ಮನೆಗೇ ಬಲೆ ಬೀಸಿ ಚಿರತೆ ಸೆರೆ!
ಮಣಿಪಾಲ: ಉಡುಪಿ ಜಿಲ್ಲೆಯಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ಅರಣ್ಯನಾಶದ ವಿರುದ್ಧ ಪ್ರತಿಭಟನೆಯೋ ಎಂಬಂತೆ ಕಾಡುಪ್ರಾಣಿಗಳು ಮನುಷ್ಯನ ವಾಸಸ್ಥಳಕ್ಕೆ ದಾಳಿ ನಡೆಸುವುದು ಹೆಚ್ಚಿದೆ. ಬುಧವಾರ ಚಿರತೆಯೊಂದು ಮಣಿಪಾಲದಲ್ಲಿ ಕಂಡು ಬಂದು ಕೆಲಕಾಲ ಸ್ಥಳೀಯರನ್ನು ಬೆಚ್ಚಿ ಬೀಳಿಸಿತು.
ನಂತರ ಅರಣ್ಯ ಇಲಾಖೆಯವರು ಆಗಮಿಸಿ ಚಿರತೆಯನ್ನು ಬಂಧಿಸಿ ಕುದುರೆಮುಖ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸಿದರು.
ವಿವರ: ಮಂಗಳವಾರ ಸಂಜೆ ಮಣಿಪಾಲ ವಿ.ವಿ.ಯ ಕಾವಲುಗಾರರು ಚಿರತೆಯನ್ನು ನೋಡಿದ್ದು, ಮಣಿಪಾಲದಲ್ಲಿ ಹುಲಿಯೊಂದು ತಿರುಗಾಡುತ್ತಿದೆ ಎಂದು ಅರಣ್ಯ ಇಲಾಖೆಗೆ ಕರೆ ಮಾಡಿ ತಿಳಿಸಿದ್ದರು. ಬುಧವಾರ ಬೆಳಗ್ಗೆ 9 ಗಂಟೆಗೆ ಮಣಿಪಾಲ ವಿ.ವಿ.ಯ ಮಾಧ್ಯಮ ಅಧಿಕಾರಿ ಸುರೇಶ್ ಕೋಟ್ಯಾನ್ ಅವರ ಮಗ ಶ್ರಾವಲ್ ತನ್ನ ಮನೆಯ ಮುಂಭಾಗದ ಹೂವಿನ ಗಿಡಗಳ ಮಧ್ಯೆ ಪ್ರಾಣಿಯೊಂದು ಇರುವುದನ್ನು ಕಂಡು ತಂದೆಗೆ ತಿಳಿಸಿದ, ಕೋಟ್ಯಾನ್ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಬಂದ ಇಲಾಖೆಯ ಅಧಿಕಾರಿಗಳು ಅದು ಹುಲಿಯಲ್ಲ, ಚಿರತೆ ಎಂದು ಗುರುತಿಸಿ, ಹೂವಿನ ಗಿಡಗಳ ಮಧ್ಯೆ ಬಲೆ ಬೀಸಿ ಹಿಡಿಯಲು ಯತ್ನಿಸಿದರು, ಆದರೆ ಚಿರತೆ ತಪ್ಪಿಸಿಕೊಂಡು ಓಡಿತು. ಅಷ್ಟರಲ್ಲಿ ಸುದ್ದಿ ಹರಡಿ ಸಾವಿರಾರು ಜನರು, ವಿ.ವಿ.ಯ ವಿದ್ಯಾರ್ಥಿಗಳು ಸ್ಥಳದಲ್ಲಿ ಸೇರಿದರು, ಕೊನೆಗೆ ಅವರನ್ನು ಪೊಲೀಸರು ನಿಯಂತ್ರಿಸಬೇಕಾಯಿತು. ಮಣಿಪಾಲದ ಕೆಎಂಸಿ ಆಸ್ಪತ್ರೆಯ ಸಿಬ್ಬಂದಿಗಳ ನೂರಾರು ವಸತಿ ಗೃಹಗಳ ನಡುವೆ ಓಡಿ ಕಣ್ಮರೆಯಾಗಿದ್ದ ಚಿರತೆ, ಸರೋಜಿನಿ ಪ್ರಫುಲ್ಲಾ ಎಂಬವರ ಮನೆಯ ಬಚ್ಚಲು ಕೋಣೆಯೊಳಗೆ ಅವಿತಿರುವುದು ಪತ್ತೆಯಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿ ಮನೆಯ ಸುತ್ತ ಬಲೆ ಕಟ್ಟಿ, ಬಚ್ಚಲು ಮನೆಯ ಬಾಗಿಲಿಗೆ ಬೋನು ಇರಿಸಿ, ಮಾಡಿನ ಹಂಚು ತೆಗೆದು ಚಿರತೆಯನ್ನು ಬಲವಂತವಾಗಿ ಬೋನಿನೊಳಗೆ ಹೋಗುವಂತೆ ಮಾಡಿದರು. ಉಡುಪಿ ಎಸ್ಪಿ ಡಾ. ಬೋರಲಿಂಗಯ್ಯ, ಕಾರ್ಕಳ ಡಿವೈಎಸ್ಪಿ ಅಣ್ಣಾಮಲೈ, ಉಡುಪಿ ವೃತ್ತ ನಿರೀಕ್ಷಕ ಮಾರುತಿ ನಾಯಕ್, ಉಡುಪಿ ಠಾಣಾಧಿಕಾರಿ ಮಧು ಮುಂತಾದವರು ಕಾರ್ಯಚರಣೆಯ ನೇತೃತ್ವ ವಹಿಸಿದ್ದರು.