ಅತ್ಯಾಚಾರ ನಡೆದದ್ದು ಓಂತಿಬೆಟ್ಟು ಗ್ರಾಮದಲ್ಲಿ!
ಪೊಲೀಸ್ ನಾಕಾಬಂಧಿ ದಾಟದ ಆರೋಪಿಗಳು, ಇದು ಪೂರ್ವನಿಯೋಜಿತ ಕೃತ್ಯವಲ್ಲ: ಎಸ್ಪಿ ಡಾ. ಬೋರಲಿಂಗಯ್ಯ ಸ್ಪಷ್ಟನೆ
ಕ.ಪ್ರ. ವಾರ್ತೆ ಉಡುಪಿ ಜೂ.27-
ಮಣಿಪಾಲ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದದ್ದು ಮಣಿಪಾಲದಿಂದ ಸುಮಾರು 6 ಕಿ.ಮೀ. ದೂರದ ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಓಂತಿಬೆಟ್ಟು ಗ್ರಾಮದಲ್ಲಿ ಎಂಬುದು ಖಚಿತವಾಗಿದೆ. ಜತೆಗೆ ಪೂರ್ವನಿಯೋಜಿತ ಕೃತ್ಯವಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಮಣಿಪಾಲ ವಿವಿ ಪಕ್ಕದಲ್ಲಿರುವ ಫಾರ್ಮ್‌ಸಿ ಕಾಲೇಜಿನ ಮುಂಭಾಗದಲ್ಲಿ ರಾತ್ರಿ 11.30ರ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಹಿಂಭಾಗದಿಂದ ಬಂದ ಆಟೋದಲ್ಲಿದ್ದ ಯೋಗೀಶ್ ಪೂಜಾರಿ, ಹರಿಪ್ರಸಾದ್ ಪೂಜಾರಿ ಮತ್ತು ಆನಂದ ಎಂಬವರು ಬಲವಂತವಾಗಿ ಆಟೋದೊಳಗೆ ತಳ್ಳಿ ಅಪಹರಿಸಿದ್ದರು. ಆರಂಭದಲ್ಲಿ ಮಣಿಪಾಲದಿಂದ 1 ಕಿ.ಮೀ. ದೂರದಲ್ಲಿರುವ ಸರಳೆಬೆಟ್ಟು ಸಮೀಪದ ಕೊಡಂಗೆ ಎಂಬಲ್ಲಿಗೆ ಕರೆತಂದು ಅಲ್ಲಿ ಆಕೆಯ ಮೇಲೆ ಈ ಮೂವರು ಪೈಶಾಚಿಕವಾಗಿ ಅತ್ಯಾಚಾರ ನಡೆಸಿದ್ದರು ಎನ್ನಲಾಗಿತ್ತು. ಮಾತ್ರವಲ್ಲ ಪೊಲೀಸರು ಶೇ.99ರಷ್ಟು ಇದೇ ಸ್ಥಳದಲ್ಲಿ ಅತ್ಯಾಚಾರ ನಡೆದಿತ್ತು ಎಂದೇ ಹೇಳಿದ್ದರೂ ವಿದ್ಯಾರ್ಥಿನಿ ಅದನ್ನು ಖಚಿತಪಡಿಸಿರಲಿಲ್ಲ. ಇದೀಗ ಆರೋಪಿಗಳು ಸಿಕ್ಕಿ ಬಿದ್ದಿರುವುದರಿಂದ ಈ ಕೊಡಂಗೆ ಎಂಬಲ್ಲಿ ಅತ್ಯಾಚಾರ ನಡೆದಿಲ್ಲ ಎನ್ನುವುದು ಸಾಬೀತಾಗಿದ್ದು, ಪೊಲೀಸರ ಲೆಕ್ಕಾಚಾರ ಸುಳ್ಳಾಗಿದೆ. ಅರೋಪಿಗಳು ವಿದ್ಯಾರ್ಥಿನಿಯನ್ನು ಉಡುಪಿ- ಕಾರ್ಕಳ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಓಂತಿಬೆಟ್ಟು ಎಂಬಲ್ಲಿ ಸೈಟುಗಳಾಗಿ ಸಮತಟ್ಟಗೊಳಿಸಿದ ವಿಶಾಲವಾದ ಪ್ರದೇಶಕ್ಕೆ ಕರೆತಂದು ಅತ್ಯಾಚಾರ ನಡೆಸಿದ್ದಾರೆ.
ಮತ್ತೆ ಮಣಿಪಾಲಕ್ಕೆ ತಂದರು: ಈ ಸ್ಥಳ ಆರೋಪಿ ಯೋಗೀಶ ಪೂಜಾರಿಯ ಮನೆಯಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿದೆ. ಅತ್ಯಾಚಾರದ ನಂತರ ಘಟನೆಯ ಬಹಳ ದೊಡ್ಡ ಸಾಕ್ಷಿಯಾಗಿರುವ ಆಕೆಯನ್ನು ಅಲ್ಲಿಯೇ ಬಿಟ್ಟರೆ ಅಪಾಯ ಎಂದರಿತ ಮೂವರು ಮತ್ತೆ ಆಕೆಯನ್ನು ಆಟೋದಲ್ಲಿ ಕರೆತಂದು ಮಧ್ಯರಾತ್ರಿ ಕಳೆದು 2.30ರ ಸುಮಾರಿಗೆ ಮಣಿಪಾಲಕ್ಕೆ ತೆರಳಿದ್ದಾರೆ. ದಾರಿ ಮಧ್ಯೆ ಹರಿಪ್ರಸಾದ್ ಮತ್ತು ಆನಂದ ಇಳಿದಿದ್ದಾರೆ. ಯೋಗೀಶ್ ಆಕೆಯನ್ನು ಮತ್ತೆ ಅಪಹರಣ ಮಾಡಿದ್ದಲ್ಲಿಯೇ ತಂದು ಬಿಟ್ಟು ವಾಪಸ್ ಹೋಗಿದ್ದಾನೆ.
ನಾಕಾಬಂಧಿಗೆ ಸಿಗಲಿಲ್ಲ: ಪೊಲೀಸರಿಗೆ 11.30ಕ್ಕೆ ಅಕೆಯ ಅಪಹರಣದ ಮಾಹಿತಿ ಸಿಕ್ಕಿದ್ದು, ಪೊಲೀಸರು ಮಣಿಪಾಲದ ಸುತ್ತಮುತ್ತಲಿನ ಪೊಲೀಸ್ ಠಾಣೆಗಳಿಂದ ನಾಕಾಬಂಧಿ ನಡೆಸಿದ್ದಾರೆ. ಅಂತೆಯೇ ಹಿರಿಯಡ್ಕ ಠಾಣೆಯಿಂದಲೂ ನಾಕಾಬಂಧಿ ನಡೆಸಲಾಗಿದೆ. ಆದರೂ, ಆರೋಪಿಗಳು ಈ ನಾಕಾಬಂಧಿಯನ್ನು ದಾಟಿ ಹೋಗದೆ ಅದಕ್ಕೆ ಮೊದಲೇ ಓಂತಿಬೆಟ್ಟು ಗ್ರಾಮದಲ್ಲಿ ಅತ್ಯಾಚಾರ ನಡೆಸಿದ್ದರಿಂದ ಆವರು ಪೊಲೀಸರ ಕೈಗೆ ಸಿಕ್ಕಿಬಿದ್ದಿಲ್ಲ ಎಂದು ಎಸ್ಪಿ ಡಾ. ಬೋರಲಿಂಗಯ್ಯ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಅಂದು ಮದ್ಯ, ಇಂದು ವಿಷ...
ಮಣಿಪಾಲದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳಾದ ಯೋಗೀಶ್, ಹರಿಪ್ರಸಾದ್ ಮತ್ತು ಆನಂದ ಗಳಸ್ಯ ಕಂಠಸ್ಯ ಗೆಳೆಯರು. ಮೂವರು ಒಟ್ಟಿಗೆ ಕುಡಿತ, ಮೋಜು ಮಸ್ತಿ ನಡೆಸುವವರು. ಜೂ. 20ರಂದು ಕೂಡ ಮೂವರು ಕಂಠಪೂರ್ತಿ ಕುಡಿದು ಮಣಿಪಾಲ ರಸ್ತೆಗಳಲ್ಲಿ ಜಾಲಿ ರೈಡ್ ಹೊರಟಿದ್ದರು. ದುರದೃಷ್ಟ ಎಂದರೆ ಕಾಕತಾಳೀಯವಾಗಿ ಅದೇ ರಸ್ತೆಯಲ್ಲಿ ಈ ನತದೃಷ್ಟ ವಿದ್ಯಾರ್ಥಿನಿ ಮಣಿಪಾಲ ವಿವಿಯ ಲೈಬ್ರರಿಯಲ್ಲಿ ಮರುದಿನ ನಡೆಯಲಿದ್ದ ಪರೀಕ್ಷೆಗೆ ಓದಿ ತನ್ನ ಫ್ಲಾಟ್‌ನತ್ತ ತೆರಳುತ್ತಿದ್ದಳು. ಮದ್ಯದ ಮತ್ತು ಯವ್ವನದ ಮದ ಈ ಮೂವರಿಗೆ ಆಕೆಯನ್ನು ಅಪಹರಿಸಿ ಅತ್ಯಾಚಾರಕ್ಕೆ ಪ್ರೇರೇಪಿಸಿತು. ಅವರೇನೂ ಹುಡುಗಿಯನ್ನು ಹುಡುಕಿಕೊಂಡೇ ಆ ರಸ್ತೆಯಲ್ಲಿ ಹೊರಟಿರಲಿಲ್ಲ. ಆದರೆ, ಆಕಸ್ಮಿಕವಾಗಿ ಸಿಕ್ಕಿದ ಅವಕಾಶ ಬಿಡಲಿಲ್ಲ. ಈ ಘಟನೆ 'ಕ್ರೈಮ್ ಬೈ ಛಾನ್ಸ್' ಆಗಿತ್ತು ಎಂದು ಡಿಐಜಿ ಪ್ರತಾಪ್ ರೆಡ್ಡಿ ಹೇಳಿದ್ದಾರೆ. ಅಂದು ಅವರು ಕುಡಿದ ಮದ್ಯ ಮಾಡಿದ ಅನಾಹುತ ಆರೋಪಿಗಳಲ್ಲಿ ಇಬ್ಬರಾದ ಯೋಗೀಶ್ ಮತ್ತು ಆನಂದ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸುವಂತೆ ಮಾಡಿತ್ತು.