ಕೋಟ: ಕವಿರತ್ನ ಕಾಳಿದಾಸ ಯಕ್ಷಗಾನ
ಕೋಟ: ಇಲ್ಲಿನ ಕೋಟ ಹೈಸ್ಕೂಲ್ ಸಮೀಪದ ನವಗ್ರಹ ದೇವಸ್ಥಾನದಲ್ಲಿ ಶ್ರೀಸಿದ್ಧಿ ಕ್ಷೇತ್ರ ಹಂದಟ್ಟು ಹಾಗೂ ರಂಗ ಸಂಪದ ಸಹಯೋಗದಲ್ಲಿ ಮೇ 17ರಂದು ಸಂಜೆ 6.30ಕ್ಕೆ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ 'ಕವಿರತ್ನ ಕಾಳಿದಾಸ' ಯಕ್ಷಗಾನ ಏರ್ಪಡಿಸಲಾಗಿದೆ. ಪ್ರಮುಖ ಪಾತ್ರಧಾರಿಗಳಾಗಿ ಸುಬ್ರಹ್ಮಣ್ಯ ಧಾರೇಶ್ವರ, ಬಳ್ಕೂರು ಕೃಷ್ಣಯಾಜಿ, ರಮೇಶ್ ಭಂಡಾರಿ, ಶ್ರೀಕಾಂತ್ ಶೆಟ್ಟಿ ಕಾರ್ಕಳ, ಮಂಕಿ ಈಶ್ವರ ನಾಯ್ಕ್, ಪರಮೇಶ್ವರ ಭಂಡಾರಿ, ಕೋಟ ಶಿವಾನಂದ, ಸುಜೀಂದ್ರ ಹಂದೆ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ವಿಠಲ ರಾವ್ ನಿಧನಕ್ಕೆ ಸಂತಾಪ
ಉಡುಪಿ: ಹಿಂದುಗಳ ಪವಿತ್ರ ತಾಣವಾದ ದತ್ತಪೀಠ ರಕ್ಷಣೆಯ ಕುರಿತಾಗಿ ದಶಕಕ್ಕಿಂತಲೂ ಅಧಿಕ ಕಾಲ ರಾಜ್ಯವ್ಯಾಪಿ ನಡೆದ ಹೋರಾಟ ಮತ್ತು ನ್ಯಾಯಾಂಗ ಹೋರಾಟಗಳಲ್ಲಿ ಮಹತ್ವಪೂರ್ಣ ಕಾರ್ಯನಿರ್ವಹಿಸಿದ ವಿಠಲ ರಾವ್ ಬಾಳೆಹೊನ್ನಾರು ಅವರ ನಿಧನಕ್ಕೆ ಹಿಂದೂ ಯುವಸೇನೆ ತೀವ್ರ ಸಂತಾಪ ವ್ಯಕ್ತಪಡಿಸಿದೆ. ದತ್ತಪೀಠದ ಚಾರಿತ್ರಿಕ ಹಿನ್ನಲೆ ಬಗ್ಗೆ ಮಹತ್ವವಾದ ದಾಖಲೆಗಳನ್ನು ಸಂಶೋಧಿಸಿ ನ್ಯಾಯಪೀಠದ ಮುಂದೆ ಹಾಜರುಪಡಿಸಿ ರಾಜ್ಯದ ಗಮನ ಸೆಳೆದಿದ್ದ ವಿಠಲ ರಾವ್ ಅವರ ಹೋರಾಟವನ್ನು ನಾಡಿನ ಬಹುಸಂಖ್ಯಾತ ಸಮಾಜ ಬಹುಕಾಲ ಸ್ಮರಿಸುತ್ತದೆ ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ ಎಂದು ಹಿಂದೂ ಯುವ ಸೇನೆ ಪ್ರಾರ್ಥಿಸಿದೆ.
ಪಿಯುಸಿ, ಎಸ್ಎಸ್ಎಲ್ಸಿ ಪರೀಕ್ಷೆ ಸಾಧನೆ
ಹೆಬ್ರಿ: ಹೆಬ್ರಿ ಎಸ್.ಆರ್. ಶಾಲೆಯ ವಿದ್ಯಾರ್ಥಿ ಸೋಮೇಶ್ವರದ ಶೈಲೇಶ್ ಹೇರಳೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 96.16 ಫಲಿತಾಂಶದೊಂದಿಗೆ 601 ಅಂಕ ಪಡೆದು ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಹಿರಿಯಡ್ಕ ಸರ್ಕಾರಿ ಪಪೂ ಕಾಲೇಜಿನ ವಿದ್ಯಾರ್ಥಿನಿ ಶೈಲಶ್ರೀ ಹೇರಳೆ ಪಿಯುಸಿ ಪರೀಕ್ಷೆಯಲ್ಲಿ ಶೇ. 87.33 ಫಲಿತಾಂಶದೊಂದಿಗೆ 524 ಅಂಕ ಪಡೆದು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಹೆಬ್ರಿ ಸೋಮೇಶ್ವರ ಶಾಲಿನಿ, ಲಕ್ಷ್ಮೀ ನಾರಾಯಣ ಹೇರಳೆ ದಂಪತಿ ಮಕ್ಕಳು.