ಮೋದಿ ಬೆಂಬಲಿಗ, ಬಿಜೆಪಿ ಸೇರುವುದಿಲ್ಲ: ರಾಮ ಭಟ್
ಪುತ್ತೂರು: ಬಿಜೆಪಿ ಸದಸ್ಯನಾಗುವ ಸ್ವಾತಂತ್ರ್ಯವನ್ನು ತಾನು ಇನ್ನೂ ತನ್ನಲ್ಲಿಯೇ ಇರಿಸಿಕೊಂಡಿದ್ದೇನೆ. ಬಿಜೆಪಿಗೆ ಸೇರುತ್ತೇನೆ ಎಂದು ಎಲ್ಲೂ ಹೇಳಿಕೆ ನೀಡಿಲ್ಲ. ಮೋದಿ ಒಬ್ಬ ಯಶಸ್ವಿ ಮುಖ್ಯಮಂತ್ರಿ. ಆದ್ದರಿಂದ 'ನಾನು ಮೋದಿ ಬೆಂಬಲಿಗನೇ ಹೊರತು ಬಿಜೆಪಿಗಲ್ಲ' ಎಂದು ಹಿರಿಯ ರಾಜಕಾರಣಿ, ಪುತ್ತೂರಿನ ಮಾಜಿ ಶಾಸಕ ಕೆ. ರಾಮಭಟ್ ಉರಿಮಜಲು ಹೇಳಿದರು. ಸೋಮವಾರ ತನ್ನ ನಿವಾಸದಲ್ಲಿ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅವರು, ರಾಮ ಭಟ್ ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂಬ ಹೇಳಿಕೆಗಳ ಬಗ್ಗೆ ಪ್ರಶ್ನಿಸಿದಾಗ ತನ್ನ ನಿಲುವು ಸ್ಪಷ್ಟಪಡಿಸಿದರು. ನಾನ ಮೂಲ ಆರೆಸ್ಸೆಸ್ ಹಾಗೂ ಬಿಜೆಪಿಯಲ್ಲಿದ್ದರೂ ಪಕ್ಷದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಆರ್ಎಸ್ಎಸ್ ತೀರ್ಮಾನ ಕೈಗೊಳ್ಳುತ್ತಿರುವುದನ್ನು ವಿರೋಧಿಸಿ ನೋವಿನಿಂದ ಅದರಿಂದ ಹೊರಗೆ ಬಂದವನು. ಬಳಿಕ ಸ್ವಾಭಿಮಾನಿ ವೇದಿಕೆ ನಿರ್ಮಿಸಿ ಆ ಮೂಲಕ ಶಕುಂತಳಾ ಶೆಟ್ಟಿಯನ್ನು ಬೆಂಬಲಿಸಿದೆ. ಬಳಿಕ ಸಂಘದ ವರಿಷ್ಠರು ತನ್ನನ್ನು ಬೆಂಗಳೂರಿಗೆ ಕರೆಸಿಕೊಂಡು ಅವರಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡರು, ಅಲ್ಲದೆ ಮುಂದಿನ ದಿನಗಳಲ್ಲಿ ಇಂತಹ ಸ್ಥಿತಿ ಮರುಕಳಿಸಲಾರದು ಎಂದು ಭರವಸೆ ನೀಡಿದರು. ಅವರ ಆಶ್ವಾಸನೆಯಂತೆ ನಾನು ಹಿಂತಿರುಗಿ ಬಂದೆ ಎಂದರು. ಬಳಿಕ ಪುಣಚದಲ್ಲಿ ನಾಯಕರೊಂದಿಗೆ ಮಾತುಕತೆ ನಡೆದು ರಾಜಿಯಾಗಿ ಒಂದಾಗಲು ತೀರ್ಮಾನ ಕೈಗೊಳ್ಳಲಾಗಿತ್ತು. ಈ ಬಗ್ಗೆ ತಾನು ಮತ್ತು ಪ್ರಭಾಕರ ಭಟ್ ಕಲ್ಲಡ್ಕ, ಕೊಳ್ತಿಗೆ, ಕಂಬಳಬೆಟ್ಟು, ಪಡ್ನೂರು ಇನ್ನಿತರ ಕಡೆಗಳಲ್ಲಿ ಒಂದಾಗಿರುವ ಬಗ್ಗೆ ಜಂಟಿ ಹೇಳಿಕೆಯನ್ನೂ ನೀಡಿದ್ದೆವು ಎಂದರು.