ಎಂಡೋ ಪೀಡಿತರಿಗೆ ಆಯುರ್ವೇದ ಚಿಕಿತ್ಸೆ; ಆಯುಷ್ ತಂಡ ಭೇಟಿ
ಉಪ್ಪಿನಂಗಡಿ: ಎಂಡೋಪೀಡಿತರಾಗಿ ನರಕಸದೃಶ್ಯ ಜೀವನ ನಡೆಸುವ ಹತಭಾಗ್ಯರಿಗೆ ಯಾವ ರೀತಿಯ ಚಿಕಿತ್ಸೆ ಪರಿಣಾಮಕಾರಿಯೆನಿಸಬಹುದು ಎಂಬ ಬಗ್ಗೆ ಅಧ್ಯಯನ ನಡೆಸಲು ಸರ್ಕಾರದ ಆಯುಷ್ ವೈದ್ಯಕೀಯ ವಿಭಾಗದ ತಜ್ಞರ ತಂಡ ಎಂಡೋಪಾಲನ ಕೇಂದ್ರಕ್ಕೆ ಭೇಟಿ ನೀಡಿತು.
ಕೊಕ್ಕಡ ಭಾಗದ ಎಂಡೋ ಪೀಡಿತ ಪ್ರದೇಶಗಳಿಗೆ ಇತ್ತೀಚೆಗೆ ಭೇಟಿ ನೀಡಿದ್ದ ರಾಜ್ಯದ ಆರೋಗ್ಯ ಸಚಿವ ಅರವಿಂದ ಲಿಂಬಾವಳಿಯವರು ಎಂಡೋಪೀಡಿತರ ಬವಣೆಯನ್ನು ಕಂಡು ದುಃಖಿತರಾಗಿದ್ದರು. ಪೀಡಿತರ ಬದುಕು ಬೆಳಗಿಸುವಂತಾಗಲು ವೈದ್ಯಕೀಯ ಸೌಲಭ್ಯದ ಸದ್ಬಳಕೆಗೆ ಅವರು ನಿರ್ಧರಿಸಿರುವ ಕಾರಣ ಸರ್ಕಾರಿ ಸಂಸ್ಥೆಯಾದ ಆಯುಷ್ ವೈದ್ಯಕೀಯ ವಿಭಾಗದಿಂದ ಇಲ್ಲಿನ ಎಂಡೋ ಪೀಡಿತರಿಗಾಗಿ ಆಯುರ್ವೇದದಿಂದ ಕೊಡಬಹುದಾದ ಚಿಕಿತ್ಸೆಗಳ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ಆಗಮಿಸಿದೆ.
ಡಾ. ಆದರ್ಶ್, ಡಾ. ಸಂಜಯ್, ಡಾ. ನಳಿನಿ, ಡಾ. ವಿಜಯಲಕ್ಷ್ಮೀ, ಡಾ. ಆನಂದ್ ಅವರನ್ನೊಳಗೊಂಡ ವೈದ್ಯರ ತಂಡ ಪರಿಶೀಲನೆ ನಡೆಸಿ ಮಾಹಿತಿಗಳನ್ನು ಕಲೆಹಾಕಿತು.
ಈ ಕುರಿತಂತೆ ಕೊಕ್ಕಡ ಮತ್ತು ಆಲಂಕಾರಿನ ಎಂಡೋ ಪಾಲನಾ ಕೇಂದ್ರದ ಸಂತ್ರಸ್ತರನ್ನು ಮತ್ತು ಕೆಲ ಮನೆಗಳಿಗೂ ಭೇಟಿ ನೀಡಿದ ಕೇಂದ್ರದ ಸಂಯೋಜಕ ಅವಿನಾಶ್ ಎ.ಆರ್. ಮತ್ತು ಕೇಂದ್ರದ ಫಿಸಿಯೋ ಥೆರಪಿಸ್ಟ್ ಡಾ. ನಿಜಿನ್ ಮಾಹಿತಿ ಸಂಗ್ರಹಿಸಿದರು.
ಎಂಡೋ ಸಲ್ಫಾನ್ ಸಿಂಪರಣೆಯಿಂದಾದ ದುಷ್ಪರಿಣಾಮಗಳ ಕುರಿತಂತೆ ಆಳವಾದ ಅಧ್ಯಯನ ಮಾಡಿ ಹಲವು ವರ್ಷಗಳಿಂದ ಈ ಕುರಿತಂತೆ ಸಂತ್ರಸ್ತರ ಪರವಾಗಿ ಹೋರಾಟ ಮಾಡಿರುವ ಡಾ. ರವೀಂದ್ರನಾಥ್ ಶ್ಯಾನುಭಾಗ್, ಕೊಕ್ಕಡ ಎಂಡೋ ವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಇವರನ್ನು ಸಂಪರ್ಕಿಸಿ ವರದಿ ಸಲ್ಲಿಸಲು ಬೇಕಾದ ಇಲ್ಲಿನ ಅಗತ್ಯತೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭ ಈ ವೈದ್ಯಕೀಯ ತಂಡದವರಿಗೆ ಮಾಹಿತಿಯನ್ನು ನೀಡಿದ ರವೀಂದ್ರನಾಥ ಶ್ಯಾನುಭಾಗ್ ಆಯುರ್ವೇದದಿಂದ ಎಂಡೋ ಪೀಡಿತರಿಗೆ ನೆರವಾಗಬಹುದಾದ ವಿಷಯಗಳನ್ನು ಇಲ್ಲಿವರೆಗೆ ಮಾಡಿರುವ ಅಧ್ಯಯನಗಳ ಆಧಾರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಬೇಕಾದ ಅಗತ್ಯತೆಯನ್ನು ತಿಳಿಯಪಡಿಸಿದರು.