ಮಣಿಪಾಲಕ್ಕೆ ಕೇರಳ ಮಹಿಳಾ ಆಯೋಗ
ಮಣಿಪಾಲ: ಕೇರಳ ಮೂಲದ ವೈದ್ಯ ವಿದ್ಯಾರ್ಥಿನಿ ಮೇಲೆ ಮಣಿಪಾಲದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಿನ್ನೆಲೆಯಲ್ಲಿ ಕೇರಳ ಮಹಿಳಾ ಆಯೋಗದ ಅಧ್ಯಕ್ಷೆ ಹಾಗೂ ಸದಸ್ಯರು ಮಣಿಪಾಲಕ್ಕೆ ಶನಿವಾರ ಆಗಮಿಸಿದ್ದಾರೆ. ಆದರೆ, ಅವರನ್ನು ಭೇಟಿಯಾಗಲು, ಅವರ ಸಹಾಯ ಪಡೆಯಲು ಅತ್ಯಾಚಾರ ಸಂತ್ರಸ್ತೆ ಹಾಗೂ ಆಕೆಯ ಹೆತ್ತವರು ನಿರಾಕರಿಸಿದ್ದಾರೆ.
ಕೊನೆಗೆ 'ಬಂದ ದಾರಿಗೆ ಸುಂಕ ಇಲ್ಲ' ಎಂಬಂತೆ ಆಯೋಗದ ಸದಸ್ಯೆಯರು ಆಸ್ಪತ್ರೆಯ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ಪಡೆದು ಹಿಂದಿರುಗಿದ್ದು, ಕೇರಳ ಸರ್ಕಾರಕ್ಕೆ ಲಭ್ಯ ಮಾಹಿತಿಯಾಧಾರದಲ್ಲಿ ವರದಿ ನೀಡುವುದಾಗಿ ಹೇಳಿದ್ದಾರೆ. ತಾವು ವಿದ್ಯಾರ್ಥಿನಿಗೆ ಕಾನೂನು ನೆರವು ನೀಡುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೆವು. ಆದರೆ, ಆಕೆಯನ್ನು ಭೇಟಿ ಮಾಡುವುದಕ್ಕೆ ಅವಕಾಶವಾಗಲಿಲ್ಲ. ಆಕೆಯ ಆರೋಗ್ಯ ಸ್ಥಿರವಾಗಿದ್ದು, ಇನ್ನೊಂದೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಆಕೆ ಬಿಡುಗಡೆಗೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಆಯೋಗದ ಸದಸ್ಯೆ ರೋಸಾ ಕುಟ್ಟಿ ಈ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿಯವರನ್ನೂ ಭೇಟಿಯಾಗುವುದಾಗಿ ತಿಳಿಸಿದರು.