ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಲೆನಾಡ ಶಾಲೆಗೆ ಮಳೆಗಾಲ ಆತಂಕ

Vishwanath S
Updated On : 28 May 2014, 12:11 pm

ಶಿವಮೊಗ್ಗ: ಮಳೆಗಾಲ ಎದುರುಗೊಳ್ಳಲು ಮಲೆನಾಡು ಸಜ್ಜಾಗುತ್ತಿದೆ. ಈ ನಡುವೆಯೇ ಮಲೆನಾಡಿನ ಸರ್ಕಾರಿ ಶಾಲೆಗಳನ್ನು ಮಳೆಗಾಲದಲ್ಲಿ ಹೇಗೆ ಕಾಪಾಡಿಕೊಳ್ಳುವುದೆಂಬ ವಿಚಾರದಲ್ಲಿ ಜಿಲ್ಲೆಯ ಸರ್ಕಾರಿ ಯಂತ್ರ ತಲೆಮೇಲೆ ಕೈಗೊತ್ತು ಕುಳಿತಿದೆ.
ಕಾರಣವಿಷ್ಟೆ, ಬಿಟ್ಟೂ ಬಿಡದಂತೆ ಸುರಿಯುವ ಮಳೆಯಲ್ಲಿ ಶಾಲಾ ಮಕ್ಕಳನ್ನು ಶಾಲಾ ಕೊಠಡಿಯೊಳಗೆ ರಕ್ಷಿಸುವುದೂ ಸಹ ಕಷ್ಟವೆಂಬ ಪರಿಸ್ಥಿತಿ ಜಿಲ್ಲೆಯ ನೂರಾರು ಶಾಲೆಗಳಲ್ಲಿದೆ. ಮೇಲ್ಛಾವಣಿ ಸುಸ್ಥಿತಿಯಲ್ಲಿರದ ಕಾರಣ ಮಳೆ ನೀರು ನೇರವಾಗಿ ಕೊಠಡಿಯೊಳಗೆ ಸುರಿಯುತ್ತದೆ. ಹೀಗಾಗಿ ಮಕ್ಕಳನ್ನು ರಕ್ಷಿಸುವುದು ಶಿಕ್ಷಕರಿಗೂ ಒಂದು ಸವಾಲು.
ಈ ಶಾಲೆಗೆ 114 ವರ್ಷ: ಶಿವಮೊಗ್ಗ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾದ ಅನೇಕ ಶಾಲೆಗಳಿವೆ. ಈ ಪೈಕಿ 1902ರಲ್ಲಿ ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯೂ ಸೋರುವ ಶಾಲೆಗಳ ಪಟ್ಟಿಯಲ್ಲಿದೆ. 50 ವರ್ಷ ಕಳೆದ ಅನೇಕ ಶಾಲೆಗಳು ಆಗಿಂದಾಗೆ ರಿಪೇರಿ ಕಂಡಿವೆ. ಆದರೂ ಮಳೆಗಾಲದ ಅಬ್ಬರಕ್ಕೆ ಮತ್ತು ನಿರ್ವಹಣೆ ಕೊರತೆಯಿಂದ ಪರಿಸ್ಥಿತಿ ಪ್ರತಿಕೂಲವಾಗಿದೆ. ಇಂತಹ ಕಡೆ ಮಳೆ ಬಂದರೆ ಮಕ್ಕಳಿಗೆ ಮಳೆನೀರ ಅಭಿಷೇಕವೇ ಸರಿ. ಅನೇಕ ಕಟ್ಟಡಗಳು ಭದ್ರವಾಗಿದ್ದರೂ ಮೇಲ್ಛಾವಣಿ ಮಾತ್ರ ಹಾಳಾಗಿದೆ.
1980ಕ್ಕಿಂತ ಹಿಂದಿರುವ ಬಹುತೇಕ ಶಾಲೆಗಳ ಮೇಲ್ಚಾವಣಿಗೆ ಹೆಂಚು ಬಳಸಲಾಗಿದೆ. ಶಾಲೆಗಳ ಆಕಾರಗಳು ಈಗಿನ ರೀತಿ ಇಲ್ಲವಾಗಿದೆ. ಶಾಲೆಯ ಮೇಲ್ಚಾವಣಿಗೆ ಉದ್ದುದ್ದ ರೀಪರ್‌ಗಳನ್ನು ಬಳಸಲಾಗಿದೆ. ಎರಡು ಮೂರು ಕೊಠಡಿಗೆ ಒಂದೊಂದು ರೀಪರ್‌ಗಳನ್ನು ಬಳಸಲಾಗಿದೆ. ಹೀಗಾಗಿ ಯಾವ ಕೊಠಡಿಯ ಮೇಲ್ಚಾವಣಿ ಶಿಥಿಲವಾಗಿದೆಯೋ ಅದನ್ನು ತೆಗೆದು ಬೇರೆ ಮಾಡಲು ಬರುವುದಿಲ್ಲ. ಎರಡು ಮೂರು ಕೊಠಡಿಯ ಮೇಲ್ಚಾವಣಿ ಬದಲು ಮಾಡಬೇಕಾಗುತ್ತದೆ. ಹೀಗಾಗಿ ಸಮಸ್ಯೆ ಎಂಬುದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ಸೆಂಥಿಲ್ ಅವರ ವಿವರಣೆ.
ಹೆಂಚು ಬಳಕೆ ಅನಿವಾರ್ಯ: ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣಗೊಂಡ ಶಾಲೆಗಳು ಆರ್‌ಸಿಸಿ ಹೊಂದಿವೆ. ಆದರೆ, ಕೋರ್‌ಮಲೆನಾಡು ಭಾಗದಲ್ಲಿ ಆರ್‌ಸಿಸಿ ರೂಫಿಂಗ್ ತಡೆದುಕೊಳ್ಳುವುದಿಲ್ಲ. ಅಲ್ಲಿಗೆ ಹೆಂಚು ಬಳಕೆ ಅನಿವಾರ್ಯ. ಅತಿ ಹಿಂದಿನ ಶಾಲೆಗಳ ಮೇಲ್ಚಾವಣಿ ಬದಲಿಸುವುದು ಒಂದು ರೀತಿಯ ಸವಾಲಿನ ಕೆಲಸವೇ ಸರಿ ಎಂದು ಅವರು ಹೇಳುತ್ತಾರೆ.
ಸದ್ಯ ಪ್ರತಿ ಶಾಲೆಯ ನಿರ್ವಹಣೆಗೆಂದು 25-30 ಸಾವಿರ ರುಪಾಯಿ ಸರ್ಕಾರದಿಂದ ಬಿಡುಗಡೆಯಾಗುತ್ತಿದೆ. ಇದು ಮಲೆನಾಡಿನ ಶಾಲೆಯ ಮೇಲ್ಚಾವಣಿ ರಿಪೇರಿಗೆ ಸಾಕಾಗುವುದಿಲ್ಲ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ತಿಳಿಸುತ್ತಾರೆ. ಒಂದು ಕೊಠಡಿಯ ಚಾವಣಿಯನ್ನಷ್ಟೇ ಬದಲಿಸಲು ಬಾರದ ಸ್ಥಿತಿಯಲ್ಲಿರುವುದರಿಂದ 2-3 ಕೊಠಡಿ ಒಟ್ಟಿಗೆ ಮೇಲ್ಚಾವಣಿ ಬದಲಿಸಬೇಕು. ಇಲ್ಲಿಗೆ ಕಬ್ಬಿಣದ ಆಂಗ್ಯುಲರ್ ಬಳಸಿ ಹೆಂಚು ಹಾಕಿ ಬಳಸಲು ಹೆಚ್ಚಿನ ಅನುದಾನ ಬೇಕಾಗುತ್ತದೆ ಎಂದು ವಿವರಿಸುತ್ತಾರೆ.
ಶೀಟ್ ಹಾಕಿ ಕಟ್ಟಡ ರಕ್ಷಣೆ: ಮಲೆನಾಡು ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಟ್ಟಲ್ಪಟ್ಟ ಆರ್‌ಸಿಸಿ ರೂಫಿಂಗ್ ಇರುವ ಶಾಲೆಗಳೂ ಮಳೆಗಾಲದಲ್ಲಿ ಸೋರುತ್ತಿದ್ದು, ಇಂತಹ ಶಾಲೆ ಕಟ್ಟಡದ ಮೇಲೆ ಆಂಗ್ಯುಲರ್ ಬಳಸಿ ಶೀಟ್ ಹಾಕಿ ಕಟ್ಟಡ ರಕ್ಷಿಸುವ ಜೊತೆಗೆ ಸಭಾಂಗಣ ಮಾದರಿಯಲ್ಲಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ಸಿಸಿಕಾಂತ್ ಸೆಂಥಿಲ್ ತಿಳಿಸಿದರು.
ಮಲೆನಾಡಿನ ಮೇಲ್ಚಾವಣಿ ದುರಸ್ತಿಯಿಂದ ಸೋರುವ ಶಾಲೆಗಳ ಪಟ್ಟಿ ಮಾಡಿರುವ ಜಿಲ್ಲಾ ಪಂಚಾಯಿತಿಯು 72 ಶಾಲೆಗಳನ್ನು ಗುರುತಿಸಿದ್ದು, ಇಲ್ಲಿ 120 ಕೋಟಡಿಗಳು ಮಳೆಗಾಲದಲ್ಲಿ ಬಳಕೆಗೆ ಬರುವುದಿಲ್ಲ ಎಂದು ಹೇಳಲಾಗಿದೆ.
ಇವುಗಳ ಮುಂದಿನ ಗತಿಯೇನು ಎಂದು ಜಿಪಂ ಸಿಇಓ ಅವರನ್ನು ಪ್ರಶ್ನಿಸಿದರೆ, ಈಗಾಗಲೇ ಸರ್ಕಾರಕ್ಕೆ ಅನುದಾನ ಅಪೇಕ್ಷಿಸಿ ಪತ್ರ ಬರೆಯಲಾಗಿದೆ. ಸಾಮಾನ್ಯ ನಿರ್ವಹಣೆಗೆ ಕೊಡುವ ಹಣ ಸಾಕಾಗದ ಕಾರಣ ಹೆಚ್ಚಿನ ಹಣ ಒಂದು ಬಾರಿ ಪ್ಯಾಕೇಜಜ್ಮಾದರಿಯಲ್ಲಿ ಕೊಡುವಂತೆ ಕೋರಲಾಗಿದೆ. ಸರ್ಕಾರದಿಂದ ಉತ್ತರದ ನಿರೀಕ್ಷೆಯಲ್ಲಿದ್ದೇವೆ ಎಂದರು.

-ವಿಶೇಷ ವರದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement