ಮಧ್ವರ ಪ್ರತಿಮೆಗೆ ಬೆಂಗಳೂರಿನಿಂದ ಶಿಲೆ
ಉಡುಪಿ: ದ್ವೈತ ಮತ ಸಂಸ್ಥಾಪಕ ಆಚಾರ್ಯ ಮಧ್ವರ 32 ಅಡಿ ಎತ್ತರದ ಏಕಶಿಲಾ ವಿಗ್ರಹವನ್ನು ಅವರು ಜನಿಸಿದ ಉಡುಪಿ ತಾಲೂಕಿನ ಕುಂಜಾರು ಗಿರಿಯಲ್ಲಿ ಸ್ಥಾಪಿಸಲು ಉಡುಪಿ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರುಸಂಕಲ್ಪಿಸಿದ್ದಾರೆ.
ಅದರಂತೆ ಈಗಾಗಲೇ 8 ಅಡಿ ಎತ್ತರದ ಕಲ್ಲಿನ ಪೀಠವನ್ನು ನಿರ್ಮಿಸಲಾಗಿದೆ. ಅದರ ಮೇಲೆ ಆಚಾರ್ಯರ ವಿಗ್ರಹ ಸ್ಥಾಪನೆಯಾಗಲಿದ್ದು, ಅದಕ್ಕೆ ಬೇಕಾದ ಬೃಹತ್ ಕಲ್ಲನ್ನು ಭಾರಿ ಟ್ರಾಲಿಯಲ್ಲಿ ಬೆಂಗಳೂರಿನಿಂದ ತರಲಾಗುವುದು. ಜುಲೈ ಕೊನೆಯ ವಾರದಲ್ಲಿ ಟ್ರಾಲಿ ಪ್ರಯಾಣ ಆರಂಭಿಸಿದ್ದು, ಇದೀಗ ಕುಂದಾಪುರದ ಆನೆಗುಡ್ಡೆ ಶ್ರೀಸಿದ್ದಿವಿನಾಯಕ ದೇವಾಲಯ ತಲುಪಿದೆ. ಅಲ್ಲಿ ಬುಧವಾರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಉಡುಪಿಗೆ ಹೊರಡಲಿದೆ. ಈ ಬಗ್ಗೆ ಸೋಮವಾರ ಮಠದ ವ್ಯವಸ್ಥಾಪಕರಾದ ಬಲರಾಮ ಭಟ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಈ ಭಾರಿ ಶಿಲೆಯನ್ನು ಬುಧವಾರ ಮಧ್ಯಾಹ್ನ 2.30ಕ್ಕೆ ಉಡುಪಿಯ ಕರಾವಳಿ ಜಂಕ್ಷನ್‌ನಲ್ಲಿ ಭಕ್ತಾಭಿಮಾನಿಗಳು ಸ್ವಾಗತಿಸಲಿದ್ದಾರೆ. ನಂತರ ಇಲ್ಲಿಂದ ಸುಭಾಷ್‌ನಗರ ಎಂಬಲ್ಲಿಗೆ ವಾಹನ ಜಾಥಾದಲ್ಲಿ ತೆರೆದುಕೊಂಡು ಹೋಗಿ, ಅಲ್ಲಿಂದ ಶೋಭಾಯಾತ್ರೆಯಲ್ಲಿ ಕುಂಜಾರುಗಿರಿಗೆ ಸಾಗಿಸಲಾಗುವುದು. ಕುಂಜಾರು ಗಿರಿಯಲ್ಲಿ ಅದಮಾರು ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ಈ ಶಿಲೆಯನ್ನು ಬರಮಾಡಿಕೊಳ್ಳಲಿದ್ದಾರೆ. ನಂತರ ಪೂಜೆ, ಸಭಾ ಕಾರ್ಯಕ್ರಮಗಳು ನಡೆಯುತ್ತವೆ ಎಂದರು. ಪಲಿಮಾರು ಮಠಾಧೀಶರು ಈಗಾಗಲೇ ಹರಿದ್ವಾರದಲ್ಲಿ 32 ಅಡಿ ಎತ್ತರದ ಆಂಜನೇಯ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಅದನ್ನು ಕೆತ್ತಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಸಾಗರದ ಅಶೋಕ ಗುಡಿಗಾರ ಅವರೇ ಈ ಮಧ್ವಾಚಾರ್ಯರ ವಿಗ್ರಹವನ್ನು ಕೆತ್ತಲಿದ್ದಾರೆ. ಸುಮಾರು 1.50 ಕೋಟಿ ವೆಚ್ಚದಲ್ಲಿ ವಿಗ್ರಹ ಸ್ಥಾಪನೆಯಾಗಲಿದೆ ಎಂದರು.
32 ಅಡಿಯೇ ಏಕೆ?
ದೈಹಿಕವಾಗಿ 32 ಲಕ್ಷಣಗಳುಳ್ಳ ವ್ಯಕ್ತಿಯೇ ಪರಿಪೂರ್ಣ ಎನ್ನುತ್ತವೆ ಶಾಸ್ತ್ರಗಳು. ಆಚಾರ್ಯ ಮಧ್ವರೇ ಈ ಪ್ರತಿಮಾ ಲಕ್ಷಣಗಳನ್ನು ತಮ್ಮ ತಂತ್ರಸಾರ ಗ್ರಂಥದಲ್ಲಿ ಬರೆದಿದ್ದಾರೆ. ಸ್ವತಃ ಆಚಾರ್ಯರು ಈ 32 ಲಕ್ಷಣಗಳನ್ನೂ ಹೊಂದಿದ್ದರು ಎನ್ನಲಾಗಿದೆ. ಆದ್ದರಿಂದ ಅಚಾರ್ಯರ 32 ಅಡಿ ಎತ್ತರದ ವಿಗ್ರಹ ಸ್ಥಾಪಿಸಲು ಪಲಿಮಾರು ಶ್ರೀಗಳು ಸಂಕಲ್ಪಿಸಿದ್ದಾರೆ.