ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಪಂಚಮಿ ಹಬ್ಬದ ಸಡಗರ

Srinivasa Murthy VN
Updated On : 12 Aug 2013, 11:59 am

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗಾರಾಧನೆ
ಸುಬ್ರಹ್ಮಣ್ಯ: ನಾಗರ ಪಂಚಮಿ ಹಬ್ಬವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ದೇವಾಲಯ ಮುಂಭಾಗದಲ್ಲಿರುವ ನಾಗಪ್ರತಿಷ್ಠಾ ಮಂಟಪದ ನಾಗ ಶಿಲಾಪ್ರತಿಮೆಗೆ ಭಕ್ತಾದಿಗಳು ಹಾಲು, ಸೀಯಾಳ, ಪಂಚಾಮೃತ ಅಭಿಷೇಕ, ಹಣ್ಣುಕಾಯಿ ನೈವೇದ್ಯ ಸಮರ್ಪಿಸಿದರು.
ದೇವಳದ ಪ್ರಧಾನ ಅರ್ಚಕ ವೇ.ಮೂ. ಕೇಶವ ಜೋಗಿತ್ತಾಯರ ಮಾರ್ಗದರ್ಶನದಲ್ಲಿ ಅರ್ಚಕರು ಮಂಗಳಾರತಿ ಬೆಳಗಿದರು. ಮುಂಜಾನೆಯಿಂದಲೇ ನಾಗಪ್ರತಿಷ್ಠಾ ಮಂಟಪದ ಮುಂದೆ ಭಕ್ತರು ಸರತಿ ಸಾಲಿನಲ್ಲಿ ದೇವರ ದರ್ಶನಕ್ಕಾಗಿ ಕಾದು ನಿಂತಿದ್ದರು.
ತುಳುನಾಡಿನ ಕೃಷಿಕರು ನಂಬುವ ನಾಗನ ಸೇವೆಗಾಗಿ ಜಿಲ್ಲೆಯಾದ್ಯಂತ ಗ್ರಾಮಾಂತರ ಪರಿಸರದ ಭಕ್ತರು ಹಾಗೂ ರಜಾ ದಿನಾವಾದ್ದರಿಂದ ದೂರದ ಊರಿನಿಂದ ಬಂದ ಭಕ್ತರು ಹರಕೆ ಸಲ್ಲಿಸಿ, ದೇವರ ದರ್ಶನ ಪಡೆದು ಭೋಜನ ಪ್ರಸಾದ ಸ್ವೀಕರಿಸಿದರು.
ಆದಿ ಸುಬ್ರಹ್ಮಣ್ಯದಲ್ಲೂ ಭಕ್ತಾದಿಗಳಿಂದ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ಮತ್ತಿತರ ಪೂಜೆಗಳು ನಡೆದವು.
ಹಾಲಿಗಾಗಿ ಪರದಾಟ: ಸುಬ್ರಹ್ಮಣ್ಯದ ಹಾಲಿನ ಡೈರಿಯಲ್ಲಿ ಹಾಲಿಗಾಗಿ ಪಾತ್ರೆ ಹಿಡಿದುಕೊಂಡು ಸರತಿ ಸಾಲಿನಲ್ಲಿ ನಿಂತು ಭಕ್ತರು ಹಾಲು ಪಡೆದರು. ತಾಸಿನೊಳಗೆ ಹಾಲು ಮುಗಿಯಿತು. ಬಳಿಕ ಏನೆಕಲ್ಲು ಮತ್ತಿತರ ಪ್ರದೇಶಗಳಿಂದ ಹಾಲು ತರಿಸಿ ರಥಬೀದಿಯಲ್ಲಿ ಬಾಟಲಿ ಮೂಲಕ ಹಾಲು ಮಾರಾಟ ನಡೆಯಿತು. ಹಲವು ಮಂದಿ ನಂದಿನಿ ಪ್ಯಾಕೆಟ್ ಹಾಲನ್ನು ಪಡೆದು ಸಮರ್ಪಿಸಿದರು. ಸ್ಥಳೀಯ ಸಂಸ್ಥೆಯ ವತಿಯಿಂದ ಭಜನೆ ಹಾಗೂ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು.

ಜೀವಂತ ನಾಗನಿಗೆ ಅಭಿಷೇಕ...

ಕಾಪು: ನಾಗರ ಪಂಚಮಿಯಂದು ಎಲ್ಲೆಡೆ ಜನರು ಕಲ್ಲಿನ ನಾಗನಿಗೆ ಹಾಲು ಸೀಯಾಳ ಎರೆದು ಕೃತಾರ್ಥರಾದರೆ, ಮಲ್ಲಾರು ಮಜೂರಿನ ಬ್ರಾಹ್ಮಣ ಕುಟುಂಬವೊಂದು ಜೀವಂತ ನಾಗನಿಗೆ ಹಾಲೆರೆಯುತ್ತಿದೆ.
ಮಲ್ಲಾರು ಗ್ರಾಮದ ಮಜೂರಿನ ಗೋವರ್ದನ ಭಟ್ ಎಂಬವರು ವೃತ್ತಿಯಲ್ಲಿ ಎಲೆಕ್ಟ್ರಿಶಿಯನ್ ಆದರೂ, ಗಾಯಗೊಂಡ ನಾಗರ ಹಾವುಗಳನ್ನು ಮನೆಗೆ ತಂದು ಪೋಷಿಸಿ ಗುಣಮುಖವಾದ ನಂತರ ಕಾಡಿಗೆ ಬಿಡುವುದೇ ಇವರ ಕಾಯಕ. ಇಲ್ಲಿ ನಾಗರಹಾವು ಗಾಯಗೊಂಡು ಬಿದ್ದಿದ್ದರೂ, ಯಾವುದೇ ಫಲಾಪೇಕ್ಷೆ ಇಲ್ಲದೆ ಅಲ್ಲಿಗೆ ಧಾವಿಸಿ ಅದನ್ನು ಮನೆಗೆ ತಂದು ಆರೈಕೆ ಮಾಡುತ್ತಾರೆ.
ಪ್ರತೀ ವರ್ಷದಂತೆಯೇ ಈ ಬಾರಿಯೂ ಎರಡು ನಾಗರ ಹಾವುಗಳಿಗೆ ಹಾಲು, ಸೀಯಾಳ ಎರೆದು ತಮ್ಮ ಪಾಲಿನ ನಾಗರ ಪಂಚಮಿಯನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.
ಈ ತನಕ ನೂರಾರು ಹಾವುಗಳಿಗೆ ಮರು ಜನ್ಮ ನೀಡಿದ ಕೃತಾರ್ಥತೆ ನನ್ನ ಕುಟುಂಬಕ್ಕಿದೆ. ಪ್ರತಿ ಬಾರಿ ನಾಗರ ಪಂಚಮಿ ಹತ್ತಿರ ಬರುತ್ತಿದ್ದಂತೆ ಗಾಯಗೊಂಡ ನಾಗರ ಹಾವುಗಳು ನಮಗೆ ಸಿಗುವುದು ಕಾಕತಾಳೀಯ. ಈ ಬಾರಿ 3 ನಾಗರ ಹಾವುಗಳು ಸಿಕ್ಕಿದ್ದು, ಒಂದು ತೀರ ಅಸ್ವಸ್ಥಗೊಂಡಿದ್ದರಿಂದ ಇಹಲೋಕ ತ್ಯಜಿಸಿದೆ. ಹಾವುಗಳಿಗೆ ಶುಶ್ರೂಷೆ ನೀಡಿ ಸಂಪೂರ್ಣ ಗುಣಮುಖವಾದ ಮರು ದಿನವೇ ಅದನ್ನು ಕಾಡಿಗೆ ಕಳುಹಿಸಿಕೊಟ್ಟು ಸ್ವತಂತ್ರರನ್ನಾಗಿಸುತ್ತೇವೆ. ಈ ಕೆಲಸದಿಂದ ನನಗೆ ಸಂಪೂರ್ಣ ತೃಪ್ತಿ ಇದ್ದು ನಮ್ಮ ಮನೆಯವರೂ ಈ ಪುಣ್ಯ ಕೆಲಸಕ್ಕೆ ಸಹಕಾರಿಗಳಾಗಿದ್ದಾರೆ.'
-ಗೋವರ್ಧನ ಭಟ್  

ಉಡುಪಿ: ನಾಗರ ಪಂಚಮಿ ಸಂಭ್ರಮ
ಉಡುಪಿ: ತುಳುನಾಡಿನ ವಿಶೇಷ ಧಾರ್ಮಿಕ ಆಚರಣೆಯಲ್ಲಿ ಅತ್ಯಂತ ಮಹತ್ವ ಪಡೆದಿರುವ ಶ್ರಾವಣ ಮಾಸದ ಪಂಚಮಿಯಂದು ಆಚರಿಸುವ ನಾಗರ ಪಂಚಮಿಯನ್ನು ಉಡುಪಿಯಲ್ಲಿ ಪ್ರತೀ ವರ್ಷದಂತೆ ಈ ವರ್ಷವು ಬಹಳ ಸಡಗರದಿಂದ ಆಚರಿಸಲಾಯಿತು.
ಭಕ್ತರು ಮುಂಜಾನೆ ನಾಗನ ಗುಡಿಗೆ ಹೋಗಿ ನಾಗದೇವರ ಕಲ್ಲಿಗೆ ಸೀಯಾಳಭಿಷೇಕ, ಹಾಲನ್ನು ಎರೆದರು. ಜೊತೆಗೆ ನಾಗದೇವರಿಗೆ ಪ್ರಿಯವೆನಿಸಿದ ಕೇದಗೆ, ಸಂಪಿಗೆ ಹಾಗೂ ಹಿಂಗಾರವನ್ನು ಸಮರ್ಪಿಸುವುದರ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿಕೊಂಡರು. ಉಡುಪಿಯ ಮಾಂಗೋಡು ಸುಬ್ರಹ್ಮಣ್ಯ ದೇವಸ್ಥಾನ, ಶ್ರೀ ಕೃಷ್ಣ ಮಠದ ಸುಬ್ರಹ್ಮಣ್ಯ ಗುಡಿ ಹಾಗೂ ನಾಗನಕಟ್ಟೆ, ಮುಚ್ಲಗೋಡು ಸುಬ್ರಹ್ಮಣ್ಯ ದೇವಸ್ಥಾನ ವಿವಿಧೆಡೆ ಭಕ್ತರು ನಾಗನ ಶಿಲೆಗೆ ಹಾಲು, ಅರಿಶಿನ, ಎಳನೀರು ಸಹಿತ ಪಂಚಾಮೃತ ಅಭಿಷೇಕ ಮಾಡಿ ಭಕ್ತಿ ಭಾವದಿಂದ ಪೂಜೆಯನ್ನು ಸಲ್ಲಿಸಿದರು. ಶಿರ್ವ ಸಮೀಪದ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅಶ್ವತ್ಥಕಟ್ಟೆ ನಾಗಾಲಯದಲ್ಲಿ ತನು ಅಭಿಷೇಕ, ವಿಶೇಷ ಪೂಜೆ ಜರುಗಿತು. ರಮಾನಂದ ಮರಾಠೆ ಪೂಜಾವಿಧಿ ನೆರವೇರಿಸಿದರು. ಶ್ರೀ ದೇವಳದ ಹಿರಿಯ ಅರ್ಚಕ ವೇದಮೂರ್ತಿ ಕೆ. ವೇದವ್ಯಾಸರಾಯ ಭಟ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement