ಲವ್ ಜಿಹಾದ್ ವಿರುದ್ಧ ಬಜರಂಗದಳ ಅರ್ಥಿಕ ವ್ಯವಹಾರ ನಿಷೇಧ ಬೆದರಿಕೆ
ಮಂಗಳೂರು: ಮುಸ್ಲಿಂ ಯುವಕರು ಹಿಂದೂ ಹುಡುಗಿಯರನ್ನು ಪ್ರೀತಿಸಿ ಮತಾಂತರಿಸುವ ಲವ್ ಜೆಹಾದ್ಗೆ ಪುತ್ತೂರು ಪಾಲ್ತಾಡಿ ಪ್ರಕರಣ ಜ್ವಲಂತ ಉದಾಹರಣೆ. ಇದೇ ರೀತಿಯ ಪ್ರಕರಣಗಳು ಮುಂದುವರಿದರೆ ಮುಸ್ಲಿಂ ಸಮುದಾಯದ ಜತೆ ಆರ್ಥಿಕ ವ್ಯವಹಾರ ಕಡಿದುಕೊಳ್ಳುವ ಬಗ್ಗೆ ಜನಜಾಗೃತಿ ಮೂಡಿಸುತ್ತೇವೆ ಎಂದು ಬಜರಂಗದಳ ರಾಜ್ಯ ಸಂಚಾಲಕ ಸೂರ್ಯನಾರಾಯಣ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪುತ್ತೂರಿನ ಹಿಂದೂ ಯುವತಿಯನ್ನು ಪ್ರೀತಿಸಿ ಕೇರಳ ಪೊನ್ನಾಣಿಯಲ್ಲಿ ಮತಾಂತರ ಮಾಡಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ, ನ್ಯಾಯವಾದಿ ಜೈಲು ಸೇರಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಮುಖಂಡರು ತುಟಿಪಿಟಿಕ್ ಎನ್ನುತ್ತಿಲ್ಲ. ಹಾಗಾದರೆ ಲವ್ ಜಿಹಾದ್ಗೆ ಕಾಂಗ್ರೆಸ್ ಮುಖಂಡರ ಸಮ್ಮತಿ ಇದೆಯೇ ಎಂದು ಪ್ರಶ್ನಿಸಿದರು. ಪ್ರೀತಿ, ಪ್ರೇಮದ ಬಲೆಯಲ್ಲಿ ಕೆಡವಿ ಮತಾಂತರ ಮಾಡಿ ಕೊನೆಗೆ ಯುವತಿಯರನ್ನು ಮಾರಾಟ ಮಾಡಿದ ಅನೇಕ ಪ್ರಕರಣಗಳಿವೆ. ಯುವತಿಯರ ನಾಪತ್ತೆ ಪ್ರಕರಣಗಳನ್ನು ಸಿಐಡಿ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಮೊಬೈಲ್ ರಿಚಾರ್ಜ್ ಸೆಂಟರ್ನಲ್ಲಿ ಕೆಲಸ ಮಾಡುವ ಯುವಕರು ಇದರಲ್ಲಿ ಶಾಮೀಲಾಗಿದ್ದಾರೆ. ಅವರು ಲವ್ ಜಿಹಾದ್ ವಿರೋಧಿಸಿದ ಯುವಕನ್ನು ಕೊಲೆ ಮಾಡಿದ್ದಾರೆ. ಹಿಂದೂ ಸಮಾಜ ಕೆಣಕುವ ಕೆಲಸ ಮಾಡಬೇಡಿ. ಶಾಂತಿ, ಸಹಬಾಳ್ವೆಯಿಂದ ಬಾಳುವುದನ್ನು ಕಲಿಯಿರಿ. ತಪ್ಪು ತಿದ್ದಿಕೊಳ್ಳಲು ಒಂದು ವರ್ಷ ಗಡುವು ನೀಡುತ್ತೇವೆ. ಬಳಿಕ ನಾವು ನಮ್ಮದೇ ಮಾರ್ಗ ನೋಡಿಕೊಳ್ಳಬೇಕಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಭಾಗ ಸಂಚಾಲಕ ಶರಣ್ ಪಂಪ್ವೆಲ್, ವಿಶ್ವಹಿಂದು ಪರಿಷತ್ ಕಾರ್ಯಾಧ್ಯಕ್ಷ ಜಗದೀಶ ಶೇಣವ, ಗೋರಕ್ಷ ಪ್ರಮುಖ ಪ್ರದೀಪ್ ಪಂಪ್ವೆಲ್ ಇದ್ದರು.
ಏಪ್ರಿಲ್ನಿಂದ ಬೇಸಗೆ ವಿಶೇಷ ರೈಲಿಗೆ ನಾಳೆಯಿಂದ ಬುಕ್ಕಿಂಗ್
ಮಂಗಳೂರು: ಬೇಸಗೆಯ ಪ್ರಯಾಣಿಕರ ದಟ್ಟಣೆ ಸಲುವಾಗಿ ದಕ್ಷಿಣ ರೇಲ್ವೆ ಏಪ್ರೀಲ್ನಿಂದ ಜೂನ್ ವರೆಗೆ 3 ತಿಂಗಳ ಕಾಲ ಹೆಚ್ಚುವರಿ ಪ್ಯಾಸೆಂಜರ್ ರೈಲು ಓಡಾಟ ನಡೆಸಲಿದೆ. ರಿಸರ್ವೇಷನ್ ಸೌಲಭ್ಯ ಮಾ.10ರಿಂದಲೇ ಶುರುವಾಗಲಿದೆ.
ಚೆನ್ನೈ ಸೆಂಟ್ರಲ್-ಮಡ್ಗಾಂವ್ ವೀಕ್ಲಿ ಎಕ್ಸ್ಪ್ರೆಸ್(ನಂ.06001)ಮೇ 5 ಮತ್ತು ಜೂ.9ರಂದು ಪ್ರತಿ ಭಾನುವಾರ ಬೆಳಗ್ಗೆ 10.10ಕ್ಕೆ ಚೆನ್ನೈನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 10.30ಕ್ಕೆ ಗೋವಾ ತಲುಪಲಿದೆ. ರೈಲು ನಂ.06002 ಮಡ್ಗಾಂವ್ನಿಂದ ಮೇ.6 ಮತ್ತು ಜೂ.10ರಂದು ಪ್ರತಿ ಸೋಮವಾರ ಮಧ್ಯಾಹ್ನ 1.15ಕ್ಕೆ ಹೊರಟು ಮರುದಿನ ಮಧ್ಯಾಹ್ನ 12.30ಕ್ಕೆ ಚೆನ್ನೈ ತಲುಪಲಿದೆ.
ಚೆನ್ನೈ ಸೆಂಟ್ರಲ್-ಹುಬ್ಬಳ್ಳಿ ರೈಲು ನಂ.07313 ಏ.4ರಿಂದ ಜೂ.29ರ ವರೆಗೆ ಪ್ರತಿ ಸೋಮವಾರ, ಗುರುವಾರ ಮತ್ತು ಶನಿವಾರ ಮಧ್ಯಾಹ್ನ 2.10ಕ್ಕೆ ಚೆನ್ನೈನಿಂದ ಸಂಚರಿಸಲಿದೆ. ರೈಲು ನಂ.07314 ಏ.3ರಿಂದ ಜೂ.28ರ ವರೆಗೆ ಭಾನುವಾರ, ಬುಧವಾರ, ಶುಕ್ರವಾರಗಳಂದು ಹುಬ್ಬಳ್ಳಿಯಿಂದ ರಾತ್ರಿ 8.20ಕ್ಕೆ ಹೊರಡಲಿದೆ.
ಯಶವಂತಪುರ-ಎರ್ನಾಕುಲಂ ರೈಲು ನಂ.06543 ಏ.7ರಿಂದ ಜೂ.23ರ ವರೆಗೆ ಪ್ರತಿ ಭಾನುವಾರ ರಾತ್ರಿ 11.55ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಮಧ್ಯಾಹ್ನ 12.15ಕ್ಕೆ ಎರ್ನಾಕುಲಂ ತಲುಪಲಿದೆ. ರೈಲು ನಂ.06544 ಎರ್ನಾಕುಲಂನಿಂದ ಏ.8ರಿಂದ ಜೂ.24ರ ವರೆಗೆ ಪ್ರತಿ ಸೋಮವಾರ ಹೊರಟು ಯಶವಂತಪುರಕ್ಕೆ ಸಂಜೆ 3.30ಕ್ಕೆ ತಲುಪಲಿದೆ.
ಎರ್ನಾಕುಲಂ-ಚೆನ್ನೈ ವೀಕ್ಲಿ ಸೂಪರ್ ಫಾಸ್ಟ್ ಸ್ಪೆಷಲ್ ರೈಲು ಏ.11ರಿಂದ, ಕೊಯಂಬತ್ತೂರ್-ಚೆನ್ನೈ ಸೆಂಟ್ರಲ್ ವೀಕ್ಲಿ ಸೂಪರ್ ಫಾಸ್ಟ್ ಸ್ಪೆಷಲ್ ಏ.16ರಿಂದ, ಚೆನ್ನೈ ಸೆಂಟ್ರಲ್-ಟ್ಯುಟಿಕೊರಿನ್ ಪಾಕ್ಷಿಕ ಸ್ಪೆಷಲ್ ರೈಲು ಏ.25ರಿಂದ, ತಿರುನೇಲ್ವಿ-ಚೆನ್ನೈ ಸೆಂಟ್ರಲ್ ವೀಕ್ಲಿ ಸ್ಪೆಷಲ್ ರೈಲು ಏ.11ರಿಂದ, ಚೆನ್ನೈ ಸೆಂಟ್ರಲ್-ತಿರುನೇಲ್ವಿ ವೀಕ್ಲಿ ಎಸಿ ಸ್ಪೆಷಲ್ಸ್ ರೈಲು ಏ.14ರಿಂದ, ನಾಗರಕೊಯಿಲ್-ಚೆನ್ನೈ ಎಗ್ಮೋರ್ ವೀಕ್ಲಿ ಸೂಪರ್ ಫಾಸ್ಟ್ ಸ್ಪೆಷಲ್ ಏ.7ರಿಂದ, ಚೆನ್ನೈ ಸೆಂಟ್ರಲ್-ಕೂಚುವೆಲಿ ಸೂಪರ್ ಫಾಸ್ಟ್ ಎಸಿ ಸ್ಪೆಷಲ್ ಏ.12ರಿಂದ ಸಂಚರಿಸಲಿದೆ ಎಂದು ಪಾಲ್ಘಾಟ್ ರೇಲ್ವೆ ವಿಭಾಗದ ಪ್ರಕಟಣೆ ತಿಳಿಸಿದೆ.