ಕಲ್ಲಡ್ಕದಲ್ಲಿ ಮರುಕಳಿಸಿದ ಗುಂಪು ಘರ್ಷಣೆ, ನಿಷೇಧಾಜ್ಞೆ
ಬಂಟ್ವಾಳ: ಕಲ್ಲಡ್ಕದಲ್ಲಿ ಗುರುವಾರ ರಾತ್ರಿ ವ್ಯಕ್ತಿ ಮೇಲಿನ ಹಲ್ಲೆಯೊಂದಿಗೆ ಆರಂಭಗೊಂಡ ಹಿಂಸಾಚಾರ ಶುಕ್ರವಾರ ಮಧ್ಯಾಹ್ನ ಮರುಕಳಿಸಿದೆ.
ಇದಕ್ಕೆ ಸಂಬಂಧಿಸಿ ಬಂಟ್ವಾಳ ನಗರ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿದೆ. ತಾಲೂಕಿನಲ್ಲಿ ಮೂರು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಗುರುವಾರ ರಾತ್ರಿ ಕ್ಷುಲ್ಲಕ ವಿಚಾರಕ್ಕಾಗಿ ಉಂಟಾದ ಘರ್ಷಣೆಯ ಮುಂದುವರಿದ ಭಾಗವೆಂಬಂತೆ ಗುಂಪು ಘರ್ಷಣೆ ಹಾಗೂ ಕಲ್ಲು ತೂರಾಟ ನಡೆದಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಮಿಲಿಟರಿ ಪಡೆ ಹಾಗೂ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಗುರುವಾರ ನಡೆದದ್ದೇನು?: ಕೇಸರಿ ಶಾಲು ಧರಿಸಿದ್ದ ವ್ಯಕ್ತಿಯನ್ನು ಭಿನ್ನ ಕೋಮಿನ ವ್ಯಕ್ತಿ ದುರುಗುಟ್ಟಿ ನೋಡಿದಾಗ, ಶಾಲು ಧರಿಸಿದಾತನ ಸ್ನೇಹಿತರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಆತನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಅಲ್ಲದೆ ಹಲ್ಲೆಗೂ ಯತ್ನಿಸಿದ್ದಾರೆ. ಇದೇ ವೇಳೆ ಎರಡೂ ಸಮುದಾಯದ ಯುವಕರು ಜಮಾ ಯಿಸಿ ಉಭಯ ಕೋಮಿನ ಮಧ್ಯೆ ಮಾತಿ ನಚಕಮಕಿ, ಹಲ್ಲೆ ನಡೆದಿದೆ.
ಇದರಿಂದ ಗಾಯಗೊಂಡ ತೌಫೀಕ್, ಖಲೀಲ್, ಪೂರ್ಲಿಪ್ಪಾಡಿಯ ಅಮಿತ್ ಪೂಜಾರಿ, ರಾಜೇಶ್ ಪೂಜಾರಿ, ಪುಷ್ಪರಾಜ್ ಪೂಜಾರಿ, ರಮೇಶ್ ನಾಯಕ್, ಹರೀಶ್ ಎಂಬವರನ್ನು ಮಂಗಳೂರು, ತುಂಬೆ ಹಾಗೂ ಪುತ್ತೂರಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ವೇಳೆ ಕಲ್ಲೆಸೆತದಿಂದ ವಿಟ್ಲ ಕಡೆಗೆ ತೆರಳುತ್ತಿದ್ದ ಅಯ್ಯಪ್ಪ ವ್ರತಾಧಾರಿಗಳಿದ್ದ ವಾಹನಕ್ಕೂ ಹಾನಿಯಾಗಿದ್ದು ಮೂವರು ಗಾಯಗೊಂಡಿದ್ದಾರೆ. ಕಲ್ಲು ತೂರಾಟದಿಂದಾಗಿ ಕಲ್ಲಡ್ಕದ ಅಂಗಡಿ, ಮನೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳು ಹಾನಿಗೀಡಾಗಿವೆ.
ಶುಕ್ರವಾರ ಮತ್ತೆ ಗುಂಪು ಗಲಭೆ: ಗುರುವಾರ ರಾತ್ರಿ ನಡೆದ ಗುಂಪು ಘರ್ಷಣೆಯ ನಿಯಂತ್ರಣಕ್ಕೆ ರಾತೋರಾತ್ರಿ ಕೇರಳದ ಪೊಲೀಸ್ ಹಾಗೂ ಬಿಎಸ್ಎಫ್ ಯೋಧರನ್ನು ಕರೆಸಲಾಗಿತ್ತಾದರೂ ಅವರ ಸಮ್ಮುಖದಲ್ಲೇ ಶುಕ್ರವಾರ ಕಲ್ಲು ತೂರಾಟ, ಗುಂಪು ಘರ್ಷಣೆ ಸಂಭವಿಸಿದೆ. ಶುಕ್ರವಾರ ಬೆಳಗ್ಗೆ ಅರೆ ಸೇನಾ ಪಡೆಯ ಸಿಬ್ಬಂದಿ ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ಕಲ್ಲಡ್ಕ ಪರಿಸರದಲ್ಲಿ ಪಥ ಸಂಚಲನ ನಡೆಸಿದ್ದರು. ಆದರೂ, ಮಧ್ಯಾಹ್ನದ ವೇಳೆಗೆ ಉದ್ವಿಘ್ನ ಪರಿಸ್ಥಿತಿ ಮರುಕಳಿಸಿದೆ. ಇಲ್ಲಿನ ಹೈಸ್ಕೂಲ್ ರಸ್ತೆಯಲ್ಲಿ ಶುಕ್ರವಾರ ಪ್ರಾರ್ಥನೆಗೆಂದು ಮಸೀದಿಗೆ ತೆರಳುತ್ತಿದ್ದ ಇಬ್ಬರು ಯುವಕರಿಗೆ ತಂಡವೊಂದು ಕಲ್ಲೆಸೆದಿರುವುದೇ ಘರ್ಷಣೆಗೆ ಕಾರಣವೆನ್ನಲಾಗಿದೆ.