿ, ನಮ್ಮ ಸಂಸ್ಕಾರ ಇನ್ನಿತರೆ ಮಾಹಿತಿಯುಳ್ಳ ವೆಬ್‌ಸೈಟ್ ತುಂಬಾ ಅಗತ್ಯವಾಗಿದೆ. ಇದರಿಂದ ಯುವಜನರನ್ನು ಸೆಳೆಯಲು ಸಾಧ್ಯವಿದೆ ಎಂದರು.
ವೆಬ್‌ಸೈಟ್ ಸ್ಥಾಪಕ ದಿವಾಕರ್ ಡೋಂಗ್ರೆ ಮಾತನಾಡಿದರು. ರಾಷ್ಟೀಯ ಜಾಗೃತಿ ಮತ್ತು ಚಿತ್ಪಾವನರು ವಿಷಯ ಕುರಿತು ಸಂಸ್ಕಾರ ಭಾರತಿ ಮಂಗಳೂರು ವಿಭಾಗದ ಸಂಚಾಲಕ ಆದರ್ಶ ಗೋಖಲೆ ಉಪನ್ಯಾಸ ನೀಡಿದರು. ಗೋಪಿನಾಥ್ ಬಾಪಟ್ ಆಶಯ ಭಾಷಣ ಮಾಡಿದರು.
ಶಿಮುಲ್ ನಿರ್ದೇಶಕರ ಆಯ್ಕೆ
ಶಿವಮೊಗ್ಗ: ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟ ಶಿಮುಲ್‌ಗೆ ಹಾಲಿ ಅಧ್ಯಕ್ಷ ಕೆ.ಎಲ್. ಜಗದೀಶ್ವರ ತಾಲೂಕಿನಿಂದ ಅವಿರೋಧ ಆಯ್ಕೆ ಯಾಗಿದ್ದಾರೆ.
 ಸೋಮವಾರ ನಿರ್ದೇಶಕರ ಸ್ಥಾನಕ್ಕೆ ಚುನಾವಣೆಯಲ್ಲಿ 14 ಸ್ಥಾನಗಳ ಪೈಕಿ 13 ಸ್ಥಾನಗಳಿಗೆ ಆಯ್ಕೆ ನಡೆದಿತ್ತು. 1 ಸ್ಥಾನದಲ್ಲಿ ಚನ್ನಗಿರಿಯಿಂದ ಎಚ್.ಕೆ.ಬಸಪ್ಪ ಅವಿರೋಧ ಆಯ್ಕೆಯಾಗಿದ್ದಾರೆ. ತೀರ್ಥಹಳ್ಳಿಯಲ್ಲಿ ಟಿ.ಎ.ಚಂದ್ರಶೇಖರ್, ಭದ್ರಾವತಿಯಿಂದ ದಾದೇಗೌಡ, ಸೊರಬದಿಂದ ಎನ್.ಶ್ರೀಪಾದ ರಾವ್, ಹೊಸನಗರದಿಂದ ವಿದ್ಯಾಧರ, ಶಿಕಾರಿಪುರದಿಂದ ಟಿ.ಶಿವಶಂಕರ್, ಹೊನ್ನಾಳಿ ತಾಲೂಕಿನಿಂದ ಷಣ್ಮುಖ, ದಾವಣಗೆರೆಯಿಂದ ಎಚ್.ಕೆ.ಪಾಲಾಕ್ಷಪ್ಪ, ಹರಿಹರದಿಂದ ಜಗದೀಶಪ್ಪ ಬಣಕಾರ, ಜಗಳೂರು ಉಪವಿಭಾಗದಿಂದ ಆರ್.ಹನುಮಂತಪ್ಪ, ಹೊಳಲ್ಕೆರೆಯಿಂದ ಎಂ.ಆರ್.ಮಹೇಶ್ವರಪ್ಪ, ಹೊಸದುರ್ಗದಿಂದ ಎಚ್.ಸಿ. ನಾಗರಾಜಪ್ಪ, ಚಿತ್ರದುರ್ಗದಿಂದ ತಿಪ್ಪೇಸ್ವಾಮಿ ಗೆಲುವು ಸಾಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement