ತುಂಗೆಯಿಂದ ವಿದ್ಯುತ್: 15 ದಿನದಲ್ಲಿ ಆರಂಭ
ವಿಶೇಷ ವರದಿ
ಶಿವಮೊಗ್ಗ: ಇಷ್ಟು ದಿನಗಳವರೆಗೆ ಹೊಸಪೇಟೆ ಡ್ಯಾಂವರೆಗೆ ಹರಿದು ಹೋಗುತ್ತಿದ್ದ ತುಂಗಾ ಇನ್ನು ಮುಂದೆ ವಿದ್ಯುತ್ ಉತ್ಪಾದನೆಗೆ ಒಡ್ಡಿಕೊಳ್ಳುತ್ತಿದ್ದಾಳೆ. ಗಾಜನೂರು ತುಂಗಾ ಅಣೆಕಟ್ಟಿನ ಮುಂಭಾಗದಲ್ಲಿ ಇನ್ನು 15 ದಿನದಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮಲೆನಾಡಿನಲ್ಲಿ ಬೇಸಿಗೆ ಮಳೆ ನಿರೀಕ್ಷೆಗಿಂತ ಹೆಚ್ಚಿಗೆ ಬೀಳುತ್ತಿದೆ, ಅದೇ ರೀತಿ ಮುಂಗಾರು ನಿರೀಕ್ಷಿತವಾಗಿ ಜೂನ್ ಮೊದಲ ವಾರದಲ್ಲಿ ಆರಂಭವಾದರೆ ಜೂನ್ 15ರ ನಂತರ ಡ್ಯಾಂ ತುಂಬುವ ನಿರೀಕ್ಷೆ ಇದೆ. ಹೀಗಾಗಿ ಒಮ್ಮೆ ಡ್ಯಾಂ ತುಂಬಿದ ನಂತರ ವಿದ್ಯುತ್ ಉತ್ಪಾದನೆ ಆರಂಭಿಸಲಾಗುತ್ತದೆ.
ಯೋಜನೆ ವಿವರ: ಬೆಂಗಳೂರು ಮೂಲದ ಬೃಂದಾವನ ವಿದ್ಯುತ್ ಉತ್ಪಾದನಾ ಕಂಪನಿಯು 120 ಕೋಟಿ ರುಪಾಯಿ ಬಂಡವಾಳ ಹೂಡಿದ್ದು, ಕರ್ನಾಟಕ ನಿರಾವರಿ ನಿಗಮದ ಜಾಗ ಬಳಸಿಕೊಂಡು ಯೋಜನೆ ಕಾರ್ಯಗತ ಮಾಡಿದೆ. ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ (2009ರಲ್ಲಿ) ಈ ಯೋಜನೆಗೆ ಹಸಿರು ನಿಶಾನೆ ಸಿಕ್ಕಿತ್ತು. ನಂತರ ತಾಂತ್ರಿಕ ಕಾರಣಗಳಿಂದ ನಿಧಾನಗತಿಯಲ್ಲಿ ಸಾಗಿದ್ದ ಕಾಮಗಾರಿ ಕೆಲವು ತಿಂಗಳ ಹಿಂದಷ್ಟೆ ಮುಕ್ತಾಯಕಂಡಿತ್ತು.
ಇಲ್ಲಿ ಮೂರು ಯೂನಿಟ್ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತದೆ. 10 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ 2 ಯೂನಿಟ್ ಹಾಗೂ 4 ಮೆಗಾವ್ಯಾಟ್ ಉತ್ಪಾದಿಸುವ ಒಂದು ಯೂನಿಟ್ ಇಲ್ಲಿ ಸ್ಥಾಪಿಸಲಾಗಿದೆ. ಸರ್ಕಾರವು ಬೃಂದಾವನ ಕಂಪನಿಯ ಜೊತೆಗೆ 30 ವರ್ಷಗಳಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಅವಧಿ ಮುಗಿದ ನಂತರ ಸರ್ಕಾರದ ಅಧೀನಕ್ಕೆ ಈ ಯೋಜನೆ ಬರಲಿದೆ.
ಬೃಂದಾವನ ಕಂಪನಿ ಜೊತೆ ಜೊತೆಗೆ ವಾಸ್ಗಿ ಎಂಬ ಕಂಪನಿ ಸಹ ಕಿರುಜಲ ವಿದ್ಯುತ್ ಘಟಕವನ್ನು ಸ್ಥಾಪಿಸಿದೆ. 650 ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸುವ ಒಂದು ಯೂನಿಟ್ ಸ್ಥಾಪಿಸಿದೆ. ಅದೂ ಸಹ ಈ ಜೂನ್- ಜುಲೈನಿಂದ ಕಾರ್ಯಾರಂಭ ಮಾಡಲಿದೆ.
ಉತ್ಪಾದನೆ ಯಾವಾಗ: ತುಂಗಾ ಡ್ಯಾಂ ನಿರ್ಮಾಣದ ಮುಖ್ಯ ಉದ್ದೇಶ ಕೃಷಿ ಹಾಗೂ ಕುಡಿವ ನೀರಿಗೆ ಆದ್ಯತೆ ಕೊಡುವುದೇ ಆಗಿದೆ. ಈ ಹಿಂದೆ ಇದ್ದ ಸಣ್ಣ ಡ್ಯಾಂ ಮುಂಭಾಗದಲ್ಲಿ ಬೃಹತ್ ಡ್ಯಾಂ ಕಟ್ಟಿದ ನಂತರ ವಿದ್ಯುತ್ ಉತ್ಪಾದನೆ ಬಗ್ಗೆ ಆಲೋಚನೆ ಬಂದಿತ್ತು ಎಂದು ಕರ್ನಾಟಕ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳು ತಿಳಿಸುತ್ತಾರೆ.
ಪ್ರತಿ ವರ್ಷವೂ ಡ್ಯಾಂನಲ್ಲಿ ನೀರು ತುಂಬಿದ ನಂತರವಷ್ಟೇ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಈ ಡ್ಯಾಂ ಕೃಷಿ ಮತ್ತು ಕುಡಿವ ನೀರಿಗೆ ಆದ್ಯತೆ ನೀಡುತ್ತದೆ. ನಂತರದ ಆದ್ಯತೆ ವಿದ್ಯುತ್ ಉತ್ಪಾದನೆ ಎಂಬುದು ಕರ್ನಾಟಕ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಯೋಗೀಶ್ ಅವರ ವಿವರಣೆ.
ಅಂಕಿ- ಅಂಶಗಳ ಆಧಾರದ ಮೇಲೆ ಪ್ರತಿ ವರ್ಷ ಜೂನ್ 15ರ ನಂತರ ಡಿಸೆಂಬರ್ ವರೆಗೆ ವಿದ್ಯುತ್ ಉತ್ಪಾದನೆಗೆ ಅವಶ್ಯವಾಗುವಷ್ಟು ನೀರು ಸಿಗಬಹುದು. ಹೀಗಾಗಿ ಸರಿಸುಮಾರು 6-7 ತಿಂಗಳ ಕಾಲ ವಿದ್ಯುತ್ ಉತ್ಪಾದನೆ ನಿರಾತಂಕವಾಗಲಿದೆ. ಜೂನ್ನಲ್ಲಿ ಆರಂಭವಾಗುವ ವಿದ್ಯುತ್ ಉತ್ಪಾದನೆ ಡಿಸೆಂಬರ್ವರೆಗೆ ನಡೆಯಲಿದೆ. ನಂತರ ನೀರಿನ ಲಭ್ಯತೆ ಆಧಾರದ ಮೇಲೆ ಮುಂದುವರಿಯಲಿದೆ ಎಂದು ಬೃಂದಾವನ ವಿದ್ಯುತ್ ಉತ್ಪಾದನಾ ಕಂಪನಿ ಹಿರಿಯ ಅಧಿಕಾರಿಗಳು ವಿವರಿಸುತ್ತಾರೆ.
ಸ್ವೀಕರಣಾ ಕೇಂದ್ರ ಸಿದ್ಧ: ಬೃಂದಾವನ್ ಹೈಡ್ರೋಪವರ್ ಪ್ರೈ.ಲಿ. ಸ್ವಯಂ ನಿರ್ವಹಣಾ ಯೋಜನೆಯಡಿಯಲ್ಲಿ ನಿರ್ಮಿಸಿರುವ ತುಂಗಾ ಜಲ ವಿದ್ಯುತ್ ಉತ್ಪಾದನಾ ಘಟಕದಿಂದ 110-11ಕೆವಿ ಗಾಜನೂರು ವಿದ್ಯುತ್ ಉಪ ಕೇಂದ್ರದವರೆಗೆ 1.693ಕಿ.ಮೀ. ಉದ್ದದ 110 ಕೆ.ವಿ.ಯ ಪ್ರಸರಣಾ ಮಾರ್ಗವನ್ನು ಈಗಾಗಲೇ ನಿರ್ಮಿಸಲಾಗಿದೆ. ಈ ಮೂಲಕ ಉತ್ಪಾದನೆಯವಾದ ವಿದ್ಯುತ್ ತ್ಯಾಜ್ಯ ಗ್ರಿಡ್ಗೆ ಸೇರುತ್ತದೆ.
ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಶಿಧರ್ ವಿವರಿಸುವಂತೆ, ನೂತನವಾಗಿ ಆರಂಭವಾಗುತ್ತಿರುವ ವಿದ್ಯುತ್ ಉತ್ಪಾದನಾ ಘಟಕದಿಂದ 24 ಮೆಗಾವ್ಯಾಟ್ ಉತ್ಪಾದನೆಯಾಗುತ್ತದೆ. ವಿದ್ಯುತ್ ಕೊರತೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಇದೊಂದು ಉತ್ತಮ ಸಹಕಾರಿ ಯೋಜನೆ. ಜನ ಸಾಮಾನ್ಯರಿಗೆ ಮನವರಿಕೆಯಾಗುವಂತೆ ಹೇಳುವುದಾದರೆ ತೀರ್ಥಹಳ್ಳಿಯಂತಹ ಒಂದು ತಾಲೂಕು ಬಳಸಬಹುದಾದ ವಿದ್ಯುತ್ ಇಲ್ಲಿ ಉತ್ಪತ್ತಿಯಾಗುತ್ತದೆ ಎಂದರು