ಕಲ್ಯಾಣ ಮಂಟಪದ ಸೆಂಟ್ರಿಂಗ್ ಕುಸಿತ: ಹಾಲಪ್ಪ ಆಕ್ರೋಶ
ಸೊರಬ: ಸಧ್ಯದಲ್ಲಿಯೇ ಸಾರ್ವಜನಿಕ ಉಪಯೋಗಕ್ಕೆ ಅರ್ಪಣೆ ಆಗಬೇಕಿದ್ದ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ನಿರ್ಮಾಣ ಆಗುತ್ತಿರುವ ಕಲ್ಯಾಣ ಮಂಟಪದ ಮೇಲ್ಛಾವಣಿಗೆ ಹಾಕಿರುವ ಸೆಂಟ್ರಿಂಗ್ ಸೋಮವಾರ ಕುಸಿದಿದೆ. ಅಲ್ಲದೆ, ಕಳಪೆ ಕಾಮಗಾರಿಗೆ ಮಾಜಿ ಸಚಿವ ಎಚ್. ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರ ಅವರು, ಕಟ್ಟಡದ ಈ ಸ್ಥಿತಿಗೆ ಲೋಕೋಪಯೋಗಿ ಅಭಿಯಂತರರು, ಮುಜರಾಯಿ ಅಧಿಕಾರಿಗಳು ಹಾಗೂ ಈಗಿನ ಸ್ಥಳೀಯ ಶಾಸಕರೇ ಕಾರಣ ಎಂದು ಹರಿಹಾಯ್ದರು.
ಕಳೆದ 25-30 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಲ್ಯಾಣ ಮಂಟಪವನ್ನು ತಾವು ಸಚಿವರಾಗಿದ್ದ ಸಂದರ್ಭದಲ್ಲಿ ಸರ್ಕಾರದಿಂದ 1 ಕೋಟಿ ಬಿಡುಗಡೆ ಮಾಡಿಸಿ, ಹಳೆಯ ಕಟ್ಟಡವನ್ನು ಸಂಪೂರ್ಣ ತೆಗೆದುಹಾಕಿ ಹೊಸದಾಗಿ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಒಂದು ಹಂತದ ಕಾಮಗಾರಿ ಪೂರ್ಣಗೊಂಡಿದೆ. ಮೊದಲ ಮಹಡಿಗೆ ಆರ್ಸಿಸಿ ಹಾಕಲಾಗಿದೆ. ಆದರೆ, ಗುತ್ತಿಗೆದಾರರು ಗುಣಮಟ್ಟದ ಪರಿಕರಗಳನ್ನು ಬಳಸದೇ ಇರುವುದರಿಂದ ಕಟ್ಟಡ ಕಳಪೆಯಾಗಿದೆ. ಕಾಮಗಾರಿ ನಡೆಯುವ ಸಂದರ್ಭ ಪಿ.ಡಬ್ಲ್ಯೂ.ಡಿ. ಎಂಜಿನಿಯರ್, ಮುಜರಾಯಿ ಅಧಿಕಾರಿಗಳಾದ ತಹಸೀಲ್ದಾರ್ ಹಾಗೂ ಶಾಸಕರು ಭೇಟಿ ನೀಡದ ಕಾರಣ ಕಟ್ಟಡ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ. ಕುಸಿದ ಆರ್ಸಿಸಿಯಲ್ಲಿರುವ ಕಬ್ಬಿಣವನ್ನು ಪುನಃ ಬಳಸಲು ಸಿದ್ಧತೆ ನಡೆಯುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಕಟ್ಟಡಕ್ಕೆ ಅಪಾಯವಿದೆ. ಮುಂದಾಗುವ ಅನಾಹುತಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರು ಜವಾಬ್ದಾರಿ ಆಗುತ್ತಾರೆ ಎಂದು ಎಚ್ಚರಿಸಿದರು.
ಆರ್ಸಿಸಿ ಕುಸಿದು ಒಂದು ದಿನ ಕಳೆದರೂ ಎಂಜಿನಿಯರ್, ತಹಶೀಲ್ದಾರ್ ಹಾಗೂ ಶಾಸಕರು ಇತ್ತ ಕಡೆ ತಲೆಹಾಕಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದವರು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ತಾಲೂಕಿನ ಆಡಳಿತ ಸಂಪೂರ್ಣ ಹದಗೆಟ್ಟಿದೆ. ಸರ್ಕಾರದ ಕಲ್ಯಾಣ ಮಂದಿರ ಸಾರ್ವಜನಿಕರ ಸ್ವತ್ತು. ನೂರಾರು ವರ್ಷ ಬಾಳಬೇಕು. ಆದ್ದರಿಂದ ಕುಸಿದು ಬಿದ್ದ ಮೇಲ್ಛಾವಣಿಯ ಕಾಮಗಾರಿ ಕೂಡಲೇ ಹೊಸದಾಗಿ ನಡೆಯಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ತಿಪ್ಪೂರಾವ್ ಮಾತನಾಡಿ, ಘಟನೆಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನು ತರಿಸಿಕೊಂಡು ಪರಿಶೀಲಿಸಲಾಗುವುದು. ಲೋಪಕ್ಕೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ, ಕ್ರಮ ಕೈಗೊಳ್ಳಲಾಗುವುದು. ಘಟನೆ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು.
ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಡಿ.ಶಿವಯೋಗಿ, ಮಾಜಿ ಎಪಿಎಂಸಿ ಅಧ್ಯಕ್ಷ ಗಜಾನನರಾವ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೀರ್ತಿಗೌಡ, ಚಂದ್ರಪ್ಪ, ನಾಗರಾಜ, ಗುರುಸ್ವಾಮಿ, ರೇವಣಕುಮಾರ್ ಹಾಜರಿದ್ದರು.