ಅಪಘಾತ: ಆಸ್ಪತ್ರೆ ವೆಚ್ಚ ಭರಿಸಲು ಆಗ್ರಹ
ಕ.ಪ್ರ.ವಾರ್ತೆ ಶಿವಮೊಗ್ಗ ಮೇ 30
ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕ ಶಾಲಾ ಮಕ್ಕಳಿಗೆ ಕೊಡಮಾಡುವ ಉಚಿತ ಪಠ್ಯ ಪುಸ್ತಕಗಳನ್ನು ಇಲ್ಲಿನ ಬಿಇಒ ಕಚೇರಿಯಿಂದ ಕೊಂಡೊಯ್ಯುತ್ತಿರುವಾಗ ಮಾರ್ಗ ಮಧ್ಯದಲ್ಲಿ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿರುವ ಅನುದಾನಿತ ಶಾಲೆಯ ಮುಖ್ಯೋಪಾಧ್ಯಾಯರಿಗೆ ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ಸರ್ಕಾರವೇ ಭರಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘ ಮುಖ್ಯಮಂತ್ರಿ ಮತ್ತು ಶಾಲಾ ಶಿಕ್ಷಣ ಸಚಿವರನ್ನು ಆಗ್ರಹಿಸಿದೆ.
ಸಂಘದ ಪದಾಧಿಕಾರಿಗಳು ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಮೂಲಕ ಈ ಆಗ್ರಹವನ್ನು ಮಾಡಿದ್ದು, ಸರ್ಕಾರದ ಖರ್ಚಿನಲ್ಲೇ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಶೈಕ್ಷಣಿಕ ವರ್ಷಾರಂಭದಲ್ಲಿ ಉಚಿತ ಪಠ್ಯ ಪುಸ್ತಕಗಳನ್ನು ಸರಬರಾಜು ಮಾಡಬೇಕೆಂಬ ನಿಯಮವಿದ್ದರೂ ಸಾರ್ವಜನಿಕ ಶಿಕ್ಷಣ ಇಲಾಖೆ ಕೇವಲ ಸರ್ಕಾರಿ ಶಾಲೆಗಳಿಗೆ ಮಾತ್ರ ಪುಸ್ತಕಗಳನ್ನು ಸರಬರಾಜು ಮಾಡುತ್ತಿದೆ. ಪಕ್ಕದಲ್ಲೇ ಅನುದಾನಿತ ಶಾಲೆಗಳಿದ್ದರೂ ಅವುಗಳಿಗೆ ಪುಸ್ತಕ ಸರಬರಾಜು ಮಾಡದೆ ಅಲ್ಲಿನ ಸಿಬ್ಬಂದಿಗಳಿಗೆ ಬಿ.ಇ.ಒ.ಕಚೇರಿಗೇ ಬಂದು ಅವುಗಳನ್ನು ತೆಗೆದುಕೊಂಡು ಹೋಗಲು ಸೂಚಿಸುತ್ತಿರುವುದಾಗಿ ಅನುದಾನಿತ ಶಾಲೆಗಳ ಮುಖ್ಯೋಪಾಧ್ಯಾಯರು ಅಲವತ್ತುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಚಿಕಿತ್ಸೆ ವೆಚ್ಚ ಭರಿಸಲು ಆಗ್ರಹ: ಇಲ್ಲಿಗೆ ಸಮೀಪದ ಕುಂಸಿಯ ನಳಂದಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ ಸಿ.ಎ. ಎಂಬುವವರು ರಜಾ ದಿನವಾದರೂ ಶಾಲಾ ಕೆಲಸಕ್ಕಾಗಿ ಬಿ.ಇ.ಓ.ಕಚೇರಿಗೆ ಬಂದು ಪುಸ್ತಕಗಳನ್ನು ಕೊಂಡೊಯ್ಯುತ್ತಿರುವಾಗ ಬುಧವಾರ ಸಂಜೆ ತ್ಯಾವರೆಕೊಪ್ಪ ಸಿಂಹಧಾಮದ ಬಳಿ ಅಪಘಾತಕ್ಕೀಡಾಗಿ ಇಲ್ಲಿನ ಸಹ್ಯಾದ್ರಿ ನಾರಾಯಣ ಹೃದಯಾಲಯದಲ್ಲಿ ದಾಖಲಾಗಿದ್ದಾರೆ. ಅವರು ಬಲಗಾಲಿನ ಮೂಳೆ ಅಪಘಾತದಿಂದ ತುಂಡಾಗಿದೆ. ಅದರ ಶಸ್ತ್ರಚಿಕಿತ್ಸೆಗೆ ಸುಮಾರು 1ರಿಂದ 1.5 ಲಕ್ಷ ರು.ವೆಚ್ಚ ತಗಲಬಹುದೆಂದು ವೈದ್ಯರು ತಿಳಿಸಿದ್ದಾರೆ. ಈ ವೆಚ್ಚವನ್ನು ಸರ್ಕಾರವೇ ಭರಿಸಿ ಅಪಘಾತಕ್ಕೀಡಾದವರ ಅನುದಾನಿತ ನೌಕರರ ಸಹಾಯಕ್ಕೆ ಬರಬೇಕೆಂದು ಸಂಘ ಆಗ್ರಹಿಸಿದೆ.
ಸಂಘದ ಜಿಲ್ಲಾ ಗೌರವಾಧ್ಯಕ್ಷ ಡಾ.ಬಾಲಕೃಷ್ಣ ಹೆಗಡೆ, ಅಧ್ಯಕ್ಷ ಡಾ.ಕೆ.ಎಚ್.ಕುಮಾರಸ್ವಾಮಿ, ಪದಾಧಿಕಾರಿಗಳಾದ ಶಿವಕುಮಾರ ಎಂ.ಎಲ್., ಅಮೀರ್‌ಜಾನ್, ಶಶಿಕುಮಾರ್, ರಿಯಾಜ್ ಅಹಮ್ಮದ್ ಮೊದಲಾದವರು ನಿಯೋಗದಲ್ಲಿದ್ದರು.