ಭಾರತ-ಪೋಲಂಡ್ ಶೈಕ್ಷಣಿಕ ತಿಳಿವಳಿಕೆ ಒಪ್ಪಂದಕ್ಕೆ ಸಹಿ
ಮಣಿಪಾಲ: ಮಣಿಪಾಲ ವಿವಿಯಲ್ಲಿ ಭಾರತ ಮತ್ತು ಪೋಲಂಡ್ ದೇಶಗಳ ನಡುವಿನ ಶೈಕ್ಷಣಿಕ ಕಾರ್ಯಕ್ರಮಗಳ ಜಾರಿಗಾಗಿ ಸೋಮವಾರ ತ್ರಿಪಕ್ಷೀಯ ತಿಳವಳಿಕೆ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಪೋಲಂಡ್ ದೇಶದ ಪರವಾಗಿ ಭಾರತದಲ್ಲಿರುವ ರಾಯಭಾರಿ ಪ್ರೊ. ಪಿಯೋಟ್, ಪೋಲಂಡ್ ದೇಶದ ವಾರ್ಸೌ ವಿವಿ ಪರವಾಗಿ ಉಪಕುಲಪತಿ ಪ್ರೊ. ಅಲೋಝಿ ನೋವಾಕ್ ಮತ್ತು ಮಣಿಪಾಲ ವಿವಿಯ ಪರವಾಗಿ ಸಹಕುಲಪತಿ ಡಾ. ವಿನೋದ್ ಭಟ್ ಈ ತಿಳಿವಳಿಕಾ ಪತ್ರಕ್ಕೆ ಸಹಿ ಮಾಡಿದರು. ಪೋಲಂಡ್ ದೇಶದ ವಿದೇಶಾಂಗ ಸಚಿವಾಲಯದ ಆಶ್ರಯದಲ್ಲಿ ಮಣಿಪಾಲ ವಿವಿಯಲ್ಲಿ ಅಧ್ಯಯನ ಕೇಂದ್ರವನ್ನು ಆರಂಭಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಈ ತಿಳಿವಳಿಕಾ ಪತ್ರಕ್ಕೆ ಸಹಿ ಮಾಡಲಾಗಿದೆ.
ಗಣ್ಯರ ಹತ್ಯೆ ಸಂಚು ಇಬ್ಬರು ಬಿಡುಗಡೆ
ಬೆಂಗಳೂರು: ಕನ್ನಡಪ್ರಭ ಮತ್ತು ಸುವರ್ಣ ಸುದ್ದಿವಾಹಿನಿ ಸಂಪಾದಕ ವಿಶ್ವೇಶ್ವರ ಭಟ್, ಅಂಕಣಕಾರ ಪ್ರತಾಪ್ ಸಿಂಹ ಸೇರಿದಂತೆ ರಾಜ್ಯದ ಪ್ರಮುಖ ಗಣ್ಯರ ಹತ್ಯೆ ಸಂಚಿನಲ್ಲಿ ಭಾಗಿಯಾದ ಆರೋಪಕ್ಕೊಳಗಾಗಿದ್ದ ಸೈಯದ್ ಯೂಸೂಫ್ ನಳಬಾಂದ್ ಹಾಗೂ ಮತಿ ಉರ್ ರೆಹಮಾನ್ ಸಿದ್ದಿಕಿ ಅವರು ಸೋಮವಾರ ರಾತ್ರಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದರು. ಹತ್ಯೆ ಸಂಚು ರೂಪಿಸಿದ್ದ ಉಗ್ರರ ಪಟ್ಟಿಯಲ್ಲಿ ಇವರಿಬ್ಬರ ಹೆಸರು ಇಲ್ಲದ ಕಾರಣ ಅವರನ್ನು ಬಿಡುಗಡೆ ಮಾಡುವಂತೆ ಶನಿವಾರ ಸಿಟಿ ವಿಲ್ ನ್ಯಾಯಾಲಯದಲ್ಲಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸೋಮನಾಥ್ ರೇ ಸಿಂಧಗಿ ಅವರು ಆದೇಶಿಸಿದ್ದರು. ಸೋಮವಾರ ಆದೇಶದ ಪ್ರತಿಯನ್ನು ಪಡೆದ ಅವರ ಪರ ವಕೀಲರು ರಾತ್ರಿ ಜೈಲಿಗೆ ತೆರಳಿ ಕಾನೂನು ಪ್ರಕಾರ ಬಿಡುಗಡೆ ಮಾಡಿಸಿದರು. ಉಳಿದ 12 ಮಂದಿ ಆರೋಪಿಗಳ ವಿರುದ್ಧ ಮಂಗಳವಾರ (ಫೆ.26) ವಿಚಾರಣೆ ನಡೆಯಲಿದೆ. ಫೆ.20ರಂದು ರಾಷ್ಟ್ರೀಯ ತನಿಖಾ ಆಯೋಗವು ನ್ಯಾಯಾಲಯಕ್ಕೆ ಈ ಪ್ರಕರಣದ ಆರೋಪಪಟ್ಟಿ ಸಲ್ಲಿಸಿತ್ತು.
ಶರಣಾದ ಕಾರು ಚಾಲಕಿ ರಾಜೇಶ್ವರಿ
ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ಪಾದಚಾರಿ ಸಾವಿಗೆ ಕಾರಣವಾಗಿದ್ದ ಮಹಿಳೆ ರಾಜೇಶ್ವರಿ ಪೊಲೀಸರಿಗೆ ಶರಣಾಗಿದ್ದು, ಆಕೆಗೆ ಜಾಮೀನು ದೊರೆತಿದೆ. ಶನಿವಾರ ರಾತ್ರಿ ರಾಜೇಶ್ವರಿ ಅವರು ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ವೇಳೆ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿದ್ದರಿಂದ ಪಾದಚಾರಿ ಫಾರೂಕ್ ಅಬ್ದುಲ್ಲಾ ಮೃತಪಟ್ಟು, ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ರಜಾಕ್, ಖಲೀಲ್ ಹಾಗೂ ಅಬ್ದುಲ್ಲಾ ಎಂಬುವವರು ಗಾಯಗೊಂಡಿದ್ದರು. ಮತ್ತೊಂದು ಕಾರು ಜಖಂಗೊಂಡಿತ್ತು. ಘಟನೆ ನಂತರ ರಾಜೇಶ್ವರಿ ಮನೆಗೆ ಹೋಗಿ ಪತಿಗೆ ವಿಷಯ ತಿಳಿಸಿ ಅಲ್ಲಿಂದ ಪರಾರಿಯಾಗಿದ್ದರು. ಜಯನಗರ 6ನೇ ಹಂತ ಪೊಲೀಸ್ ವಸತಿ ಗೃಹದ ಸಮೀಪ ಅಪಘಾತ ನಡೆದಿತ್ತು. ತಲೆಮರೆಸಿಕೊಂಡಿದ್ದ ರಾಜೇಶ್ವರಿ ಭಾನುವಾರ ಪೊಲೀಸರಿಗೆ ಶರಣಾಗಿದ್ದಾರೆ.
ಕಲ್ಲು ಎತ್ತಿ ಹಾಕಿ ಕಾರ್ಮಿಕನ ಕೊಲೆ
ತಲೆ ಮೇಲೆ ಕಲ್ಲು ಎತ್ತಿಹಾಕಿ ಕೂಲಿಕಾರ್ಮಿಕನನ್ನು ಕೊಲೆ ಮಾಡಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದ್ದು, ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಹತ್ಯೆಯಾದ ಯುವಕನಿಗೆ ಸುಮಾರು 25 ವರ್ಷ ವಯಸ್ಸಾಗಿದ್ದು, ಗುರುತು ಪತ್ತೆಯಾಗಿಲ್ಲ. ಆತ ಬಿಹಾರ ಮೂಲದವನಿರಬೇಕು ಎಂದು ಶಂಕಿಸಲಾಗಿದೆ. ವಿದ್ಯಾರಣ್ಯಪುರದಲ್ಲಿರುವ ಸಂಭ್ರಮ್ ಕಾಲೇಜು ಹಿಂಭಾಗದಲ್ಲಿ ಮೃತದೇಹ ಪತ್ತೆಯಾಗಿದೆ. ಕಾರ್ಮಿಕರ ನಡುವೆ ನಡೆದ ಜಗಳವೇ ಹತ್ಯೆಗೆ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಮೃತದೇಹ ಇಡಲಾಗಿದ್ದು, ವಾರಸುದಾರರಿಗಾಗಿ ಹುಡುಕಾಟ ನಡೆಸಿದ್ದಾರೆ.
ಗಂಧದ ತುಂಡು ವಶ
ದೇವನಹಳ್ಳಿ: ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಮಾರುತಿ ವ್ಯಾನೊಂದರಲ್ಲಿ ಸಾಗಿಸುತ್ತಿದ್ದ ಶ್ರೀಗಂಧದ ತುಂಡುಗಳನ್ನು ಇಲ್ಲಿನ ಸಂಚಾರಿ ವಿಭಾಗದ ಎಸ್ಐ ಎಸ್.ನರಸಿಂಹಮೂರ್ತಿ ಅವರು ತಮ್ಮ ಸಿಬ್ಬಂದಿಯೊಂದಿಗೆ ಭಾನುವಾರ ಸಂಜೆ ರಾಣಿ ಕ್ರಾಸ್ ಬಳಿ ಹಿಡಿದಿದ್ದಾರೆ. ಚಿಕ್ಕಬಳ್ಳಾಪುರ ಕಡೆಯಿಂದ ಮಾರುತಿ ವ್ಯಾನೊಂದು ರಾಣಿ ಕ್ರಾಸ್ ಬಳಿ ಇರುವ ಡಾಬ ಬಳಿ ನಿಂತಾಗ ಅನುಮಾನಗೊಂಡ ಸಂಚಾರಿ ವಿಭಾಗದ ಪೊಲೀಸರನ್ನು ಕಂಡು ವ್ಯಾನಿನಲ್ಲಿದ್ದ ಇಬ್ಬರು ಆರೋಪಿಗಳು ಕಾರನ್ನು ಅಲ್ಲಿಯೇ ಬಿಟ್ಟು ಕತ್ತಲಲ್ಲಿ ಪರಾರಿಯಾದರು ಎಂದು ಸಂಚಾರಿ ವಿಭಾಗದ ಇನ್ಸ್ಪೆಕ್ಟರ್ ಸದಾಶಿವಯ್ಯ ತಿಳಿಸಿದರು. ಆ ವಾಹನದಲ್ಲಿ 520 ಕೆಜಿ ತೂಕದ 18 ರಕ್ತ ಚಂದನ ತುಂಡುಗಳು ಇದ್ದವೆಂದು ತಿಳಿಸಿದರು. ಈ ಗಂಧದ ತುಂಡುಗಳನ್ನು ಒಂದು ಲಕ್ಷಕ್ಕೂ ಹೆಚ್ಚು ಬೆಲೆಬಾಳಬಹುದು ಎಂದು ಅಂದಾಜಿಸಲಾಗಿದ್ದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗಂಧದ ತುಂಡುಗಳನ್ನು ಒಪ್ಪಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸದಾಶಿವಯ್ಯ ತಿಳಿಸಿದ್ದಾರೆ.
ಟಿಬೇಟನ್ನರ ನೂತನ ವರ್ಷಾಚರಣೆಗೆ ತೆರೆ
ಕುಶಾಲನಗರ: ಟಿಬೇಟನ್ನರ ನೂತನ ವರ್ಷಾಚರಣೆಯ 15ನೇ ದಿನದಂದು ಹಲವು ಸಾಂಪ್ರದಾಯಿಕ ಕಾರ್ಯಕ್ರಮಗಳೊಂದಿಗೆ ಆಚರಣೆಗೆ ತೆರೆ ಬಿತ್ತು.
ಫೆ.11ರಂದು ಪ್ರಾರಂಭಗೊಂಡ ನೂತನ ವರ್ಷವನ್ನು ಟಿಬೇಟನ್ನರು ಕುಶಾಲನಗರ ಸಮೀಪದ ಬೈಲುಕೊಪ್ಪೆ ನಿರಾಶ್ರಿತ ಶಿಬಿರದಲ್ಲಿ ಹಲವು ಕಾರ್ಯಕ್ರಮಗಳೊಂದಿಗೆ ಆಚರಿಸಿದರು.
ದೇಶ ವಿದೇಶಗಳಲ್ಲಿ ನೆಲೆಸಿರುವ ಶಿಬಿರದ ನಾಗರಿಕರು ನೂತನ ವರ್ಷಾಚರಣೆಯ ಕಾರ್ಯಕ್ರಮದ 15ನೇ ದಿನ ಬುದ್ಧ ಅಮಿತಾಯುಷ್ ಅವರ ಬೃಹತ್ ಚಿತ್ರಪಟ ಅನಾವರಣಗೊಳಿಸಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು.
200 ಅಡಿ ಎತ್ತರ ಮತ್ತು 175 ಅಡಿ ಅಗಲ ವಿಸ್ತೀರ್ಣದ ಈ ಬೃಹತ್ ಚಿತ್ರಪಟವನ್ನು 7 ಅಂತಸ್ತುಗಳ ಕಟ್ಟಡದಲ್ಲಿ ನಿರ್ಮಿಸಿರುವ ಬೃಹತ್ ಕಬ್ಬಿಣದ ಗೋಪುರದಲ್ಲಿ ಬೆಳಗ್ಗಿನ ಜಾವ 7.30ಕ್ಕೆ ಅಳವಡಿಸಿ 15 ನಿಮಿಷಗಳ ಕಾಲ ಅದಕ್ಕೆ ನಮನ ಸಲ್ಲಿಸಲಾಯಿತು.
ಬೈಲುಕೊಪ್ಪೆಯ ಸ್ವರ್ಣ ಮಂದಿರ ಎಂದೇ ಹೆಸರಾಗಿರುವ ಬೌದ್ಧ ಮಂದಿರದಲ್ಲಿ ಇಡೀ ರಾತ್ರಿ ವಿಶ್ವ ಶಾಂತಿಗಾಗಿ ಪ್ರಾರ್ಥಿಸಿದ ಬೌದ್ಧ ಧರ್ಮೀಯರು ಹೋಮ ಹವನಗಳೊಂದಿಗೆ ಪೂಜೆ ಸಲ್ಲಿಸುವುದರೊಂದಿಗೆ ನೂತನ ವರ್ಷವನ್ನು ಹಾರ್ದಿಕವಾಗಿ ಬರಮಾಡಿಕೊಂಡರು.
ಕ್ಯಾಂಟರ್ ಡಿಕ್ಕಿ: ನಗರದ ವ್ಯಕ್ತಿ ಸಾವು
ಚನ್ನರಾಯಪಟ್ಟಣ: ಕ್ಯಾಂಟರ್ ಲಾರಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸಾವನ್ನಪ್ಪಿದ ಘಟನೆ ತಾಲೂಕಿನ ಬರಗೂರುಕೊಪ್ಪಲು ಬಳಿ ಸೋಮವಾರ ನಡೆದಿದೆ. ಬೆಂಗಳೂರಿನ ಯಲಹಂಕ, ಅಟ್ಟೂರು ಲೇ ಔಟ್ ನಿವಾಸಿ ಕುಮಾರ್ (40) ಮೃತಪಟ್ಟ ದುರ್ದೈವಿ. ಕುಮಾರ್ ತಮ್ಮ ಮಾರುತಿ ಓಮಿನಿ ಕಾರಿನಲ್ಲಿ ಕುಟುಂಬ ಸಮೇತ ಹಾಸನ ತಾಲೂಕು ಕಟ್ಟಾಯ ಹೋಬಳಿ, ಮುದ್ದನಹಳ್ಳಿ ಗ್ರಾಮಕ್ಕೆ ದೇವರ ಪೂಜೆಗೆಂದು ಬಂದು ವಾಪಸ್ ಬೆಂಗಳೂರಿಗೆ ಚನ್ನರಾಯಪಟ್ಟಣ ತಾಲೂಕು ದಂಡಿಗನಹಳ್ಳಿ ಹೋಬಳಿ, ಬರಗೂರು ಕೊಪ್ಪಲು ಹತ್ತಿರದ ಬಿಎಂ ರಸ್ತೆಯಲ್ಲಿ ಹೋಗುತ್ತಿದ್ದರು. ಆಗ ಎದುರಿನಿಂದ ಬಂದ ಕ್ಯಾಂಟರ್ ಲಾರಿ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಕಾರಿಗೆ ಡಿಕ್ಕಿ ಮಾಡಿದ್ದಾನೆ.
ನೀರಾವರಿ ಯೋಜನೆ ಪೂರ್ಣಕ್ಕೆ ಆಗ್ರಹ
ಬಿಜಾಪುರ: ಜಿಲ್ಲೆಯ ಮುಳವಾಡ 3ನೇ ಹಂತದ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಮುಗಿಸಿ ಜಿಲ್ಲೆಯನ್ನು ಶಾಶ್ವತವಾಗಿ ಬರದಿಂದ ಮುಕ್ತಗೊಳಿಸಬೇಕೆಂದು ಜಿಲ್ಲಾ ಪ್ರಾಂತ ರೈತ ಸಂಘದ ಅಧ್ಯಕ್ಷ ಭೀಮಸಿ ಕಲಾದಗಿ ಅವರು ಸರ್ಕಾರಕ್ಕೆ ಒತ್ತಾಯಿಸಿದರು. ಭಾನುವಾರ ಸಂಜೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ತಳೇವಾಡ ಸಮುದಾಯ ಭವನದಲ್ಲಿ ತಾಲೂಕು ಮಟ್ಟದ 10ನೇ ಪ್ರಾಂತ ರೈತ ಸಂಘದ ಸಮ್ಮೇಳನ ಉದ್ಘಾಟಿಸಿ, ಶಾಶ್ವತ ಬರ ಅಳಿಸಲು ರೈತರು ಒಗ್ಗಟ್ಟಿನಿಂದ ಸಮಗ್ರ ನೀರಾವರಿ ಯೋಜನೆಗಳಿಗೆ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಬೇಕು. ಸಮಗ್ರ ನೀರಾವರಿ ಯೋಜನೆಗಳ ಸಾಕಾರಕ್ಕೆ ಎಲ್ಲ ರೈತರು ಸಂಘಟಿತರಾಗಿ ಹೋರಾಡಬೇಕೆಂದರು.
ಹಸಿರು ಮೇಲೆ ಕೇಸರಿ ಬಳಿದ ಪೊಲೀಸರು!
ಮಂಗಳೂರು: ಮುಡಿಪು ಬಜರಂಗದಳ ಕಟ್ಟೆಗೆ ದುಷ್ಕರ್ಮಿಗಳು ಹಸಿರು ಬಣ್ಣ ಬಳಿದರೆ, ಪೊಲೀಸರು ರಾತ್ರೋರಾತ್ರಿ ಕೇಸರಿ ಬಣ್ಣ ಬಳಿದಿದ್ದಾರೆ! ಬಣ್ಣ ಬಳಿದ ದುಷ್ಕರ್ಮಿಗಳನ್ನು ಸೋಮವಾರದ ಒಳಗೆ ಬಂಧಿಸಬೇಕು ಇಲ್ಲವಾದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಬಜರಂಗದಳ ಎಚ್ಚರಿಕೆ ನೀಡಿತ್ತು. ಆದರೆ ಆರೋಪಿಗಳು ಸಿಕ್ಕಿರಲಿಲ್ಲ. ಇದಕ್ಕೆ ಉಪಾಯ ಮಾಡಿದ ಪೊಲೀಸರೇ ಕೇಸರಿ ಬಣ್ಣ ಬಳಿದಿದ್ದಾರೆ ಎನ್ನಲಾಗಿದೆ. 'ಗಲಾಟೆ ನಿಲ್ಲಬಹುದು ಎಂಬ ಕಾರಣಕ್ಕೆ ಪೊಲೀಸರೇ ಬಣ್ಣ ಬಳಿದಿದ್ದಾರೆ, ನಮ್ಮ ಬೇಡಿಕೆಯಂತೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಮಂಗಳವಾರ ಪ್ರತಿಭಟನೆ ನಡೆಸುತ್ತೇವೆ' ಎಂದು ಮುಡಿಪು ಬಜರಂಗದಳ ಪ್ರಕಟಣೆಯಲ್ಲಿ ತಿಳಿಸಿದೆ.
ಮೂಲೆ ಸೇರಿರುವ ವೃದ್ಧಾಪ್ಯ ವೇತನ ಅರ್ಜಿ!
ಕೋಲಾರ: ಮುಳಬಾಗಿಲು ತಾಲೂಕು ಕಚೇರಿಗೆ ಸರ್ಕಾರದ ಸವಲತ್ತುಗಳನ್ನು ಕೋರಿ ಬಡಜನರು ಸಲ್ಲಿಸಿರುವ ಅರ್ಜಿಗಳು ವಿಲೇವಾರಿಯಾಗದೆ ಮೂಲೆ ಸೇರಿರುವುದನ್ನು ಬೆಳಕಿಗೆ ತಂದಿರುವ ರೈತ ಸಂಘದ ಕಾರ್ಯಕರ್ತರು, ಕೂಡಲೇ ಅರ್ಜಿಗಳನ್ನು ವಿಲೇವಾರಿ ಮಾಡಿ ಬಡವರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವಂತೆ ಒತ್ತಾಯಿಸಿದ್ದಾರೆ. ರೈತ ಸಂಘದ ಕಾರ್ಯಕರ್ತರು ಸೋಮವಾರ ಮುಳಬಾಗಿಲು ತಾಲೂಕು ಕಚೇರಿಗೆ ಭೇಟಿ ನೀಡಿದಾಗ ಸಂದ್ಯಾ ಸುರಕ್ಷಾ, ವೃದ್ಧಾಪ್ಯ ವೇತನ ಹಾಗೂ ಅಂಗವಿಕಲರ ಪಿಂಚಣಿಗಾಗಿ ಬಡವರು ಸಲ್ಲಿಸಿರುವ ಅರ್ಜಿ ರೈತರ ಅರ್ಜಿಗಳು ತಾಲೂಕು ಕಚೇರಿಯಲ್ಲಿ ಮೂಲೆ ಸೇರಿರುವುದನ್ನು ಗಮನಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿವಿಧ ಪಿಂಚಣಿಗಳಿಗಾಗಿ ಗ್ರಾಮೀಣ ಪ್ರದೇಶದ ಬಡವರು ಸಲ್ಲಿಸಿರುವ ಅರ್ಜಿಗಳನ್ನು ಸರ್ಕಾರಕ್ಕೆ ಕಳುಹಿಸಿ ಅನುಕೂಲ ಮಾಡುವ ಬದಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ರೈತ ಮುಖಂಡರು ತಹಸೀಲ್ದಾರ್ ಗಮನಕ್ಕೆ ತಂದಾಗ ಸ್ಥಳಕ್ಕೆ ಬಂದ ತಹಸೀಲ್ದಾರ್ ರಾಮಮೂರ್ತಿ ಅವರು ಸಂಬಂಧಪಟ್ಟ ವಿಭಾಗದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ತಕ್ಷಣ ಈ ಅರ್ಜಿಗಳನ್ನು ಸರ್ಕಾರಕ್ಕೆ ಕಳುಹಿಸಿ ಬಡವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವೆ ಎಂದು ಭರವಸೆ ನೀಡಿದರು.
ಅಶೋಕಗೆ ಮಂಡ್ಯ ಸಂಘಟನಾ ಸಾರಥ್ಯ
ಮಂಡ್ಯ: ಉಪ ಮುಖ್ಯಮಂತ್ರಿ ಆರ್. ಅಶೋಕ ಮಂಡ್ಯ ಜಿಲ್ಲಾ ಬಿಜೆಪಿ ಸಂಘಟನಾ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ. ಈ ವಿಷಯವನ್ನು ಕನ್ನಡಪ್ರಭಕ್ಕೆ ತಿಳಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್. ಪಿ. ಮಹೇಶ್, ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಪ್ರಚಾರ ಮತ್ತು ಉಸ್ತುವಾರಿ ಹೊಣೆಯನ್ನು ಪಕ್ಷ ಅಶೋಕ ಅವರಿಗೆ ವಹಿಸಿದೆ ಎಂದು ಹೇಳಿದರು. ಮಾಜಿ ಸಚಿವ ಸಿ. ಪಿ. ಯೋಗೇಶ್ವರ್ ರಾಜಿನಾಮೆಯಿಂದ ತೆರವಾದ ಜಿಲ್ಲಾ ಉಸ್ತುವಾರಿ ಮಂತ್ರಿ ಸ್ಥಾನಕ್ಕೆ ಆರ್. ಅಶೋಕ ಅವರಿಗೆ ಹೆಚ್ಚುವರಿ ಹೊಣೆ ವಹಿಸುವ ಸಾಧ್ಯತೆ ಇದೆ. ಮಾರ್ಚ್ 7 ರ ನಂತರ ಈ ಬಗ್ಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ ಎಂದರು.
28ರಿಂದ ಬೆಳವಡಿ ಮಲ್ಲಮ್ಮನ ಉತ್ಸವ
ಬೆಳಗಾವಿ: ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದಲ್ಲಿ ಫೆ.28ರಿಂದ ಎರಡು ದಿನಗಳ ಕಾಲ ರಾಜ್ಯ ಸರ್ಕಾರದ ವತಿಯಿಂದ ಬೆಳವಡಿ ಮಲ್ಲಮ್ಮನ ಉತ್ಸವ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್. ಜಯರಾಮ್ ತಿಳಿಸಿದ್ದಾರೆ. ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಇದೇ ಮೊಟ್ಟ ಮೊದಲ ಬಾರಿಗೆ ಸರ್ಕಾರದವತಿಯಿಂದ ಬೆಳವಡಿ ಮಲ್ಲಮ್ಮನ ಉತ್ಸವ ನಡೆಯಲಿದ್ದು, ಉತ್ಸವಕ್ಕೆ ರಾಜ್ಯ ಸರ್ಕಾರ ಒಟ್ಟು 30 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಬೆಳವಡಿ ಮಲ್ಲಮ್ಮನ ಉತ್ಸವ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವುದರಿಂದ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಫೆ.28 ರಂದು ಸಂಜೆ 6.30ಕ್ಕೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಉತ್ಸವಕ್ಕೆ ಚಾಲನೆ ನೀಡುವರು. ಹೂಲಿ ಹಿರೇಮಠದ ಬೆಳವಡಿ ಸಂಸ್ಥಾನ ರಾಜಗುರು ಶಿವಮಹಾಂತ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೇಬಿ ಗ್ರಾಮದ ಮಹಾಂತ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಜಗದೀಶ ಮೆಟಗುಡ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಚಿವರಾದ ಗೋವಿಂದ ಕಾರಜೋಳ, ಉಮೇಶ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೊಳಿ, ಸಂಸದರಾದ ಸುರೇಶ ಅಂಗಡಿ, ರಮೇಶ ಕತ್ತಿ, ಪ್ರಭಾಕರ ಕೋರೆ, ಕಾಡಾ ಅಧ್ಯಕ್ಷ ಅಡಿವೇಶ ಇಟಗಿ ಆಗಮಿಸುವರು.
ಶಿಕ್ಷಕಿ ಆತ್ಮಹತ್ಯೆ: ಶಿಕ್ಷಕರ ಚಕ್ಕರ್
ಮೈಸೂರು: ಸಹ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಆರೋಪ ಹೊತ್ತಿರುವ ಅರಸನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5 ಮಂದಿ ಶಿಕ್ಷಕರು ಸೋಮವಾರ ಶಾಲೆಗೆ ಗೈರು ಹಾಜರಾಗಿದ್ದರು. ಮೈಸೂರು ತಾಲೂಕು ಜಯಪುರ ಹೋಬಳಿ ಅರಸನಕೆರೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ ಸಂಧ್ಯಾರಾಣಿ (30) ಎಂಬವರು ನಿದ್ರೆ ಮಾತ್ರೆ ಸೇವಿಸಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಂಧ್ಯಾರಾಣಿ ಪತಿ ಅಪಘಾತದಲ್ಲಿ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಸಹ ಶಿಕ್ಷಕರು ಹಾಗೂ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದರು. ಇದರಿಂದ ಮನನೊಂದ ಸಂಧ್ಯಾರಾಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಂಧ್ಯಾರಾಣಿ ತಾಯಿ ಸುಶೀಲಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಜಯಪುರ ಠಾಣೆ ಪೊಲೀಸರು ಮುಖ್ಯ ಶಿಕ್ಷಕ ಶಂಭುಲಿಂಗು, ಸಹ ಶಿಕ್ಷಕರಾದ ಅಶೋಕ, ನಳಿನಿ ನೀಲಾವತಿ, ಭವಾನಿ, ನಾಜೀಮಾ, ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
'ರಕ್ತಕ್ರಾಂತಿ ಮಾಡುವ ಹೇಳಿಕೆ ನೀಡಿಲ್ಲ'
ಗುಲ್ಬರ್ಗ: ಹೈ-ಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371ನೇ ವಿಧಿ ತಿದ್ದುಪಡಿ ಜಾರಿಗೆ ಕಾರಣರಾದ ಖರ್ಗೆ, ಧರಂಸಿಂಗ್, ವೈಜನಾಥ ಪಾಟೀಲರಿಗೆ ಸನ್ಮಾನಿಸಲು ದಿನಾಂಕ 22.1.2013ರಂದು ಗುಲ್ಬರ್ಗದಲ್ಲಿ ಜಿಲ್ಲಾ ನ್ಯಾಯವಾದಿಗಳ ಸಂಘದಿಂದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಸಂಘದ ಅಧ್ಯಕ್ಷ ಹಣಮಂತರೆಡ್ಡಿ ಅವರು 'ಗುಲ್ಬರ್ಗ ಹೈಕೋರ್ಟ್ ಸಂಚಾರಿ ಪೀಠವನ್ನು ಮುಚ್ಚುವಂತೆ ಕೋರಿ ಬೆಂಗಳೂರಿನ ಹೈಕೋರ್ಟ್ನಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆಯದಿದ್ದರೆ ರಕ್ತಕ್ರಾಂತಿ ಮಾಡಬೇಕಾಗುತ್ತದೆ' ಎಂದು ಹೇಳಿದ್ದಾರೆಂದು ದಿನಾಂಕ 23.1.2013ರ ಕನ್ನಡಪ್ರಭ ಬೆಂಗಳೂರು ಆವೃತ್ತಿ ಪುಟ 6, ಗುಲ್ಬರ್ಗ ಆವೃತ್ತಿ ಪುಟ4ರಲ್ಲಿ ವರದಿ ಪ್ರಕಟವಾಗಿತ್ತು. ಆದರೆ, ತಾವು ಅಂದು ಹಾಗೆ ಹೇಳಿರಲಿಲ್ಲ ಎಂದು ಹಣಮಂತರೆಡ್ಡಿ ತಿಳಿಸಿದ್ದಾರೆ.