ಬಾಕಿ ಯುಜಿಸಿ, ತುಟ್ಟಿಭತ್ಯೆ ಹಣ ಬಿಡುಗಡೆಗೆ ಆಗ್ರಹ
ಶಿವಮೊಗ್ಗ: ರಾಜ್ಯದ ಅನುದಾನಿತ ಪದವಿ ಕಾಲೇಜುಗಳ ಅಧ್ಯಾಪಕರಿಗೆ ಯುಜಿಸಿ ಬಾಕಿ ವೇತನ, ತುಟ್ಟಿಭತ್ಯೆ ಬಾಕಿ ಹಣವನ್ನು ತಕ್ಷಣ ಬಿಡುಗಡೆ, ಖಾಲಿ ಬಿದ್ದಿರುವ ಮಂಜೂರಾತಿ ಹುದ್ದೆಗಳನ್ನು ಭರ್ತಿ ಮಾಡಲು ಆಡಳಿತ ಮಂಡಳಿಗೆ ಅನುಮತಿ ನೀಡುವಂತೆ ಒತ್ತಾಯಿಸಿ ಕುವೆಂಪು ವಿಶ್ವವಿದ್ಯಾಲಯ ಅನುದಾನಿತ ಕಾಲೇಜು ಉಪನ್ಯಾಸಕರ ಸಂಘದ ನಿಯೋಗ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹಾಗೂ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದೆ.
2016ಕ್ಕೆ ಹೊಸ ಯುಜಿಸಿ ಪರಿಷ್ಕೃತ ವೇತನ ಜಾರಿ ಆಗುವ ಸಮಯ ಬಂದಿದೆ. ಆದ್ದರಿಂದ ಯುಜಿಸಿ ಬಾಕಿವೇತನ ಬಿಡುಗಡೆಗೆ ಕ್ರಮಕೈಗೊಳ್ಳಬೇಕು. ಇಷ್ಟೇ ಅಲ್ಲದೆ ತುಟ್ಟಿ ಭತ್ಯೆಯ ಬಾಕಿ ವೇತನವೂ ಇನ್ನೂ ಬಂದಿರುವುದಿಲ್ಲ. ಇದರ ಬಿಡುಗಡೆಗೂ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನಿಯೋಗದಲ್ಲಿದ್ದ ಪದಾಧಿಕಾರಿಗಳು ಒತ್ತಾಯಿಸಿದರು.
1986ರಿಂದಲೂ ಅನುದಾನಿತ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಅಧ್ಯಾಪಕ, ಅಧ್ಯಾಪಕೇತರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿಲ್ಲ. ಖಾಲಿ ಹುದ್ದೆಗಳ ಭರ್ತಿಗೂ ಅನುಮತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಕುವೆಂಪು ವಿ.ವಿ. ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಡಿ.ಜಿ. ರಮೇಶ್, ಉಪಾಧ್ಯಕ್ಷ ಡಾ. ಬಾಲಕೃಷ್ಣ ಹೆಗಡೆ, ಪ್ರೊ. ವೀರೇಶ್, ಕಾರ್ಯದರ್ಶಿ ಪ್ರೊ. ಕೆ.ಆರ್. ಪ್ರಭಾಕರ, ಸಹ ಕಾರ್ಯದರ್ಶಿ ಪ್ರೊ. ಎಚ್.ಎಂ. ಸುರೇಶ್, ಖಜಾಂಚಿ ಪ್ರೊ. ಅಂಜನಪ್ಪ, ನಿರ್ದೇಶಕ ಪ್ರೊ. ರಾಮಪ್ಪಗೌಡ, ಪ್ರೊ.ದಯಾನಂದ, ಪ್ರೊ. ವಿ. ಉಮೇಶ್, ಪ್ರೊ. ಪಿ.ಎಂ. ಸಚ್ಚಿದಾನಂದಸ್ವಾಮಿ, ಪ್ರೊ. ಎಂ.ಎಸ್. ನಾಗರಾಜರಾವ್, ಪ್ರೊ. ಜಗದೀಶ್ ಮೊದಲಾದವರು ನಿಯೋಗದಲ್ಲಿದ್ದರು.
ಬಾಲಕ ನೀರುಪಾಲು
ಸೊರಬ: ಪಟ್ಟಣದ ದಂಡಾವತಿ ನದಿಯಲ್ಲಿ ಮಂಗಳವಾರ ಸಂಜೆ ಮೀನು ಹಿಡಿಯಲು ಹೋದ ಬಾಲಕನೊಬ್ಬ ಅಸುನೀಗಿದ್ದಾನೆ. ಇಲ್ಲಿನ ರಾಜೀವನಗರದ ಪರಶುರಾಮ (17) ಮೀನುಹಿಡಿಯಲು ಹೋದಾಗ ಈ ಅವಘಡ ಸಂಭವಿಸಿದೆ. ಮೀನು ಹಿಡಿಯಲು ಹೋದಾಗ ಮುಗ್ಗರಿಸಿದ್ದು ಮೇಲೇಳಲಾಗಿಲ್ಲ ಎಂದು ತಿಳಿದು ಬಂದಿದೆ. ರಾತ್ರಿ ಶವ ಪತ್ತೆಯಾಗಿದೆ, ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಡಾನೆ ದಾಳಿಗೆ ವ್ಯಕ್ತಿ ಬಲಿ
ಶಿವಮೊಗ್ಗ/ಭದ್ರಾವತಿ: ವ್ಯಕ್ತಿಯೊಬ್ಬರನ್ನು ಕಾಡಾನೆ ಹೊಸಕಿ ಸಾಯಿಸಿದ ಘಟನೆ ಹೊಳಹೊನ್ನೂರು ಸಮೀಪದ ಕೋಡಿಹೊಸೂರು ಬಳಿ ನಡೆದಿದೆ.
ಆನೆಯ ದಾಳಿಯಿಂದ ಝರ್ಜರಿತರಾಗಿ ಮೃತಪಟ್ಟವರು ದಾನವಾಡಿ ಗ್ರಾಮದವ ರುದ್ರೇಶ್ (45). ರುದ್ರೇಶ್ ತಮ್ಮ ಸಹೋದರ ಪುಟ್ಟಪ್ಪನೊಂದಿಗೆ ಕೋಡಿಹೊಸೂರಿನಲ್ಲಿರುವ ಸಹೋದರಿಯ ತೋಟವನ್ನು ಕಾಯಲು ತೆರಳಿದ್ದರು.
ತೋಟಕ್ಕೆ ಕಾಡೆಮ್ಮೆಗಳು ಹಾವಳಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಕಾವಲಿಗೆಂದು ಅಲ್ಲಿ ಬೀಡು ಬಿಟ್ಟಿದ್ದರು. ಪುಟ್ಟಪ್ಪ ತೋಟದಲ್ಲಿನ ಮನೆಯಲ್ಲಿ ಮಲಗಿದ್ದರೆ, ರುದ್ರೇಶ್ ಮನೆ ಹೊರಗೆ ಮಲಗಿದ್ದರು. ರಾತ್ರಿ ವೇಳೆ ತೋಟಕ್ಕೆ ದಾಳಿ ಇಟ್ಟಿರುವ ಆನೆಯು ಅಲ್ಲಿನ ಬಾಳೆ ಹಾಗೂ ಅಡಕೆ ಗಿಡಗಳನ್ನು ನಾಶಪಡಿಸಿದೆ. ಈ ಸಂದರ್ಭದಲ್ಲಿ ಎಚ್ಚರಗೊಂಡ ರುದ್ರೇಶ್ ಬ್ಯಾಟರಿ ಬಿಟ್ಟು ಕಾಡಾನೆ ಇರಬಹುದೆಂದು ಮುಂದಡಿ ಇಟ್ಟಿದ್ದಾರೆ. ಈ ಸಂದರ್ಭ ಆನೆ ಏಕಾಏಕಿ ದಾಳಿ ನಡೆಸಿದ್ದು, ಮಂಗಳವಾರ ಮುಂಜಾನೆ ಘಟನೆ ಸಂಭವಿಸಿದ್ದು, ಎಚ್ಚರಗೊಂಡ ಪುಟ್ಟಪ್ಪ ಸ್ಥಳಕ್ಕೆ ಹೋಗಿ ನೋಡಿದಾಗ ರುದ್ರೇಶ್ ಇನ್ನೂ ಜೀವಂತ ಇರುವುದು ಗೊತ್ತಾಗಿದೆ. ಕೂಡಲೇ ಗಾಯಾಳು ರುದ್ರೇಶ್ನನ್ನು ಭದ್ರಾವತಿ ಆಸ್ಪತ್ರೆಗೆ ಹಾಗೂ ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಅವರು ಸಾವನ್ನಪ್ಪಿದ್ದಾರೆ.
ಸಿಂಡಿಕೇಟ್ ಬ್ಯಾಂಕ್ ಗ್ರಾಹಕರ ಸಭೆ
ಹೊಸನಗರ: ರಾಷ್ಟ್ರೀಕೃತ ಬ್ಯಾಂಕಿನ ಸೇವಾ ಸೌಲಭ್ಯದ ಬಗ್ಗೆ ಮತ್ತು ಬಡರೈತ ಕೂಲಿಕಾರ್ಮಿಕರು ಬ್ಯಾಂಕ್ಅನ್ನು ಬಳಸಿಕೊಳ್ಳುವ ಸಲುವಾಗಿ ಅಗತ್ಯ ಮಾಹಿತಿ ನೀಡಬೇಕು ಎಂದು ಗ್ರಾಹಕ ದೇವಗಂಗೆ ಶಿವರಾಮ ಮನವಿ ಮಾಡಿದರು.
ತಾಲೂಕಿನ ನಗರದಲ್ಲಿ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರ ಸಭೆಯಲ್ಲಿ ಮಾತನಾಡಿ, ಯಾವುದೇ ಬ್ಯಾಂಕ್ ಕಾಳಜಿಯುಕ್ತ ಸೇವೆ ನೀಡಿದರೆ ಇಡೀ ಗ್ರಾಮವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯ ಎಂದರು.
ಮುಖ್ಯ ಅತಿಥಿ ದೇವಗಂಗೆ ಚಂದ್ರಶೇಖರ ಶೆಟ್ಟಿ, ಸಾಕಷ್ಟು ಬಡರೈತರು ಮತ್ತು ಕೂಲಿಕಾರ್ಮಿಕರು ಸಾಲ ಕಟ್ಟಲಾಗದೆ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ. ಒನ್ ಟೈಂ ಸೆಟ್ಲಮೆಂಟ್ ಆಧಾರದಲ್ಲಿ ಅವರಿಗೆ ಸೂಕ್ತ ರಿಯಾಯಿತಿ ನೀಡಿ ಮತ್ತೆ ಬ್ಯಾಂಕ್ ವ್ಯವಹಾರಕ್ಕೆ ಅನುವು ಮಾಡಿಕೊಡಬೇಕು. ಈ ಸಮಸ್ಯೆ ಬಗ್ಗೆ ಬ್ಯಾಂಕಿನ ಉನ್ನತಾಧಿಕಾರಿಗಳಲ್ಲಿ ತಿಳಿಸಿ ಪರಿಹಾರಕ್ಕೆ ಯತ್ನಿಸುವಂತೆ ಮನವಿ ಮಾಡಿದರು.
ಸಿಂಡಿಕೇಟ್ ಬ್ಯಾಂಕಿನ ಸಹಾಯಕ ಪ್ರಬಂಧಕ ಅಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಗಣಪತಿ, ಗ್ರಾಪಂ ಸದಸ್ಯ ನಾಗೇಶ್, ಶಂಕಣ್ಣ ಚಿಕ್ಕಪೇಟೆ, ರಮಾನಂದ್, ಸ್ವಸಹಾಯ ಸಂಘದ ಸದಸ್ಯರು ಇದ್ದರು. ಬ್ಯಾಂಕಿನ ಶ್ರೀನಿವಾಸ್ ನಿರೂಪಿಸಿದರು. ಸುಲತಾ ಬ್ಯಾಂಕಿನ ಸೌಲಭ್ಯದ ಬಗ್ಗೆ ಮಾಹಿತಿ ನೀಡುವುದರ ಜತೆಗೆ ವಂದಿಸಿದರು.
ಅನುದಾನ ದುರ್ಬಳಕೆ: ದಸಂಸ ಪ್ರತಿಭಟನೆ
ಸಾಗರ: ತಾಲೂಕಿನ ತುಮರಿ ಗ್ರಾಮ ಪಂಚಾಯ್ತಿಯಲ್ಲಿ ದಲಿತ ವಿರೊಧಿ ನೀತಿ ಅನುಸರಿಸುತ್ತಿದ್ದು ಪಂಚಾಯತ್ರಾಜ್ ನಿಯಮಾವಳಿ ಮೀರಿ ಅನುದಾನ ದುರ್ಬಳಕೆ ಮಾಡಿರುವುದು ಸಾಬೀತಾಗಿರುವುದರಿಂದ ಪಂಚಾಯ್ತಿಯನ್ನು ಸೂಪರ್ಸೀಡ್ ಮಾಡಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳು ಸೋಮವಾರ ಪಂಚಾಯ್ತಿ ಎದುರು ದಿಢೀರ್ ಪ್ರತಿಭಟನೆ ನಡೆಸಿದವು.
ಪಂಚಾಯ್ತಿಯಲ್ಲಿ ಪರಿಶಿಷ್ಟ ಜಾತಿ ಪಂಗಡಗಳಿಗೆ ಮೀಸಲಿಟ್ಟ ಹಣವನ್ನು ಸಮುದಾಯದ ಅಭಿವೃದ್ದಿಗೆ ಬಳಸದೆ ಲೋಪವೆಸಗಲಾಗಿದೆ. ಅಭಿವೃದ್ದಿ ಅನುದಾನದಲ್ಲಿ 2.70 ಲಕ್ಷ ಹಣವನ್ನು ಕಾಮಗಾರಿ ನಡೆಸದೆ ಹಣ ಪಾವತಿಸಲಾಗಿದೆ.
ಈ ಬಗ್ಗೆ ಪ್ರಶ್ನಿಸಿದ ದಲಿತ ಸಮುದಾಯದ ಯುವಕರಿಗೆ ಕಿರುಕುಳ ಕೊಡಲಾಗುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಪಂಚಾಯ್ತಿ ವ್ಯಾಪ್ತಿಯ ಸಿಗಂದೂರು ದಲಿತ ಕಾಲೋನಿಯಲ್ಲಿ ಕುಡಿಯುವ ನೀರಿನ ಕೊರತೆಯಾಗಿದೆ. ಆದರೆ ಪಂಚಾಯ್ತಿ ಕಡತದಲ್ಲಿ ಕೇರಿಗೆ 50 ಸಾವಿರ ಪೈಪು ಖರೀದಿಸಿದ ಬಗ್ಗೆ ದಾಖಲಾಗಿದೆ. ಈ ಭಾಗದ ಸದಸ್ಯರೊಬ್ಬರ ಮನೆಯಲ್ಲಿ ಪೈಪ್ ಇಟ್ಟರೆ ಕೇರಿಗೆ ನೀರು ಬರುವುದು ಹೇಗೆ ಎಂದು ಮುಖಂಡರು ಪ್ರಶ್ನಿಸಿದರು.
ದಲಿತ ಸಂಘರ್ಷ ಸಮಿತಿ ತುಮರಿ ಮತ್ತು ಕರೂರು ಹೋಬಳಿ ಗಿರಿಜನ ಕ್ಷೇಮ ಸಂಘದ ಪದಾಧಿಕಾರಿಗಳಾದ ತಿಮ್ಮಪ್ಪ ಹೊನಗೋಡು, ಚೌಡಪ್ಪ, ಚಂದ್ರು, ಶ್ರೀಧರ ಕೆರೆಮಕ್ಕಿ. ಗಣಪತಿ, ರಾಘವೇಂದ್ರ, ಗೋಪಾಲ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.