'ಯೋಧರ ಕುರಿತು ಮಕ್ಕಳಿಗೆ ಮಾಹಿತಿ ನೀಡುವ ಕೆಲಸವಾಗಲಿ'
ಉಡುಪಿ: ಮಕ್ಕಳಿಗೆ ರಾಷ್ಟ್ರಗೀತೆ, ರಾಷ್ಟ್ರ ಲಾಂಛನದ ರಕ್ಷಣೆ ಮಾಡುವುದನ್ನು ಹಾಗೂ ಗೌರವ ನೀಡುವುದನ್ನು ಕಲಿಸುವುದರ ಜೊತೆಗೆ ದೇಶದ ರಕ್ಷಣೆಗಾಗಿ ಪ್ರಾಣವನ್ನೇ ಸಮರ್ಪಣೆ ಮಾಡಿದ ಯೋಧರ ಬಗ್ಗೆ ಕೂಡ ತಿಳಿ ಹೇಳುವ ಕೆಲಸ ಆಗಬೇಕು ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಹೇಳಿದ್ದಾರೆ.
ಇಲ್ಲಿನ ಉಡುಪಿ ಚಾನೆಲ್ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ, ಡಾ. ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನ ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಸಹಯೋಗದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳ 'ದೇಶಭಕ್ತಿ ಗೀತೆ ಸಮೂಹ ಗಾಯನ' ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮುಖ್ಯ ಅತಿಥಿ, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ನಾಗೇಂದ್ರ ಮಧ್ಯಸ್ಥ ಮಾತನಾಡಿ, ಇಂದಿನ ದಿನಗಳಲ್ಲಿ ಹೆತ್ತವರು, ತಮ್ಮ ಮಕ್ಕಳು ದೇಶದ ರಕ್ಷಣೆ ಮಾಡುವ ಯೋಧರಾಗಲಿ ಎಂದು ಬಯಸುವುದು ಕಡಿಮೆಯಾಗುತ್ತಿದೆ ಎಂದರಲ್ಲದೆ, ನಮ್ಮ ಸೈನಿಕರ ಯಾತನೆಗಳಿಗೆ ಸ್ಪಂದನೆ ಹಾಗೂ ಅವರಿಗೆ ಉತ್ತಮ ಸ್ಥಾನಮಾನ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ದೇಶಭಕ್ತಿ ಗೀತೆ ಸಮೂಹ ಗಾಯನ ಸ್ಪರ್ಧೆಯಲ್ಲಿ ಉಡುಪಿ ವಲಯದ ಒಳಕಾಡು ಸಂಯುಕ್ತ ಪ್ರೌಢಶಾಲೆ ಪ್ರಥಮ, ವಿದ್ಯೋದಯ ಪಬ್ಲಿಕ್ ಸ್ಕೂಲ್ ದ್ವಿತೀಯ, ಸರ್ಕಾರಿ ಬಾಲಕಿಯರ ಕಾಲೇಜು ತೃತೀಯ ಹಾಗೂ ಕುಂದಾಪುರ ವಲಯದಲ್ಲಿ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ವಿದ್ಯೋದಯ ಪಬ್ಲಿಕ್ ಸ್ಕೂಲ್ ದ್ವಿತೀಯ, ವಿವೇಕ ಬಾಲಕಿಯರ ಪ್ರೌಢಶಾಲೆ ತೃತೀಯ ಬಹುಮಾನ ಪಡೆದುಕೊಂಡವು.
ಅತಿಥಿಗಳಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ ರಾಮ್ದೇವನ್, ಸಿಂಡಿಕೇಟ್ ಬ್ಯಾಂಕ್ನ ಪ್ರಾದೇಶಿಕ ಪ್ರಬಂಧಕ ಸುಬ್ರಹ್ಮಣ್ಯ ಭಟ್, ಲಯನ್ಸ್ ಮುಖಂಡ ಜಯಕರ ಶೆಟ್ಟಿ ಇಂದ್ರಾಳಿ ಇದ್ದರು. ಚೈತನ್ಯಾ ಅತಿಥಿಗಳನ್ನು ಸ್ವಾಗತಿಸಿ, ನಿರೂಪಿಸಿದರು. ಅಮೃತ ವಂದಿಸಿದರು.