ಗುಂಪು ಘರ್ಷಣೆ: ಒಬ್ಬನಿಗೆ ಗಾಯ
ಕ.ಪ್ರ.ವಾರ್ತೆ ಬಂಟ್ವಾಳ ಮೇ 26
ಚುನಾವಣಾ ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಬಿ.ಸಿ. ರೋಡು ಸಮೀಪದ ಕೈಕಂಬದಲ್ಲಿ ಭಾನುವಾರ ಸಂಜೆ ಗುಂಪು ಘರ್ಷಣೆ ನಡೆದಿದೆ. ಘಟನೆಯಲ್ಲಿ ಒಬ್ಬರು ಗಾಯಗೊಂಡಿದ್ದು, ಬಸ್ಸು ನಿಲ್ದಾಣವೊಂದಕ್ಕೆ ಹಾನಿಯಾಗಿದೆ. ಎಸ್ಡಿಪಿಐ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರ ಮಧ್ಯೆ ಈ ಘಟನೆ ನಡೆದಿದ್ದು, ಪರಸ್ಪರ ಹೊಡೆದಾಟ, ಕಲ್ಲು ತೂರಾಟ, ಬಾಟ್ಲಿ ಎಸೆತ ನಡೆದಿದೆ. ಇತ್ತಂಡಗಳಿಂದ ಭಾರಿ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು, ಕೆಲಹೊತ್ತು ಕೈಕಂಬ ಪರಿಸರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿ ಗುಂಪನ್ನು ಚದುರಿಸಿದ್ದಾರೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ರಾತ್ರಿ ವೇಳೆ ಪರಿಸ್ಥಿತಿ ತಿಳಿಯಾಗಿದೆ. ಘಟನೆಯಲ್ಲಿ ಎಸ್ಡಿಪಿಐ ಕಾರ್ಯಕರ್ತ ಇಸಾಕ್ ಗೋಳ್ತಮಜಲು ಎಂಬವರು ಗಾಯಗೊಂಡಿದ್ದು, ಮಂಗಳೂರಿನ ಅಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಘಟನೆ ವಿವರ: ಸಂಜೆ ನಾಲ್ಕು ಗಂಟೆ ಸುಮಾರಿಗೆ ಕಲ್ಲಡ್ಕ ಪರಿಸರದಿಂದ ಬಂದ ಎಸ್ಡಿಪಿಐ ಪಕ್ಷದ ತಂಡವೊಂದು ಕೈಕಂಬದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದು ತಳ್ಳಾಟ, ಹೊಡೆದಾಟ ನಡೆಯಿತೆನ್ನಲಾಗಿದೆ. ನಂತರ ಅಲ್ಲಲ್ಲಿ ಜನ ಜಮಾಯಿಸತೊಡಗಿದ್ದು, ಎರಡು ಗುಂಪುಗಳೊಳಗೆ ಕಲ್ಲು ತೂರಾಟ, ಬಾಟ್ಲಿ ಎಸೆತ ಆರಂಭವಾಯಿತು. ಇತ್ತಂಡಗಳಿಂದಲೂ ನಾನಾ ಕಡೆಗಳ ಯುವಕರ ತಂಡ ಆಗಮಿಸಿ ಘರ್ಷಣೆ ತೀವ್ರಗೊಂಡಿತು. ಘರ್ಷಣೆ ವೇಳೆ ಕೈಕಂಬದಲ್ಲಿರುವ ಬಸ್ಸು ನಿಲ್ದಾಣವೊಂದು ಹಾನಿಗೊಳಗಾಗಿದೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಗುಂಪು ಚದುರಿಸಿದರು. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು ಪರಿಸ್ಥಿತಿ ಹತೋಟಿಗೆ ಬಂದಿದೆ.
ಭೂ ಒತ್ತುವರಿ ತಡೆಗೆ ಕ್ರಮ ಕೈಗೊಳ್ಳಿ: ವಾಟಾಳ್
ಮೈಸೂರು: ರಾಜ್ಯದಲ್ಲಿ ಭೂಗಳ್ಳರ ಕಾಟ ಮಿತಿಮೀರಿದ್ದು, ಲಕ್ಷಾಂತರ ಎಕರೆ ಭೂಮಿ ಒತ್ತುವರಿಯಾಗಿದೆ. ಇದನ್ನು ತಡೆಯಲು ಎ.ಟಿ. ರಾಮಸ್ವಾಮಿ, ಬಾಲಸುಬ್ರಹ್ಮಣ್ಯ, ಜಿ.ಕೆ. ರಾವ್, ತ.ಮ. ವಿಜಯ ಭಾಸ್ಕರ್ ಸಿದ್ಧಪಡಿಸಿರುವ ವರದಿ ಜಾರಿಗೆ ತರುವಂತೆ ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ವಾಟಾಳ್ ನಾಗರಾಜ್ ಮನವಿ ಮಾಡಿದರು. ಕನ್ನಡ ಚಳವಳಿ ಕೇಂದ್ರ ಸಮಿತಿಯು ಭಾನುವಾರ ಕಲಾಮಂದಿರದ ಮನೆಯಂಗಳದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಈ ವರದಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಜಾರಿಗೆ ತಂದಲ್ಲಿ ಭೂಗಳ್ಳತನಕ್ಕೆ ತಡೆವೊಡ್ಡಿದಂತಾಗುತ್ತದೆ. ಈ ಕಾರ್ಯಕ್ಕೆ ಕಂದಾಯ ಸಚಿವರಾದ ವಿ. ಶ್ರೀನಿವಾಸಪ್ರಸಾದ್ ಯಾರಿಗೂ ಹೆದರುವ ಅವಶ್ಯಕತೆ ಇಲ್ಲ ಎಂದು ಸಲಹೆ ನೀಡಿದರು.
ಮಚ್ಚು ಹಿಡಿದ ಯುವಕನಿಗೆ ಧರ್ಮದೇಟು
ಕುಣಿಗಲ್: ಪಾನಮತ್ತ ಯುವಕನೋರ್ವ ಸಿನಿಮೀಯ ರೀತಿಯಲ್ಲಿ ಮಚ್ಚು ಹಿಡಿದು, ಜನವಸತಿ ಪ್ರದೇಶದಲ್ಲಿ ಮನಬಂದಂತೆ ಬೀಸಿ, ನಾಗರಿಕರನ್ನು ಭೀತಿಗೊಳಿಸಿದಾತನನ್ನು ಸಾರ್ವಜನಿಕರು ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ. ವಿಶ್ವ ಎಂಬಾತ ಮದ್ದೂರು ರಸ್ತೆಯ ಮದ್ಯದಂಗಡಿ ಬಳಿ, ಈತನ ಸ್ನೇಹಿತ ಮೂರ್ತಿಯೊಂದಿಗೆ ಕ್ಷುಲಕ ಕಾರಣಕ್ಕೆ ಜಗಳವಾಡಿದ್ದಾನೆ. ಎರಡೂ ಕಡೆಯ ಹುಡುಗರು ಜಗಳಕ್ಕೆ ಇಳಿದಾಗ ಮದ್ಯದಂಗಡಿಯವರು ಸಮಾಧಾನಗೊಳಿಸಿ ಕಳುಹಿಸಿದ್ದರು. ನಂತರ ಪಾನಮತ್ತನಾಗಿದ್ದ ವಿಶ್ವ, ಮಚ್ಚು ಹಿಡಿದು ಜನವಸತಿ ಪ್ರದೇಶದಲ್ಲಿ ಭೀತಿಯ ವಾತಾವರಣ ನಿರ್ಮಿಸಿದ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಥಳಿಸಿದ್ದಾರೆ.