ಅತ್ಯಾಚಾರ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಣೆ
ಉಡುಪಿ: ಮಣಿಪಾಲದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಲು ಸಾಧ್ಯವಾಗದಿರುವುದರಿಂದ, ನ್ಯಾಯಾಲಯ ಅನಿವಾರ್ಯವಾಗಿ ಆರೋಪಿಗಳಿಗೆ ಮತ್ತೆ 3ನೇ ಬಾರಿ ನ್ಯಾಯಾಂಗ ಬಂಧನ ವಿಸ್ತರಿಸಿದೆ.
ಜೂನ್ 20ರಂದು ಮಧ್ಯರಾತ್ರಿ ಮಣಿಪಾಲ ವಿವಿಯ ಈ ವಿದ್ಯಾರ್ಥಿಯನ್ನು 3 ಮಂದಿ ಆಟೋ ಚಾಲಕರು ಆಟೋದಲ್ಲಿ ಅಪಹರಿಸಿ ಅಮಾನುಷವಾಗಿ ಅತ್ಯಾಚಾರಗೈದಿದ್ದರು. ನಂತರ ಪೊಲೀಸರು ಆರೋಪಿಗಳಾದ ಯೋಗೀಶ್ ಪೂಜಾರಿ ಯಾನೆ ಅಮ್ಲೇಟ್ ಯೋಗೀಶ, ಹರಿಪ್ರಸಾದ್ ಪೂಜಾರಿ, ಆನಂದ ಪಾಣಾರ ಅವರನ್ನು ಮತ್ತು ಅತ್ಯಾಚಾರ ಘಟನೆಗೆ ಸಂಬಂಧಿಸಿದ ಸಾಕ್ಷ್ಯಾಧಾರ ನಾಶ ಮಾಡಿದ ಹಿನ್ನೆಲೆಯಲ್ಲಿ ಬಾಲಚಂದ್ರ ಪೂಜಾರಿ ಮತ್ತು ಹರೀಂದ್ರ ಪೂಜಾರಿ ಅವರನ್ನು ಬಂಧಿಸಿದ್ದರು.
ಆರೋಪಿಗಳಿಗೆ ಈಗಾಗಲೇ 1 ಬಾರಿ ಪೊಲೀಸ್ ಕಸ್ಟಡಿ ಮತ್ತು 2 ಬಾರಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸೋಮವಾರ ನ್ಯಾಯಾಂಗ ಬಂಧನ ಅವಧಿ ಮುಗಿದ ಹಿನ್ನೆಲೆಯಲ್ಲಿ ಮತ್ತೆ ಈ ಎಲ್ಲ ಆರೋಪಿಗಳನ್ನು ತನಿಖಾಧಿಕಾರಿ ಮಣಿಪಾಲ ಠಾಣೆಯ ಸದಾನಂದ ತಿಪ್ಪಣ್ಣನವರ್ ಹಾಜರು ಪಡಿಸಿದರು. ಹೆಚ್ಚುವರಿ ಪ್ರಧಾನ ಸಿವಿಲ ನ್ಯಾಯಾಧೀಶರಾದ ನಾಗಜ್ಯೋತಿ ಅವರು ಆರೋಪಿಗಳಿಗೆ ಆ. 26ರವರೆಗೆ ಮತ್ತೆ ನ್ಯಾಯಾಂಗ ಬಂಧನ ವಿಧಿಸಿದರು.
ಇದೇ ಸಂದರ್ಭದಲ್ಲಿ ಹರೀಂದ್ರ ಮತ್ತು ಬಾಲಚಂದ್ರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಆರೋಪಿಗಳು ಜಾಮೀನಿನ ಮೇಲೆ ಹೊರಗೆ ಬಂದರೆ ಇನ್ನಷ್ಟು ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂದು ಸರ್ಕಾರಿ ಅಭಿಯೋಜಕರು ವಾದಿಸಿದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದರು. ಸದ್ಯ ನ್ಯಾಯಾಲಯದ ಆದೇಶದಂತೆ ಅತ್ಯಾಚಾರದ ಮೂವರು ಆರೋಪಿಗಳಾದ ಯೋಗೀಶ, ಹರಿಪ್ರಸಾದ್ ಹಾಗೂ ಆನಂದ ಅವರನ್ನು ಅವರ ರಕ್ಷಣೆಯ ದೃಷ್ಟಿಯಿಂದ ಶಿವಮೊಗ್ಗ ಜೈಲಿಗೂ, ಸಾಕ್ಷ್ಯನಾಶದ ಆರೋಪಿಗಳಾದ ಹರೀಂದ್ರ ಮತ್ತು ಬಾಲಚಂದ್ರನನ್ನು ಉಡುಪಿ ಜಿಲ್ಲಾ ಕಾರಾಗೃಹಕ್ಕೂ ಕಳುಹಿಸಲಾಗಿದೆ.
ಇನ್ನೂ ಡಿಎನ್‌ಎ ವರದಿ ಬಂದಿಲ್ಲ: ಈ ಪ್ರಕರಣ ನಡೆದ ತಿಂಗಳೆರಡು ಕಳೆಯುತ್ತಿದ್ದರೂ ಇನ್ನೂ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ, ಯಾಕೆಂದರೆ ದೋಷಾರೋಪಣ ಪಟ್ಟಿ ಸಲ್ಲಿಸಲು ಅತ್ಯವಶ್ಯಕವಾಗಿರುವ ಡಿಎನ್‌ಎ ಪರೀಕ್ಷೆ ವರದಿ ಇನ್ನೂ ಕೈಸೇರಿಲ್ಲ. ಆದ್ದರಿಂದ ಪೊಲೀಸರಿಗೆ ದೋಷಾರೋಪಣೆ ಸಲ್ಲಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಅನಿವಾರ್ಯವಾಗಿ ಪದೇ ಪದೇ ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಬೇಕಾಗುತ್ತಿದೆ. ದೋಷಾರೋಪಣಾ ಪಟ್ಟಿ ಸಲ್ಲಿಸಲು 90 ದಿನ ಅವಕಾಶ ಇರುತ್ತದೆಯಾದರೂ, ಇನ್ನು ಕೆಲವು ದಿನಗಳಲ್ಲಿ ಡಿಎನ್‌ಎ ವರದಿ ಪೊಲೀಸರ ಕೈಗೆ ಸೇರಲಿದ್ದು, ಈ ತಿಂಗಳ ಕೊನೆಯೊಳಗೆ ದೋಷಾರೋಪಣ ಪಟ್ಟಿ ಸಲ್ಲಿಸಲು ಸಿದ್ಧತೆಗಳಾಗುತ್ತಿವೆ.