ತಕ್ಷಣದ ನಿರ್ಧಾರ ನೈಜ ಸಚಿವನ ಲಕ್ಷಣ: ರಾಘವೇಶ್ವರ ಶ್ರೀ
ವಿಟ್ಲ: ನಿಜವಾದ ಸಚಿವ ಆ ಕ್ಷಣಕ್ಕೆ ನಿರ್ಧಾರ ತೆಗೆದುಕೊಂಡು ಸುತ್ತಲಿನವರಿಗೆ ಪ್ರಯೋಜನವಾಗುವ ಹಾಗೆ ನೋಡಿಕೊಳ್ಳಬೇಕು ಎಂದು ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದ್ದಾರೆ. ಸ್ವಾಮೀಜಿ ಅವರು ತಮ್ಮ, 'ಹನುಮನನೊಡನೆ ರಾಮನೆಡೆಗೆ' ವಿಜಯ ಚಾತುರ್ಮಾಸ್ಯ ಪ್ರಯುಕ್ತ ಮಾಣಿ ಪೆರಾಜೆ ರಾಮಚಂದ್ರಾಪುರ ಮಠದಲ್ಲಿ ರಾಮಕಥಾ ಸರಣಿಯ ಮೊದಲನೇ ಆವೃತ್ತಿಯ ಕೊನೆಯ ದಿನ ಶನಿವಾರ, ಹನುಮ ದರ್ಶನ ಸ್ವಾರಸ್ಯ ಕುರಿತು ಪ್ರವಚನ ನೀಡಿದರು.
ಸುಗ್ರೀವನ ಅಣತಿಯಂತೆ ರಾಮ ಲಕ್ಷ್ಮಣರನ್ನು ನೋಡಿ ಬರಲೆಂದು ನಿಯೋಜಿಸಲ್ಪಟ್ಟ ಹನುಮಂತ, ರಾಮನ ದಿವ್ಯಾಕೃತಿ ಕಂಡು ಪರವಶನಾಗಿ ಸುಗ್ರೀವನ ಜೊತೆಗೆ ಸಖ್ಯದ ಮಾತುಕತೆ ನಡೆಸುತ್ತಾನೆ. ತನ್ನನ್ನೇ ಮರೆತು ಸಂಪೂರ್ಣವಾಗಿ ರಾಮನ ದಾಸನಾಗುತ್ತಾನೆ. ಹನುಮನ ಭಕ್ತಿ, ಅರಿವು ಕಂಡು ಬೆರಗಾದ ರಾಮ 'ದೂತನಿದ್ದರೆ ಇಂಥವರಿರಬೇಕು' ಎಂದು ಉದ್ಗರಿಸುತ್ತಾನೆ ಎಂದು ವಿವರಿಸಿದರು. ಗುರುವಿಗೂ, ದೇವರಿಗೂ ನಾವೆಷ್ಟು ಹತ್ತಿರ ಇದ್ದೇವೆ ಎಂಬುದು ದೊಡ್ಡದಲ್ಲ. ಅವರಲ್ಲಿ ನಾವೇನು ಕಂಡೆವು ಎನ್ನುವುದು ಮುಖ್ಯ. ಇಲ್ಲವಾದಲ್ಲಿ ದೇವರ ವಿಗ್ರಹದ ಮೇಲಿನ ಜಿರಳೆಯಂತೆ, ಕೇವಲ ಸಾಮೀಪ್ಯ ಮುಖ್ಯವಲ್ಲ ಎಂದರು. ವಿದ್ವಾನ್ ಗಜಾನನ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊರ್ಗಿ ಶಂಕನಾರಾಯಣ ಶರ್ಮ ನಿರ್ದೇಶನದಲ್ಲಿ ರಾಮ ದರ್ಶನ ರೂಪಕ ಪ್ರದರ್ಶನ ನಡೆಯಿತು.