ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ದೃಶ್ಯ ಮಾಧ್ಯಮ ಆಕರ್ಷಣೆ ನಡುವೆಯೂ ಪತ್ರಿಕೆ ಅಸ್ತಿತ್ವ ಉಳಿಸಿಕೊಂಡಿದೆ: ಅಮೃತ್

Srinivasa Murthy VN
Updated On : 2 Aug 2014, 1:11 am

ಕಾರ್ಕಳ: ಜಾಹೀರಾತು ನೀಡುವವರನ್ನು ಓಲೈಸಲೇಬೇಕಾದ ಒತ್ತಡಕ್ಕೆ ಮಾಧ್ಯಮ ಸಿಲುಕಿರುವ ವಿಷಾದನೀಯ. ಈ ಪರಿಸ್ಥಿತಿಯಲ್ಲಿ ಜನಪರ ಕಾಳಜಿಯ ಹೋರಾಟ, ಸಾಮಾಜಿಕ ಸ್ಪಂದನದ ವರದಿಗಳ ಮಹತ್ವ ಕಡಿಮೆಯಾಗದಿರಲಿ ಎಂದು ಉಡುಪಿಯ ಉದ್ಯಮಿ, ರಾಜಕೀಯ ಮುಖಂಡ ಅಮೃತ್ ಶೆಣೈ ಹೇಳಿದರು.
ಅವರು ಸ್ಥಳೀಯ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ಹೊಸ ಸಂಜೆ ಬಳಗ, ಸಾಹಿತ್ಯ ಸಂಘದ ಸಹಯೋಗದೊಂದಿಗೆ ಆಯೋಜಿಸಿದ 'ಪತ್ರಿಕಾ ದಿನಾಚರಣೆ' ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಸ್ತುನಿಷ್ಠತೆ ಕಾಪಾಡಿಕೊಂಡು ಅರ್ಹ ಸುದ್ದಿಗಳನ್ನು ಕಡೆಗಣಿಸದೆ ಆದ್ಯತೆಯ ನೆಲೆಯಲ್ಲಿ ಪ್ರಕಟಿಸಬೇಕು. ಹಾಗಾದಾಗ ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ಇನ್ನಷ್ಟು ಗಟ್ಟಿಯಾಗುವುದು. ದೃಶ್ಯ ಮಾಧ್ಯಮದ ಎಲ್ಲಾ ಆಕರ್ಷಣೆಯ ನಡುವೆಯೂ ವೃತ್ತ ಪತ್ರಿಕೆಗಳು ಅಸ್ತಿತ್ವವನ್ನು ಉಳಿಸಿಕೊಂಡಿವೆ. ಕೆಲ ದೃಶ್ಯ ಮಾಧ್ಯಮಗಳು ಟಿಆರ್‌ಪಿ ಏರಿಸುವ ರಭಸದಲ್ಲಿ ಪ್ರಚೋದನಾಕಾರಿ ಪ್ರವೃತ್ತಿ ತೋರುವ ಬಗ್ಗೆ ಖೇದ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣಗಳ ಉಪಯೋಗ, ಅದರ ಕಡೆಗೆ ಧಾವಂತ ಮುಂತಾದ ಪ್ರಭಾವಗಳ ಬೆನ್ನು ಹತ್ತಿರುವ ನಾವಿಂದು ಸದಾಚಾರ, ಸತ್‌ಚಿಂತನೆಗಳನ್ನು ಮರೆಯಬಾರದು. ಆಧುನಿಕ ಬದಲಾವಣೆಗೆ ಒಗ್ಗಿಕೊಳ್ಳುವುದು ಅನಿವಾರ್ಯವಿದ್ದರೂ ನಮ್ಮ ಮನುಷ್ಯತ್ವ ಮತ್ತು ಸಂಸ್ಕೃತಿ ಸಂಸ್ಕಾರಗಳಿಗೆ ಭಂಗ ಬಾರದಂತೆ ಎಚ್ಚರವಹಿಸಬೇಕು. ಹಸುಳೆಗಳ ಮೇಲಿನ ಅತ್ಯಾಚಾರ ಘಟನೆಗಳನ್ನು ಕೇಳಿದಾಗ ಸಮಾಜ ಅಪಾಯಕಾರಿ ತಿರುವಿನಲ್ಲಿರುವುದು ನೈತಿಕ ಅಧಃಪತನಕ್ಕೆ ಕನ್ನಡಿ ಹಿಡಿಯುತ್ತದೆ ಎಂದರು.
ಪತ್ರಕರ್ತ ಧನಂಜಯ ಮೂಡುಬಿದಿರೆ ಮಾತನಾಡಿ, ಹಳೆಕಾಲದ ಪತ್ರಕರ್ತರಿಗೆ ತಮ್ಮ ವೃತ್ತಿಯಲ್ಲಿ ದೊರಕುತ್ತಿದ್ದ ಆತ್ಮ ಸಂತೃಪ್ತಿ ಇಂದಿಲ್ಲ. ಹಣದ ಅಟ್ಟಹಾಸ ವೃತ್ತಿ ಜೀವನದ ಮೇಲೂ ಕೆಟ್ಟ ಪ್ರಭಾವ ಬೀರಿದೆ. ಆದರೆ, ವಸ್ತುನಿಷ್ಠತೆ ಮತ್ತು ಸರಳ ಬದುಕು ನಮ್ಮದಾಗಿಸಿಕೊಂಡರೆ ವೃತ್ತಿಯ ಘನತೆ ಗೌರವಗಳು ಉಳಿದುಕೊಳ್ಳುತ್ತವೆ. ಹಣ ಮತ್ತು ಗೌರವದ ನಡುವೆ ಮೊದಲನೆಯದನ್ನು ತ್ಯಾಗ ಮಾಡಿದರೆ ಎರಡನೆಯದ್ದು ತಾನಾಗಿಯೇ ಉಳಿದುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ಪದ್ಮಾಕರ ಭಟ್, ಕಾರ್ಕಳ ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಶ್ರವಣ್ ಜೈನ್, ಹೊಸ ಸಂಜೆ ಬಳಗದ ಅಧ್ಯಕ್ಷ ಆರ್. ದೇವರಾಯ ಪ್ರಭು ಇದ್ದರು.
ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಸಂಘದ ಅಧ್ಯಕ್ಷ ಡಾ. ಅಶೋಕ್ ಕ್ಲಿಫರ್ಡ್ ಡಿ' ಸೋಜ ಸ್ವಾಗತಿಸಿದರು. ಶ್ವೇತಾ ಕಾರ್ಯಕ್ರಮ ನಿರ್ವಹಿಸಿದರು. ಸಾಹಿತ್ಯ ಸಂಘದ ಕಾರ್ಯದರ್ಶಿ  ಶುಭಾರಾವ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement