ವಿಶ್ವ ನುಡಿಸಿರಿ ಶಿರ್ವ ಘಟಕ ಉದ್ಘಾಟನೆ
ಉಡುಪಿ: ದೇಶ ವಿದೇಶಗಳ ಶಾಸ್ತ್ರೀಯ ಜಾನಪದ ಕಲಾವಿದರು ನಮ್ಮ ನಾಡಿಗೆ ಬರುವಂತಾಗಬೇಕು. ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಆಸ್ವಾದಿಸುವವರ ಸಂಖ್ಯೆ ವೃದ್ಧಿಸುವಂತಾಗಬೇಕು. ಸಾಂಸ್ಕೃತಿಕ ಸಂಸ್ಕೃತಿ ವಿನಿಮಯದ ಜೊತೆಗೆ ಸಾಂಸ್ಕೃತಿಕ ಸಜ್ಜನ ಮನಸ್ಸುಗಳ ಒಗ್ಗೂಡುವಿಕೆಯೇ ವಿಶ್ವನುಡಿಸಿರಿ ವಿರಾಸತ್ನ ಉದ್ದೇಶ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದ್ದಾರೆ.
ಇಲ್ಲಿನ ಶ್ರೀಮಹಾಲಸಾ ನಾರಾಯಣೀ ದೇವಳ ಸಭಾಂಗಣದಲ್ಲಿ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಶಿರ್ವ ಘಟಕ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಿ.19ರಿಂದ 22ರವರೆಗೆ ಮೂಡುಬಿದಿರೆಯಲ್ಲಿ ಜರುಗುವ ವಿಶ್ವ ನುಡಿಸಿರಿ, ವಿರಾಸತ್ ಕಾರ್ಯಕ್ರಮದಲ್ಲಿ ದೇಶ ವಿದೇಶಗಳಿಂದ ಸುಮಾರು 5 ಲಕ್ಷ ಪ್ರತಿನಿಧಿಗಳನ್ನು ಹೊಂದುವ ಗುರಿ ಇದೆ. ಈ ಸಾಂಸ್ಕೃತಿಕ ಉತ್ಸವದಲ್ಲಿ ಸರ್ವರೂ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಶಿರ್ವ ಆರೋಗ್ಯಮಾತಾ ದೇವಾಲಯ ಧರ್ಮಗುರು ರೆ.ಫಾ.ಸ್ಟ್ಯಾನಿ ತಾವ್ರೊ ಮಾತನಾಡಿದರು. ಘಟಕದ ಉದ್ಘಾಟನೆಯನ್ನು ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ವೇದಮೂರ್ತಿ ಕೇಂಜ ಶ್ರೀಧರ ತಂತ್ರಿ, ಶಿರ್ವ ಗ್ರಾಪಂ ಅಧ್ಯಕ್ಷ ಹಸನಬ್ಬ ಶೇಖ್, ಮುಂಬೈ ಶ್ರೀಕೃಷ್ಣ ಪ್ಯಾಲೇಸ್ನ ಕೃಷ್ಣ ಶೆಟ್ಟಿ, ಶಿರ್ವ ಬಂಟರ ಸಂಘ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಬಿಲ್ಲವ ಸಂಘ ಅಧ್ಯಕ್ಷ ಪ್ರಕಾಶ್ ಪಾಲಮೆ, ಶ್ರೀಮಹಾಲಸಾ ನಾರಾಯಣೀ ದೇವಳ ಅರ್ಚಕ ರಘುರಾಮ ಶೆಣೈ, ಯಂಗ್ಮೆನ್ ಸ್ಪೋರ್ಟ್ಸ್ ಎಂಡ್ ಕಲ್ಚರಲ್ ಎಸೋಸಿಯೇಶನ್ ಅಧ್ಯಕ್ಷ ಹರೀಶ್ ಅಚಾರ್ಯ, ಜನಪದ ಕಲಾವಿದ ತುಕ್ರ ಪಾನರ, ಖ್ಯಾತ ಯಕ್ಷಗಾನ ಕಲಾವಿದ ಕೂಳ್ಯೂರು ರಾಮಚಂದ್ರ ರಾವ್ ಇದ್ದರು.
ಕಾಷ್ಠ ಕಲಾವಿದ ಸಂತೋಷ್ ವಳದೂರು ಹಾಗೂ ಮೋಹನ ಅಳ್ವ ಅವರನ್ನು ಅಭಿನಂದಿಸಲಾಯಿತು.
ಶಿರ್ವ ಘಟಕದ ಗೌರವ ಅಧ್ಯಕ್ಷ ನಾರ್ಬರ್ಟ್ ಮಚಾದೊ ಸ್ವಾಗತಿಸಿದರು. ಘಟಕದ ಕಾರ್ಯದರ್ಶಿ ಬಿ. ಪುಂಡಲೀಕ ಮರಾಠೆ ನಿರೂಪಿಸಿದರು. ಅಧ್ಯಕ್ಷೆ ಬಬಿತಾ ಅರಸ್ ವಂದಿಸಿದರು. ನಂತರ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ದೇಶವಿದೇಶದ ನೃತ್ಯ ಪ್ರದರ್ಶನ ನಡೆಯಿತು.