ಹೃದಯ ರೋಗ ತಪಾಸಣಾ ಶಿಬಿರ
ಹೊಸನಗರ: ಎಪಿಎಂಸಿ ಸದಸ್ಯರಾಗಿದ್ದ ರಾಮಯ್ಯ ಸ್ಮರಣಾರ್ಥ ನಗರ ಚೇತನ ಬಳಗದ ವತಿಯಿಂದ ಉಚಿತವಾಗಿ ಹೃದಯ ಸಂಬಂಧಿ ರೋಗದ ತಪಾಸಣಾ ಶಿಬಿರ ಹಮ್ಮಿಕೊಂಡಿತ್ತು.
ನಗರ ಸಂಯುಕ್ತ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಡೆದ ಶಿಬಿರದಲ್ಲಿ ಮಂಗಳೂರು ಇಂಡಿಯನ್ ಆಸ್ಪತ್ರೆಯ ಖ್ಯಾತ ವೈದ್ಯರು ಶಿಬಿರಾರ್ಥಿಗಳ ಹೃದಯ ತಪಾಸಣೆ ಕೈಗೊಂಡರು. ಸುಮಾರು 200ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದು, ಅದರಲ್ಲಿ ಮುಂದಿನ ಚಿಕಿತ್ಸೆಗಾಗಿ 30 ಶಿಬಿರಾರ್ಥಿಗಳನ್ನು ಗುರುತಿಸಲಾಯಿತು.
ಮೌನಾಚರಣೆ: ಇದಕ್ಕೂ ಮುಂಚಿತವಾಗಿ ಅಗಲಿದ ರಾಮಯ್ಯರಿಗೆ 1 ನಿಮಿಷ ಮೌನಾಚರಣೆ ಮಾಡುವುದರ ಮೂಲಕ ಗೌರವಾರ್ಪಣೆ ಸಲ್ಲಿಸಲಾಯಿತು.
ನಂತರ ಮಾತನಾಡಿದ ಚೇತನ ಬಳಗದ ನಿರ್ದೇಶಕ ವಿಕ್ರಮ್, ಬಡವರು, ಕೂಲಿಕಾರ್ಮಿಕರ ಆರೋಗ್ಯ ಸಮಸ್ಯೆಗೆ ತುರ್ತಾಗಿ ಸ್ಪಂದಿಸುತ್ತಿದ್ದ ರಾಮಯ್ಯ ಸ್ಮರಣಾರ್ಥವಾಗಿ ಶಿಬಿರ ಆಯೋಜಿಸಲಾಗಿತ್ತು. ಜನೋಪಯೋಗಿ ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ಎಲ್ಲರೂ ಪಡೆಯಲು ಮುಂದಾಗಬೇಕು ಎಂದರು.
ಬಸ್ ವ್ಯವಸ್ಥೆ: ಮುಂದಿನ ಚಿಕಿತ್ಸೆಗೆ ಗುರುತಿಸಲಾದ 30 ಜನರಿಗೆ ಮಂಗಳೂರು ಇಂಡಿಯನ್ ಆಸ್ಪತ್ರೆಗೆ ಹೋಗಿಬರಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿದ್ದು, ಮೇ 30 ಭಾನುವಾರ ಬೆಳಗ್ಗೆ 10 ಗಂಟೆ ನಗರ ಬಸ್ ನಿಲ್ದಾಣದಿಂದ ಹೊರಡಲಿದೆ. ಶಿಬಿರಾರ್ಥಿಗಳು ಈ ಸೌಲಭ್ಯ ಪಡೆದುಕೊಳ್ಳಲು ವಿಕ್ರಮ್ ಮನವಿ ಮಾಡಿದರು.
ಚೇತನಾ ಬಳಗದ ಅನಂತ ಕಂಚುಗಾರ್ ಅಧ್ಯಕ್ಷತೆ ವಹಿಸಿದ್ದರು.
ಶಿಬಿರದಲ್ಲಿ ಇಂಡಿಯನ್ ಆಸ್ಪತ್ರೆಯ ಡಾ. ನಾಗನಾಥ್, ಡಾ. ಸಫ್ರಾಜ್ ನವಾಜ್, ಡಾ. ತೇಜಸ್ವಿ ನಗರ, ಡಾ. ಯಜ್ಞಶ್ರೀ ನಾಗನಾಥ್, ಚೇತನಾ ಬಳಗದ ನಿರ್ದೇಶಕರಾದ ಅಶೋಕದಾಸ್, ಗುರುರಾಜ್ ಶೇಟ್, ವಿಜಯ ಎಸ್. ಪ್ರಸಾದ್ ವಿ. ಕಿಣಿ, ಪ್ರದೀಪಗೌಡ ಮತ್ತು ಮಂಗಳೂರು ಇಂಡಿಯನ್ ಆಸ್ಪತ್ರೆಯ ಸಿಬ್ಬಂದಿ ಭಾಗವಹಿಸಿದ್ದರು.