ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಪ್ರಯತ್ನ: ಬಿಎಸ್ವೈ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮೇ 31
ಶಿವಮೊಗ್ಗದಲ್ಲಿ ಮತ್ತೊಂದು ಸುತ್ತಿನ ಅಭಿವೃದ್ಧಿಯ ಅಲೆ ಎಬ್ಬಿಸುವ ಸೂಚನೆಯನ್ನು ನೂತನ ಸಂಸದ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ.
ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಶನಿವಾರ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಸಮಿತಿ ಏರ್ಪಡಿಸಿದ್ದ ಅಭಿನಂದನೆ ಹಾಗೂ ಮತದಾರರಿಗೆ ಕೃತಜ್ಞತೆ ಅರ್ಪಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿಗೆ ಪಕ್ಷದ ಸಂಸದರು ಜೊತೆಗೆ ತಿಂಗಳಿಗೊಮ್ಮೆ ಸಭೆ ನಡೆಸಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯ ಅಭಿವೃದ್ದಿಗೆ ಪ್ರಯತ್ನ: ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತೇನೆ, ಒಂದು ಎರಡು ಕೆಲಸಗಳನ್ನು ಮಾಡುವೆ ಎಂದು ಹೇಳದೆ ಏನೇನು ಅವಶ್ಯಕತೆ ಇದೆಯೋ ಎಲ್ಲವನ್ನೂ ವಿಶೇಷ ಪ್ರಯತ್ನ ನಡೆಸಿ ಅಭಿವೃದ್ಧಿಪಡಿಸಲಾಗುವುದು. ಜನರ ನಿರೀಕ್ಷೆ ಮೀರಿ ಜಿಲ್ಲೆ ಮತ್ತು ರಾಜ್ಯದಲ್ಲಿ ಕೇಂದ್ರದ ನೆರವಿನೊಂದಿಗೆ ಹಲವು ಯೋಜನೆ ಜಾರಿಗೊಳಿಸುವುದಾಗಿ ಭರವಸೆ ನೀಡಿದರು.
ಶಿವಮೊಗ್ಗ ಜಿಲ್ಲೆಯನ್ನು ಕಾಂಗ್ರೆಸ್ ಮುಕ್ತ ಮಾಡುವುದು ನಿಮ್ಮ ಗುರಿಯಾಗಲಿ, ವಿಧಾನಸಭೆ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಜಯಗಳಿಸುವಂತಾಗಬೇಕು. ಚುನಾವಣೆ ಯಾವಾಗ ಬೇಕಾದರೂ ಬರಬಹುದು. ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಬೇಕೆಂದು ಕಾರ್ಯಕರ್ತರಿಗೆ ಇದೇ ಸಂದರ್ಭದಲ್ಲಿ ಕರೆ ನೀಡಿದರು.
ಪಕ್ಷ ಸಂಘಟನೆಗೆ ಒತ್ತು: ಶಿವಮೊಗ್ಗ ಜಿಲ್ಲೆಯನ್ನು ಕಾಂಗ್ರೆಸ್ ಮುಕ್ತವಾಗಿಸಲು ಕಾರ್ಯಕರ್ತರು ಇಂದಿನಿಂದಲೇ ಬಿಜೆಪಿಯನ್ನು ಪ್ರಬಲವಾಗಿ ಸಂಘಟಿಸಬೇಕೆಂದರಲ್ಲದೇ, ಅಮಿತ್ ಷಾ ಉತ್ತರ ಪ್ರದೇಶದಲ್ಲಿ ಪಕ್ಷದ ಗೆಲುವಿಗೆ ಮಾಡಿದ ಕಾರ್ಯವೈಖರಿ ಗಮನಿಸಬೇಕು ಎಂದು ಹೇಳಿದರು. ತಮ್ಮನ್ನು ದೊಡ್ಡ ಅಂತರಿಂದ ಗೆಲ್ಲಿಸಿದ ಕ್ಷೇತ್ರದ ಮತದಾರರು ಮತ್ತು ರಾಜ್ಯದ ಜನರ ಸೇವೆಯನ್ನು ಕೊನೆ ಉಸಿರಿನವರೆಗೂ ಮಾಡಬೇಕೆಂದು ಬಯಸಿದ್ದೇನೆ. ಹೀಗಾಗಿ ಪಕ್ಷ ಸಂಘಟನೆಗೆ ನಾನೇ ತೀರ್ಮಾನಿಸಿದೆ ಎಂದರು.
ಮಾಜಿ ಸಂಸದ ಬಿ.ವೈ.ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಎಂ.ಬಿ.ಭಾನುಪ್ರಕಾಶ್, ಪ್ರಮುಖರಾದ ಗಿರೀಶ್ ಪಟೇಲ್, ದತ್ತಾತ್ರಿ, ಕೆ.ಜಿ.ಕುಮಾರಸ್ವಾಮಿ, ಜ್ಯೋತಿಪ್ರಕಾಶ್, ಎಚ್.ಸಿ.ಬಸವರಾಜಪ್ಪ, ಹೇಮಾ ಪಾವತಿ, ಗಾಯತ್ರಿ ಷಣ್ಮುಖಪ್ಪ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.