ಕದ್ರಿ ನವನೀತ ಶೆಟ್ಟಿ ಕೃತಿಗೆ ರತ್ನವರ್ಮ ಹೆಗ್ಗಡೆ ಪ್ರಶಸ್ತಿ
ಮಂಗಳೂರು: ಧರ್ಮಾಧಿಕಾರಿ ಡಾ.ಡಿ.ವಿ. ವೀರೇಂದ್ರ ಹೆಗ್ಗಡೆ ಪ್ರಾಯೋಜಿತ ತುಳುಕೂಟ ಕುಡ್ಲ ವತಿಯಿಂದ ನಾಟಕ ಕೃತಿಗೆ ನೀಡಲಾಗುವ ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ಕದ್ರಿ ನವನೀತ ಶೆಟ್ಟಿ ರಚಿತ ಕೃತಿ “ಕೊಂಬು ಮಾಣಿ‘ ಆಯ್ಕೆಯಾಗಿದೆ. ಪ್ರಶಸ್ತಿಯನ್ನು ಏ. 14 ರಂದು ನಡೆಯುವ ಬಿಸು ಪರ್ವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕೆ.ಜೆ. ಕೊಕ್ರಾಡಿ ಅವರ ತುಳುನಾಡ ತುಡರ್ ಕೃತಿ ದ್ವಿತೀಯ, ಹಳೆಯಂಗಡಿ ಶಕುಂತಳಾ ಭಟ್ ಅವರ ಮೂಂಕುತಿಡ್ ಮುಕುತಿ ತೃತೀಯ ಸ್ಥಾನ ಪಡೆದಿದೆ. ಪ್ರಶಸ್ತಿ ಕ್ರಮವಾಗಿ ರು. 5ಸಾವಿರ, ರು. 3 ಸಾವಿರ, ರು. 2 ಸಾವಿರ ನಗದು, ಸ್ಮರಣಿಕೆ, ಪತ್ರ ಒಳಗೊಂಡಿದೆ.
ಮಾರ್ನಿಂಗ್ ಮಿಸ್ಟ್ ಹೋಮ್ ಸ್ಟೇಯಲ್ಲಿ ಬಾಂವ್ರಿದೇವಿ
ಮಂಗಳೂರು: ಹಿಂದು ಜಾಗರಣ ವೇದಿಕೆ ಕಾರ್ಯಕರ್ತರಿಂದ ದಾಳಿಗೊಳಗಾದ ಪಡೀಲ್ ಮಾರ್ನಿಂಗ್ ಮಿಸ್ಟ್ ಹೋಮ್ ಸ್ಟೇಯಲ್ಲಿ ಮಹಿಳಾ ಹಕ್ಕು ಹೋರಾಟಗಾರ್ತಿ ಬಾಂವ್ರಿದೇವಿ ಗುರುವಾರ ರಾತ್ರಿ ತಂಗುವ ಮೂಲಕ ಮಹಿಳಾ ಸ್ವಾತಂತ್ರ್ಯ ಅಭಿಯಾನಕ್ಕೆ ವಿಭಿನ್ನ ಚಾಲನೆ ನೀಡಿದರು. 1992ರಲ್ಲಿ ರಾಜಸ್ತಾನದಲ್ಲಿ ಬಾಂವ್ರಿದೇವಿ ಯನ್ನು 42 ಮಂದಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದರು. ಇದರ ವಿರುದ್ಧ ಮಹಿಳಾ ಸಂಘಟನೆಗಳ ಬೆಂಬಲದೊಂದಿಗೆ ಹೋರಾಟ ನಡೆಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಮಹಿಳಾ ಉದ್ಯೋಗಿಳ ಲೈಂಗಿಕ ಕಿರುಕುಳ ಬಗ್ಗೆ ಮಹತ್ವದ ತೀರ್ಪು ನೀಡಿತ್ತು. ಮಂಗಳೂರಲ್ಲಿ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸರಲು ಬಾಂವ್ರಿ ದೇವಿ ಮಗಳ ಜತೆ ಆಗಮಿಸಿದ್ದರು. ಬಾಂವ್ರಿದೇವಿ ಆತಿಥ್ಯ ಸ್ವೀಕರಿಸಿದ್ದ ಬಗ್ಗೆ ಹೋಮ್ಸ್ಟೇ ಮಾಲಕಿ ಲೋರೆಟ್ಟಾ ರೆಬೆಲ್ಲೊ ಸಂತೋಷ ವ್ಯಕ್ತಪಡಿಸಿದ್ದಾರೆ. ಹೋಮ್ಸ್ಟೇ ದಾಳಿ ಬಳಿಕ ಪರವಾನಗಿ ಇಲ್ಲದ ಕಾರಣ ಮಾರ್ನಿಂಗ್ ಮಿಸ್ಟ್ ಹೋಮ್ಸ್ಟೇಯನ್ನು ಮುಚ್ಚಲಾಗಿತ್ತು. ಹೋಮ್ಸ್ಟೇ ಬೋರ್ಡನ್ನು ಕಿತ್ತು ಹಾಕಲಾಗಿತ್ತು. ಮೆಸ್ಕಾಂ, ಮಹಾನಗರ ಪಾಲಿಕೆ ತಪಾಸಣೆ ನಡೆಸಿದಾಗ ಹೋಮ್ಸ್ಟೇ ನಡೆಸಲು ಯಾವುದೇ ಅನುಮತಿ ಪಡೆಯದೇ ಇದ್ದುದು ಬೆಳಕಿಗೆ ಬಂದಿತ್ತು. ಇದೀಗ ಇದೇ ಮಾರ್ನಿಂಗ್ ಮಿಸ್ಟ್ನಲ್ಲಿ ಮಹಿಳಾ ಹಕ್ಕು ಹೋರಾಟಗಾರ್ತಿಗೆ ತಂಗಲು ಅವಕಾಶ ನೀಡಿದ್ದಾರೆ.