ಕೃಷ್ಣ ದೇಗುಲ ನಿರ್ಮಾಣಕ್ಕೆ ಸಿದ್ಧತೆ
ತೀರ್ಥಹಳ್ಳಿ: ಪೇಟೆ ಮಠದಲ್ಲಿ ಭವ್ಯ ಕೃಷ್ಣದೇಗುಲ ನಿರ್ಮಾಣಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಧರ್ಮಸಾಯಿ ಟ್ರಸ್ಟಿನ ಮಹಾರಾಜ್ ಗಾಂಧಿ ತಿಳಿಸಿದ್ದಾರೆ.
ಇಲ್ಲಿಗೆ ಸಮೀಪದ ಚಕ್ಕೋಡಬೈಲಿನ ಪೇಟೆ ಮಠ ಇತಿಹಾಸ ಪ್ರಸಿದ್ಧವಾಗಿದೆ. ಕೆಳದಿ ನಾಯಕರ ಕಾಲದಲ್ಲಿ ಪ್ರಸಿದ್ಧಿ ಪಡೆದ ಮಠವಾಗಿತ್ತು. ಇದು ಕಾಮಾಕ್ಷಿ ದೇವರ ಕ್ಷೇತ್ರವಾಗಿದ್ದು, ಚಾಮುಂಡಿ ದೇವಿಯ ಕ್ಷೇತ್ರವಾಗಿ ಮುಂದೆ ಪ್ರಸಿದ್ಧಿ ಪಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುಮಾರು 10 ಎಕರೆ ಪ್ರದೇಶದಲ್ಲಿ ಭವ್ಯವಾದ ಶ್ರೀಕೃಷ್ಣ ದೇವರ ದೇವಸ್ಥಾನ ರೂಪುಗೊಳ್ಳಲಿದೆ. ಇದಕ್ಕಾಗಿ 2000 ಕೋಟಿ ವೆಚ್ಚದ ಯೋಜನೆ ಹಾಕಿಕೊಳ್ಳಲಾಗಿದೆ. ಸುಮಾರು 3000 ಅಡಿ ಎತ್ತರದ ವಿಶ್ವದ ಅತಿ ಎತ್ತರದ ದೇವಸ್ಥಾನ ನಿರ್ಮಿಸುವ ಯೋಜನೆ ಇದಾಗಿದೆ. ಗುಜರಾತಿನ ನಿರ್ಮಾಣ ಸಂಸ್ಥೆ ಇದರ ಜವಾಬ್ದಾರಿ ಹೊತ್ತಿದೆ ಎಂದು ತಿಳಿಸಿದರು.
ಸದ್ಯದಲ್ಲೇ ದೇಗುಲ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಸುವ ಉದ್ದೇಶವಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುವುದು. ಇಡೀ ದೇವಸ್ಥಾನದ ಸಮುಚ್ಛಯ ಪೂರ್ಣಗೊಳ್ಳಲು ಈಗಾಗಲೇ ಯೋಜನೆ ಸಿದ್ಧಪಡಿಸಲಾಗಿದೆ. ಸುಮಾರು 10 ವರ್ಷಗಳ ಯೋಜನೆ ಇದಾಗಲಿದೆ. ನಿರ್ಮಾಣದ ಪೂರ್ಣ ವೆಚ್ಚ ಭಕ್ತರ ದೇಣಿಗೆಯಿಂದಲೇ ಭರಿಸಲಾಗುವುದು. ಈಗಾಗಲೇ ಪ್ರಾರಂಭಿಕ ಹಂತವಾಗಿ 2 ಕೋಟಿ ಹಣ ವೆಚ್ಚ ಮಾಡಲಾಗಿದ ಎಂದು ತಿಳಿಸಿದರು.