ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕೊಂಕಣಿ ಪಂಗಡಗಳಲ್ಲಿ ಸಾಮರಸ್ಯಕ್ಕೆ ಸಾಂಸ್ಕೃತಿಕ ವಿನಿಮಯ ಅಗತ್ಯ: ಚಿನ್ನಾ

Srinivasa Murthy VN
Updated On : 14 May 2013, 1:18 am

ಉಡುಪಿ: ಕೊಂಕಣಿ ಭಾಷೆ ಉಳಿಸಿ ಬೆಳೆಸಲು ಹಾಗೂ ಕೊಂಕಣಿ ಪಂಗಡಗಳ ನಡುವೆ ಸಾಮರಸ್ಯ ಹೆಚ್ಚಲು ಪರಸ್ಪರ ಸಾಂಸ್ಕೃತಿಕ ವಿನಿಮಯ ನಡೆಯಬೇಕು ಎಂದು ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಕಾಸರಗೋಡು ಚಿನ್ನಾ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಕೊಂಕಣಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಅಮ್ಗೆಲೆ ವಾಣಿ ಹಾಗೂ ರಾಜ್ಯ ಕೊಂಕಣಿ ಅಕಾಡೆಮಿ ಇವರ ಆಶ್ರಯದಲ್ಲಿ ಉಡುಪಿಯ ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟೇಶ ದೇವಾಲಯ ಆವರಣದಲ್ಲಿ ಇತ್ತೀಚಿಗೆ ನಡೆದ 'ಕೊಂಕಣಿ ಸಾಹಿತ್ಯ ಸಮ್ಮೇಳನ' ಉದ್ಘಾಟಿಸಿ ಮಾತನಾಡಿದರು.
ಕೊಂಕಣಿ ಭಾಷೆಯ ಪಂಗಡಗಳು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದರೂ ಆರ್ಥಿಕವಾಗಿ ಹಿಂದುಳಿದಿದೆ. ಅವರಲ್ಲಿರುವ ಕಲಾಪ್ರತಿಭೆಗಳನ್ನು ಗುರುತಿಸಿ ಸಮಾಜದ ಮುಖ್ಯ ವಾಹಿನಿಗೆ ಸೇರಿಸುವ ಕೆಲಸ ಆಗಬೇಕಾಗಿದೆ ಎಂದರು.  
ಮಂಗಳೂರಿನಲ್ಲಿ ಸುಮಾರು 69 ವಿದ್ಯಾರ್ಥಿಗಳು ಕೊಂಕಣಿಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದು ಶೇ. 92 ಅಂಕ ಗಳಿಸಿದ್ದಾರೆ. 110 ಜನ ಕೊಂಕಣಿ ಶಿಕ್ಷಕರಿದ್ದಾರೆ. ಅಕಾಡೆಮಿಯ ಲೈಬ್ರೆರಿಯಲ್ಲಿರುವ 2 ಸಾವಿರ ಕೊಂಕಣಿ ಪುಸ್ತಕಗಳನ್ನು ಬರೆದವರು ಕ್ಯಾಥೋಲಿಕ್ ಕೊಂಕಣಿ ಸಮುದಾಯದವರು. ಹಾಗಾದರೆ ಉಳಿದ ಕೊಂಕಣಿ ಸಮುದಾಯಗಳಿಗೆ ಪ್ರತಿಭಾನಿತ್ವರೇ ಇಲ್ಲವೇ ಅವರಿಗೆ ಕೊಂಕಣಿ ಭಾಷೆ ಬೇಡವೆ ಎಂದು ಪ್ರಶ್ನಿಸಿದ ಚಿನ್ನಾ, ಕೊಂಕಣಿ ಭಾಷೆಗೆ ಲಿಪಿ ಇಲ್ಲ ಎಂಬ ಕೀಳರಿಮೆ ಬಿಡಿ ಯಾವ ಭಾಷೆಯಲ್ಲಾದರೂ ಕೊಂಕಣಿ ಸಾಹಿತ್ಯದ ಕೃಷಿ ನಡೆಸಿ ಎಂದರು.
ಮುಖ್ಯ ಅತಿಥಿಗಳಾಗಿ ಮಣಿಪಾಲದ ಟಿ.ಎಂ.ಎ. ಪೈ ಪಾಲಿಟೆಕ್ನಿಕಿನ ಪ್ರಾಂಶುಪಾಲ ಟಿ. ರಂಗ ಪೈ, ಕೊಂಕಣಿ ಅಕಾಡೆಮಿಯ ರಿಜಿಸ್ಟ್ರಾರ್ ಡಾ. ದೇವದಾಸ್ ಪೈ, ಸದಸ್ಯರಾದ ಓಂ ಗಣೇಶ್, ಸುಭಾಶ್ ಕಾಮತ್, ಸಮ್ಮೇಳನದ ಕಾರ್ಯಾಧ್ಯಕ್ಷ ಕೋಣಿ ಶೇಷಗಿರಿ ನಾಯಕ್, ಅಮ್ಗೆಲೆವಾಣಿ ಇದರ ಅಧ್ಯಕ್ಷ ದೀಪಕ್  ಎಂ. ಶೇಟ್, ಪುತ್ತೂರು ಶ್ರೀಲಕ್ಷ್ಮೀವೆಂಕಟೇಶ್ವರ ದೇವಾಲಯದ ಪ್ರಧಾನ ಅರ್ಚಕ ಅನಂತ್ ಭಟ್, ಮನೋಜ್ ನಾಯಕ್ ಮಂಗಳೂರು, ಮಧುಕರ ಹೊನ್ನಾವರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಂಗಳೂರಿನ ವೈಶ್ಯವಾಣಿ ಸಮಾಜದ ಹಿರಿಯ ಉದ್ಯಮಿ ಬಿ. ವಿಠೋಭ ನಾಗ್ವೇಕರ್ ಅವರನ್ನು ಸನ್ಮಾನಿಸಲಾಯಿತು.

ಬಜ್ಪೆ: ನಾಳೆ ಸುನ್ನಿ ಸಮಾವೇಶ
ಮಂಗಳೂರು: ಸಮಸ್ತ ಸುನ್ನೀ ಫೆಡರೇಶನ್ ವತಿಯಿಂದ ಮೇ 15 ರಂದು ಸಂಜೆ 5ರಿಂದ ರಾತ್ರಿ 10ರವರೆಗೆ ಬಜ್ಪೆ ಬನಕಲ್ ಬಾವ ಬ್ಯಾರಿ ಮೈದಾನದಲ್ಲಿ ಜಿಲ್ಲಾಮಟ್ಟದ ಸುನ್ನಿ ಸಮಾವೇಶ ನಡೆಯಲಿದೆ. ಸಮಾವೇಶವನ್ನು ಜಬ್ಬಾರ್ ಉಸ್ತಾದ್ ಮಿತ್ತಬೈಲು ಉದ್ಘಾಟಿಸುವರು. ಬಜ್ಪೆ ಜುಮ್ಮಾ ಮಸೀದಿಯ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು. ಶಾಸಕರಾದ ಯು.ಟಿ. ಖಾದರ್ ಮತ್ತು ಮೈದಿನ್ ಬಾವ ಪಾಲ್ಗೊಳ್ಳುವರು ಎಂದು ಸಮಸ್ತ ಸುನ್ನೀ ಫೆಡರೇಶನ್ನ ಕಾರ್ಯದರ್ಶಿ ಬಿ.ಹೆಚ್. ಅಬೂಬಕ್ಕರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಕ್ಯಾಂಪ್ಕೋಗೆ ಲಾಭ, ಬೆಳೆಗಾರರಿಗೆ ಭಯ ಬೇಡ: ಕೊಂಕೋಡಿ
ಬೆಳ್ತಂಗಡಿ: ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಲಾಭದಲ್ಲಿ ಮುಂದುವರಿಯುತ್ತಿದೆ. ಹೀಗಾಗಿ ಅಡಕೆ ಬೆಳೆಗಾರರು ಹೆದರುವ ಅವಶ್ಯಕತೆ ಇಲ್ಲ ಎಂದು ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಭರವಸೆ ನೀಡಿದ್ದಾರೆ. ಸೋಮವಾರ ವೇಣೂರಿನ ಗಾರ್ಡನ್ ವ್ಯೂ ಕಟ್ಟಡದಲ್ಲಿ ಕಾಂಪ್ಕೋದ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. ಅಡಕೆ ಆಮದು ಹತೋಟಿ ಯತ್ನ: ಬೆಳೆಗಾರರ ಸಂರಕ್ಷಣೆ ಮಾಡುವಲ್ಲಿ ಕೇಂದ್ರ ಸರ್ಕಾರ ಅಡಕೆ ಆಮದಿನ ಮೇಲೆ ಹತೋಟಿಯನ್ನು ತರುವ ಪ್ರಯತ್ನ ಮಾಡುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಸುಮಾರು 60 ಶಾಸಕರು ಅಡಕೆ ಬೆಳೆಯುವ ಪ್ರದೇಶದಿಂದಲೇ ಆಯ್ಕೆಯಾಗಿದ್ದಾರೆ. ಹಿಂದಿನ ಸರ್ಕಾರವು ಬೆಳೆಗಾರರ ಹಿತಕ್ಕೆ ಬದ್ಧವಾಗಿತ್ತು. ಹೀಗಾಗಿ ಈ ಬಾರಿಯೂ  ಬೆಂಬಲ ನಮಗೆ ದೊರೆಯುವ ವಿಶ್ವಾಸವಿದೆ ಎಂದು ತಿಳಿಸಿದರು. ಎಲ್ಲರ ಸಹಕಾರವಿದ್ದರೆ ಮಾತ್ರ ಇಲ್ಲಿನ ಶಾಖೆ ಉನ್ನತಿಗೇರಲು ಸಾಧ್ಯ. ಈ ಬಾರಿ ಡಿವಿಡೆಂಟ್ ಹೆಚ್ಚು ಕೊಡಲಾಗುವುದು ಎಂದರು.
ವೇಣೂರು ಗ್ರಾ.ಪಂ. ಅಧ್ಯಕ್ಷ ದೇಜಪ್ಪ ಶೆಟ್ಟಿ ಶುಭ ಹಾರೈಸಿದರು. ಕ್ಯಾಂಪ್ಕೋ ಉಪಾಧ್ಯಕ್ಷ ಸತೀಶ್ಚಂದ್ರ ಭಂಡಾರಿ, ಕಾರ್ಯನಿರ್ವಾಹಕ ನಿರ್ದೇಶಕ ಸುರೇಶ್ ಭಂಡಾರಿ, ವಲಯ ಪ್ರಬಂಧಕ ಜಿ.ಕೆ. ಅರಿಗ, ಕಟ್ಟಡದ ಮಾಲಿಕ ಪ್ಯೂಬರ್ಟ್ ಪಿರೇರಾ, ಕೃಷಿಕರಾದ ಡಾ.ಬಿ.ಪಿ. ಇಂದ್ರ, ನಾರಾಯಣ ಭಟ್, ಎಂ.ಪಿ. ಭಟ್, ಭಾಸ್ಕರ ಪೈ, ಬಾಲ್ಯ ಶಂಕರ ಭಟ್ ಮತ್ತಿತರರು ಇದ್ದರು. ದಡ್ಡು ಬಾಲಕೃಷ್ಣ ಭಟ್ ಅವರು ಅಡಕೆ ಖರೀದಿಸುವ ಮೂಲಕ ಕೇಂದ್ರದ ವ್ಯವಹಾರಕ್ಕೆ ಚಾಲನೆ ನೀಡಿದರು. ಶಾಖಾ ಪ್ರಬಂಧಕ ಜಿನೇಂದ್ರ ಸ್ವಾಗತಿಸಿ, ವಂದಿಸಿದರು. ವೇಣೂರು ಸಿ.ಎ. ಸಂಘದ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್ ಕಾರ್ಯಕ್ರಮ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement