'ಮಹಾಪುರುಷರು ಪಂಗಡಕ್ಕೆ ಸೀಮಿತ ಸಲ್ಲ'
ಉಡುಪಿ: ಮಹಾನ್ ಪುರುಷರನ್ನು ಇಂದು ಅವರು ಹುಟ್ಟಿದ ಸಮಾಜಕ್ಕೆ ಅಥವಾ ಪಂಗಡಕ್ಕೆ ಮಾತ್ರ ಸೀಮಿತಗೊಳಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದು ಸರಿಯಲ್ಲ, ಮಹಾನ್ ಪುರುಷರ ಮಾನವ ಸಮಾಜಕ್ಕೆ ಸೇರಿದವರು. ಅದೇ ರೀತಿ ಸಮಾಜದಲ್ಲಿದ್ದ ಮೇಲು ಕೀಳುಗಳ ವಿರುದ್ಧ ಶ್ರಮಿಸಿದ್ದ ಬಸವಣ್ಣ ಅವರನ್ನು ಕೇವಲ ಅವರು ಹುಟ್ಟಿದ್ದ ವೀರಶೈವ ಸಮಾಜಕ್ಕೆ ಮಾತ್ರ ಸೀಮಿತಗೊಳಿಸಬಾರದು ಎಂದು ಉಡುಪಿ ಜಿ.ಪಂ. ಅಧ್ಯಕ್ಷ ಉಪೇಂದ್ರ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾಜಗದ್ಗುರು ಬಸವಣ್ಣ ಧರ್ಮಾರ್ಥ ದತ್ತಿ (ರಿ) ಇದರ ಶಾಖೆ ಉಡುಪಿ ಇವುಗಳ ಸಹಯೋಗದಲ್ಲಿ ನಗರದ ನಿತ್ಯಾನಂದ ಮಠದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದ ಮಂಗಳೂರು ಗುರುಪುರ ಜಂಗಮ ಮಠದ ಪೂಜ್ಯ ಮು.ನಿ.ಪ್ರ. ರುದ್ರಮುನಿ ಮಹಾಸ್ವಾಮಿಗಳು ಆಶೀರ್ವಚಿಸಿದರು.
ಪೂರ್ವ ತಯಾರಿ ಅಗತ್ಯ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉಡುಪಿ ಜಿಲ್ಲಾ ಪಂಚಾಯಿತ್ ಮು.ಕಾ.ನಿ.ಅಧಿಕಾರಿ ಎಸ್. ಎ. ಪ್ರಭಾಕರ ಶರ್ಮ ಮಾತನಾಡಿ, ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವಾಗ ಸಾಕಷ್ಟು ಪೂರ್ವ ತಯಾರಿಗಳನ್ನು ನಡೆಸಲಾಗುತ್ತದೆ. ಆದರೆ ಬಸವಣ್ಣ ಅಥವಾ ಇತರ ಮಹಾನ್ ಪುರುಷರ ಹಬ್ಬಗಳ ಆಚರಣೆಯ ಸಂದರ್ಭ ಅವುಗಳನ್ನು ಹೇಗೆ ಆಚರಿಸಬೇಕು ಎನ್ನುವುದು ಸ್ಪಷ್ಟವಾಗಿಲ್ಲ, ಜಿಲ್ಲಾಡಳಿಕ್ಕೆ ಚರ್ಚಿಸುವುದಕ್ಕೂ ಅವಕಾಶ ಇಲ್ಲ ಎಂದರು.
ಇಂತಹ ಕಾರ್ಯಗಳನ್ನು ಒಂದು ಜಾತಿ, ಸಮಾಜಕ್ಕೆ ಸೀಮಿತಗೊಳಿಸುವುದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಸಂಖ್ಯೆಯೂ ತೀರಾ ಕಡಿಮೆಯಾಗುತ್ತದೆ ಎಂದವರು ಬೆರಳೆಣಿಕೆ ಸಭಾಸದರು ಮಾತ್ರ ಭಾಗವಹಿಸಿದ್ದ ಬಗ್ಗೆ ಸಂಘಟಕರ ಗಮನ ಸೆಳೆದರು.
ಉಡುಪಿ ವಿಚಾರ ವೇದಿಕೆ ಸಂಘದ ಅಧ್ಯಕ್ಷ ಗೋಪಾಲ್ ಶೆಟ್ಟಿ ಮುಖ್ಯ ಭಾಷಣಕಾರರಾಗಿ, ಬಸವಣ್ಣನವರು ವೈಚಾರಿಕತೆಗೆ ಒತ್ತು ನೀಡಿ ಇಡೀ ಸಮಾಜವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ದ ಯುಗಪುರುಷರು ವೈಚಾರಿಕಾ ಮನೋಭಾವ ಇಲ್ಲದಿದ್ದರೆ ಮನೋಭೂಮಿಕೆ ಬಂಜರಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ಕುಮಾರ್, ನಗರಸಭೆ ಪೌರಾಯುಕ್ತ ಗೋಕುಲ್ ದಾಸ್ ನಾಯಕ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿ ಅರುಣ್ ಕುಮಾರ್ ಸಾಂಗವಿ, ಲೇಖಕಿ ಜ್ಯೋತಿ ಗುರುಪ್ರಸಾದ್ ಭಾಗವಹಿಸಿದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಅಂಕುಶ ಸ್ವಾಗತಿಸಿದರು. ಮಹಾಜಗದ್ಗುರು ಬಸವಣ್ಣ ಧರ್ಮಾರ್ಥ ದತ್ತಿ ಶಾಖೆಯ ಜಗನ್ನಾಥಪ್ಪ ಪನಸಾಲೆ ಕಾರ್ಯಕ್ರಮ ನಿರೂಪಿಸಿದರು.
ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವಾಗ ಸಾಕಷ್ಟು ಪೂರ್ವ ತಯಾರಿಗಳನ್ನು ನಡೆಸಲಾಗುತ್ತದೆ. ಆದರೆ, ಬಸವಣ್ಣ ಅಥವಾ ಇತರ ಮಹಾನ್ ಪುರುಷರ ಹಬ್ಬಗಳ ಆಚರಣೆಯ ಸಂದರ್ಭ ಅವುಗಳನ್ನು ಹೇಗೆ ಆಚರಿಸಬೇಕು ಎನ್ನುವುದು ಸ್ಪಷ್ಟವಾಗಿಲ್ಲ, ಜಿಲ್ಲಾಡಳಿಕ್ಕೆ ಚರ್ಚಿಸುವುದಕ್ಕೂ ಅವಕಾಶ ಇಲ್ಲ. ಇಂತಹ ಕಾರ್ಯಗಳನ್ನು ಒಂದು ಜಾತಿ, ಸಮಾಜಕ್ಕೆ ಸೀಮಿತಗೊಳಿಸುವುದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಸಂಖ್ಯೆಯೂ ತೀರಾ ಕಡಿಮೆಯಾಗುತ್ತದೆ.
-ಎಸ್. ಎ. ಪ್ರಭಾಕರ ಶರ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಡುಪಿ ಜಿಲ್ಲಾ ಪಂಚಾಯಿತಿ