ಸೌಜನ್ಯಾ ಪ್ರಕರಣ ಸಿಬಿಐಗೆ ಒಪ್ಪಿಸದಿದ್ದರೆ ಸಂಸತ್ನಲ್ಲಿ ಪ್ರಸ್ತಾಪ: ಪ್ರಕಾಶ್ ಕಾರಟ್
ಬೆಳ್ತಂಗಡಿ: ರಾಜ್ಯ ಸರ್ಕಾರ ಸೌಜನ್ಯಾ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಈ ವಿಚಾರವನ್ನು ಸಂಸತ್ನಲ್ಲಿ ಪ್ರಸ್ತಾಪಿಸಲಾಗುವುದು ಎಂದು ಸಿಪಿಐಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಹೇಳಿದ್ದಾರೆ.
ಧರ್ಮಸ್ಥಳ ಗ್ರಾಮದ ಪಾಂಗಾಳದಲ್ಲಿರುವ ಸೌಜನ್ಯಾ ಮನೆಗೆ ಭಾನುವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸೌಜನ್ಯಾ ಪ್ರಕರಣದ ತನಿಖೆ ಸರಿಯಾಗಿ ನಡೆದಿಲ್ಲ. ರಾಜ್ಯದ ಜನತೆ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಸೂಕ್ತ ಕ್ರಮ ಕೈಗೊಳ್ಳದೆ ವಿಳಂಬ ಮಾಡುತ್ತಿದೆ. ಈ ಪರಿಸರದಲ್ಲಿ ಹಿಂದೆಯೂ ಇಂತಹ ಪ್ರಕರಣಗಳು ನಡೆದಿದ್ದು, ಸ್ಥಳೀಯ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪವೂ ಇರುವ ಹಿನ್ನೆಲೆಯಲ್ಲಿ ಈ ಪ್ರಕರಣಕ್ಕೆ ಹೆಚ್ಚು ಮಹತ್ವವಿದೆ. ಹೀಗಾಗಿಯೇ ಕುಟುಂಬದವರು ಹಾಗೂ ಜನತೆ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಇನ್ನಾದರೂ ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯಾದ್ಯಂತ ಹೋರಾಟ: ಬೃಹತ್ ಪ್ರತಿಭಟನೆಗಳು ನಡೆದರೆ ಮಾತ್ರ ನ್ಯಾಯ ಸಿಗುವಂತಾಗಿದೆ. ಸೌಜನ್ಯಾ ಪ್ರಕರಣದಲ್ಲಿಯೂ ಒಂದು ವರ್ಷದವರೆಗೆ ತನಿಖೆ ವಿಳಂಬ ಮಾಡಲಾಗಿದೆ. ಇನ್ನು ಇದಕ್ಕೆ ಅವಕಾಶ ನೀಡುವುದಿಲ್ಲ. ರಾಜ್ಯಾದ್ಯಂತ ಸಿಪಿಐಎಂ ಈ ವಿಚಾರವನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲಿದ್ದು, ಸರ್ಕಾರದ ಮೇಲೆ ಒತ್ತಡ ತರಲಿದೆ ಎಂದು ಪ್ರಕಾಶ್ ಕಾರಟ್ ತಿಳಿಸಿದರು.
ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮ ರೆಡ್ಡಿ ಮಾತನಾಡಿ, ರಾಜ್ಯ ಸರ್ಕಾರ ಹಾಗೂ ಇತರ ರಾಜಕೀಯ ಪಕ್ಷಗಳು ಪ್ರಭಾವಿ ಶಕ್ತಿಗಳ ವಿರುದ್ಧ ಮಾತನಾಡಲು ಧೈರ್ಯ ತೋರಿಸುತ್ತಿಲ್ಲ. ಈ ಕಾರಣದಿಂದಾಗಿಯೇ ಪ್ರಕರಣದ ತನಿಖೆಯೂ ನಡೆಯುತ್ತಿಲ್ಲ. ಯಾವ ಶಕ್ತಿಯ ವಿರುದ್ಧ ಜನ ಅನುಮಾನ ವ್ಯಕ್ತಪಡಿಸುತ್ತಿದ್ದಾರೆಯೋ ಅವರ ಪರವಾಗಿ ಸಚಿವರು ಮಾತನಾಡುತ್ತಿದ್ದಾರೆ. ನಮ್ಮ ರಾಜಕೀಯ ಪಕ್ಷಗಳು ಯಾವ ಹಂತಕ್ಕೆ ಇಳಿದಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ನ್ಯಾಯ ದೊರಕುವವರೆಗೆ ಪಕ್ಷದ ಹೋರಾಟ ಮುಂದುವರಿಯಲಿದೆ ಎಂದರು.
'ಅಪರಾಧಿಗಳು ಸಿಗುವವರೆಗೆ ಹೋರಾಟ'
ಬೆಳ್ತಂಗಡಿ: 'ನೀವು ಯಾವುದಕ್ಕೂ ಹೆದರಬೇಡಿ. ನೈಜ ಅಪರಾಧಿಗಳನ್ನು ಕಾನೂನಿನ ಮುಂದೆ ತರುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ' ಎಂದು ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ಸೌಜನ್ಯಾ ಪೋಷಕರಿಗೆ ಸಾಂತ್ವನ ಹೇಳಿದರು.
ಸೌಜನ್ಯಾಳ ಮನೆಗೆ ಭೇಟಿ ನೀಡಿದ ಅವರು ಪೋಷಕರೊಂದಿಗೆ ಮಾತುಕತೆ ನಡೆಸಿದರು. ಕಾರಟ್ ಅವರೊಂದಿಗೆ ತಮ್ಮ ನೋವು ತೆರೆದಿಟ್ಟ ಸೌಜನ್ಯಾ ಮನೆಯವರು, 'ಈಗ ನಡೆಯುತ್ತಿರುವ ತನಿಖೆಗಳಲ್ಲಿ ನಮಗೆ ಯಾವುದೇ ನಂಬಿಕೆ ಇಲ್ಲ. ಸಿಬಿಐ ತನಿಖೆಯಾದರೆ ಏನಾದರೂ ನ್ಯಾಯ ಸಿಗಬಹುದೆಂದು ಭಾವಿಸಿದ್ದೇವೆ. ಅದಕ್ಕೆ ಅವಕಾಶ ಮಾಡಿಕೊಡಿ. ನಮ್ಮ ಮಗುವಿಗಾದ ಅನ್ಯಾಯ ಇನ್ಯಾರಿಗೂ ಆಗಬಾರದು' ಎಂದರು. ಸಿಪಿಐಎಂ ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮ ರೆಡ್ಡಿ, ಮುಖಂಡರಾದ ವಸಂತ ಆಚಾರಿ, ಬಿ.ಎಂ.ಭಟ್, ಶಿವಕುಮಾರ್, ಸುಕನ್ಯಾ, ಡಿವೈಎಫ್ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ, ಶೇಖರ ಲಾಯಿಲ, ಸಾಹಿತಿ ಅತ್ರಾಡಿ ಅಮೃತಾ ಶೆಟ್ಟಿ ಇದ್ದರು.