ಮಾನನಷ್ಟ ಮೊಕದ್ದಮೆ ಕೈಬಿಟ್ಟರು
ಶಿವಮೊಗ್ಗ: ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಮಾಜಿ ಶಾಸಕ ಆರಗ ಜ್ಞಾನೇಂದ್ರ ನಡುವಿನ ಮಾನನಷ್ಟ ಮೊಕದ್ದಮೆ ಪ್ರಕರಣ ಸುಖಾಂತ್ಯಗೊಂಡಿದ್ದು, ಇಬ್ಬರೂ ರಾಜಿ ಸಂಧಾನದ ಮೂಲಕ ಪ್ರಕರಣ ಮುಗಿಸಿದ್ದಾರೆ.
ಈ ಹಿಂದೆ ತೀರ್ಥಹಳ್ಳಿಯಲ್ಲಿ ಆರಗ ಜ್ಞಾನೇಂದ್ರ ಹಾಗೂ ಕಿಮ್ಮನೆ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದರು. ನಂತರ ಇಬ್ಬರೂ ಮಾನನಷ್ಟ ಮೊಕದ್ದಮೆ ಹೂಡಿದ್ದರು. 2ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಸಚಿವ ಕಿಮ್ಮನೆ ರತ್ನಾಕರ್ ವಿವರಣೆ ನೀಡಿ, ಎಲ್ಲಾ ನ್ಯಾಯಾಲಯದ ಮಿತ್ರರು ಮತ್ತು ನ್ಯಾಯಾಧೀಶರು ಸಹ ಪ್ರಕರಣ ಹಿಂಪಡೆಯುವಂತೆ ಸಲಹೆ ನೀಡಿದ ಮೇರೆಗೆ ಪ್ರಕರಣ ರಾಜಿ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ವಿವರಿಸಿದರು.
'ಕನ್ನಡಪ್ರಭ'ಕ್ಕೆ ಈ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕ ಆರಗ ಜ್ಞಾನೇಂದ್ರ, ಐದು ವರ್ಷಗಳ ಕೆಳಗೆ ನಾನು ಭಾವೋದ್ವೇಗಕ್ಕೆ ಒಳಗಾಗಿ ಕಿಮ್ಮನೆಯವರ ಕುರಿತಂತೆ ಒಂದರೆಡು ಮಾತನಾಡಿದ್ದೆ. ಆ ಮಾತು ಅವರಿಗೆ ಬೇಸರವಾಗಿ ಮೊಕದ್ದಮೆ ಹೂಡಿದ್ದರು. ಮುಂದೊಂದು ಸಂದರ್ಭದಲ್ಲಿ ಅವರೂ ಅದೇ ರೀತಿಯ ಶಬ್ದ ಬಳಸಿದರೂ, ಆಗ ನಾನು ಪ್ರಕರಣ ಹೂಡಿದೆ.
ನ್ಯಾಯಾಧೀಶರು ನಮ್ಮನ್ನು ಕರೆಸಿ ತಿಳಿ ಹೇಳಿದರು. ನಮ್ಮಿಬ್ಬರಿಗೂ ಅವರ ಸಲಹೆ ಒಪ್ಪಿಗೆಯಾಯಿತು. ಇಬ್ಬರೂ ಮೊಕದ್ದಮೆ ಕೈಬಿಟ್ಟೆವು. ನ್ಯಾಯಾಲಯದಲ್ಲಿ ನಡೆದ ಈ ಬೆಳವಣಿಗೆ ಕಂಡು ನಿಜಕ್ಕೂ ಖುಷಿ ತಂದಿತು ಎಂದು ಅಭಿಪ್ರಾಯಪಟ್ಟರು.
ತೀರ್ಥಹಳ್ಳಿ ರಾಜಕೀಯ ವಾತಾವರಣವೇ ಬೇರೆ. ಒಂದೊಂದು ಘಳಿಗೆಯಲ್ಲಿ ಏನೋ ನಡೆದು ಹೋಯಿತು. ನಮ್ಮಿಬ್ಬರದೂ ಸೈದ್ಧಾಂತಿಕ ಹೋರಾಟವೇ ಹೊರತು ವೈಯಕ್ತಿಕವಾಗಿ ಇಬ್ಬರ ನಡುವೆಯೇ ಯಾವುದೇ ದ್ವೇಷವಿಲ್ಲ. ಹಾಗೆಯೇ ತೀರ್ಥಹಳ್ಳಿಯಂತಹ ಊರಿಗೆ ಈ ಪ್ರಕರಣಗಳು ಸರಿಯಲ್ಲ ಎಂದು ಒಮ್ಮೆ ಅನಿಸಿತ್ತು. ಈಗ ಬಗೆಹರಿದಿದೆ ಎಂದರು.
ಸಚಿವ ಕಿಮ್ಮನೆ ರತ್ನಾಕರ್ ಅವರು ಪ್ರತಿಕ್ರಿಯೆ ನೀಡಿ, ನಮ್ಮದು ಸೈದ್ಧಾಂತಿಕ ಹೋರಾಟವಷ್ಟೇ, ವೈಯಕ್ತಿಕವಾಗಿ ದ್ವೇಷಿಗಳೂ ಇಲ್ಲ. ರಾಜಕೀಯದಲ್ಲಿ ಏನೇ ಭಿನ್ನಾಭಿಪ್ರಾಯ ಇದ್ದರೂ ಅದು ತಾತ್ಕಾಲಿಕವಷ್ಟೆ. ವೈಯಕ್ತಿಕವಾಗಿ ನನಗೆ ಯಾರ ಮೇಲೂ ದ್ವೇಷವಿಲ್ಲ, ಎಲ್ಲರೂ ಸ್ನೇಹಿತರೇ ಎಂದರು.
ತೀರ್ಥಹಳ್ಳಿಯನ್ನು ಇನ್ನು ಮುಂದಾದರೂ ದ್ವೇಷರಹಿತ ರಾಜಕಾರಣ ಮತ್ತು ಪಕ್ಷಾತೀತವಾಗಿ ಅಭಿವೃದ್ಧಿಯಾಗಿ ಜನತೆಗೆ ಒಳ್ಳೆಯದಾಗಲಿ ಎಂದು ನನ್ನ ಇಚ್ಛೆ ಎಂದು ಅಭಿಪ್ರಾಯಪಟ್ಟರು.