ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಮಾಲೇಗಾಂವ್ ಸ್ಫೋಟ: ಆರೋಪಿ ಪತ್ತೆಗೆ ಕಡಬಕ್ಕೆ ಬಂದ ಎನ್‌ಐಎ ಅಧಿಕಾರಿಗಳು

Srinivasa Murthy VN
Updated On : 19 Sept 2013, 1:23 am

ಕ.ಪ್ರ.ವಾರ್ತೆ ಉಪ್ಪಿನಂಗಡಿ ಸೆ. 18
ಮಾಲೇಗಾಂವ್ ಸ್ಫೋಟದ ಆರೋಪಿಗಳಲ್ಲಿ ಒಬ್ಬನಾದ ನೂಜಿಬಾಳ್ತಿಲ ಗ್ರಾಮದ ಕಟ್ಟತ್ತಡ್ಕ ಸೋಮರಾಜನ್ ಎಂಬುವರ ಪುತ್ರ ಜಯಪ್ರಕಾಶ್ ಅಲಿಯಾಸ್ ಜಯಣ್ಣ (42) ಎಂಬಾತನ ಪತ್ತೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಬುಧವಾರ ಕಡಬಕ್ಕೆ ಆಗಮಿಸಿದ್ದರು.  ಜಯಪ್ರಕಾಶ್ ಭಾವಚಿತ್ರದ ಪೋಸ್ಟರ್‌ಗಳನ್ನು ಕಂದಾಯ ಇಲಾಖೆಯ ಗೋಡೆಗೆ ಹಚ್ಚಿ ಪತ್ತೆ ಕಾರ್ಯಕ್ಕೆ ಸಾರ್ವಜನಿಕರ ಸಹಕಾರ ಕೋರಿದರು.
ಹೈದರಾಬಾದ್‌ನಿಂದ ಆಗಮಿಸಿದ ಎನ್‌ಐಎ ಅಧಿಕಾರಿಗಳಾದ ರಾಜ ಸುಬ್ರಹ್ಮಣ್ಯ, ಯು. ಪುರುಷೋತ್ತಮ ಅವರು ಆರೋಪಿಯ ಮೂಲ ನೆಲೆಯಾದ ಕಡಬ ಪರಿಸರದಲ್ಲಿ ಆತನ ಚಲನವಲನ ಕಂಡು ಬಂದಲ್ಲಿ ಮಾಹಿತಿ ನೀಡಲು ಸಹಾಯಕವಾಗುವ ಬಿತ್ತಿ ಪತ್ರಗಳನ್ನು ಕಂದಾಯ ಇಲಾಖಾ ಕಚೇರಿಯ ಗೋಡೆಯಲ್ಲಿ ಹಚ್ಚಿದರು.
ಮಾಲೇಗಾಂವ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿ ಹಲವಾರು ಮಂದಿ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರು ಮಂದಿ ಜೈಲಿನಲ್ಲಿದ್ದು,  ಜಯಪ್ರಕಾಶ್ ಸೇರಿದಂತೆ ನಾಲ್ವರು ಪರಾರಿಯಾಗಿದ್ದಾರೆ. ಆರೋಪಿಯ ಸುಳಿವು ನೀಡಿದಲ್ಲಿ ರು. 25 ಸಾವಿರ ಬಹುಮಾನ ನೀಡುವುದಾಗಿಯೂ ಭಿತ್ತಿ ಪತ್ರದಲ್ಲಿ ತಿಳಿಸಲಾಗಿದೆ.
 ಕಡಬ ಸಮೀಪದ ನೂಜಿಬಾಳ್ತಿಲ ಗ್ರಾಮದ ಕಟ್ಟತ್ತಡ್ಕ ಸೋಮರಾಜನ್ ಅವರ ಪುತ್ರನಾಗಿರುವ ಜಯಪ್ರಕಾಶ್ ಕಳೆದ 8 ವರ್ಷಗಳಿಂದ ಮನೆ ಬಿಟ್ಟು ಹೊರಗಿರುವ ಮಾಹಿತಿ ಇದೆ. ವೈಯಕ್ತಿಕವಾಗಿ ಎಲೆಕ್ಟ್ರಿಷಿಯನ್ ಆಗಿದ್ದ ಜಯಪ್ರಕಾಶ್ ಬಳಿಕ ಚಾಲಕನಾಗಿದ್ದ. ಬಳಿಕ ಯಾವ ವೃತ್ತಿಯನ್ನು ನಡೆಸುತ್ತಿದ್ದ ಎಂಬ ಬಗ್ಗೆ ಸ್ಥಳಿಯರಿಗೆ ಮಾಹಿತಿ ಇಲ್ಲ. ಬೆಳ್ತಂಗಡಿ ತಾಲೂಕು ಕಕ್ಕಿಂಜೆ ತೋಟತ್ತಾಡಿ ದಿ. ನಾರಾಯನ್ ಎಂಬವರ ಪುತ್ರಿ ಶೈಲಜಾ ಎಂಬಾಕೆಯನ್ನು ಮದುವೆಯಾಗಿದ್ದು, ಒಂದು ಮಗುವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement