ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಪಂಚಮಿ ಸಂಭ್ರಮ; ಬೆಲೆ ಗಗನಮುಖಿ

Srinivasa Murthy VN
Updated On : 2 Aug 2014, 1:11 am

ಉಡುಪಿ: ಹಿಂಗಾರ ಹೂವು 80ರಿಂದ 100 ರು, ಮಾರುದ್ದ ಕಾಕಡ, ಸೇವಂತಿಗೆ ಹೂವು 60ರಿಂದ 70 ರು,  ಕೇದಗೆ ಹೂವು 50ರಿಂದ 70 ರು, ಬಾಳೆಹಣ್ಣು ಕೆಜಿಗೆ 50ರಿಂದ 70 ರು, ಸಾಮಾನ್ಯ ಸೀಯಾಳ 20ರಿಂದ 30 ರು, ಕೆಂದಾಳೆ 30ರಿಂದ 40 ರು! ಇದು ಈ ವಸ್ತುಗಳು ಗುರುವಾರ ಸಂಜೆ ಮತ್ತು ಶುಕ್ರವಾರ ಮುಂಜಾನೆ ಉಡುಪಿಯಲ್ಲಿ ಮಾರಾಟವಾಗುತ್ತಿದ್ದ ಬೆಲೆ. ಈ ವಸ್ತುಗಳು ಇಷ್ಟು ದುಬಾರಿಯಾಗುವುದಕ್ಕೆ ಕಾರಣ ಶುಕ್ರವಾರ ನಾಗರಪಂಚಮಿ. ನಾಗನಿಗೆ ಪೂಜೆ ಮಾಡುವುದಕ್ಕಾಗಿ ಜನರಿಂದ ಇವುಗಳಿಗೆ ವಿಪರೀತ ಬೇಡಿಕೆ ಇತ್ತು. ಆದ್ದರಿಂದ ವ್ಯಾಪಾರಿಗಳು ಸಿಕ್ಕಿದ್ದೇ ಸೀರುಂಡೆ ಎಂಬಂತೆ ಒಂದಕ್ಕೆರಡು ಬೆಲೆ ಏರಿಸಿದ್ದರು.
ಜಿಲ್ಲಾದ್ಯಂತ ಶುಕ್ರವಾರ ಸಂಭ್ರಮದ ನಾಗರಪಂಚಮಿ ಆಚರಣೆ ನಡೆಯಿತು. ಎಲ್ಲಾ ನಾಗಬಲ, ಮೂಲಸ್ಥಾನಗಳಲಿ ನಾಗನಿಗೆ ತನು ಎರೆಯಲಾಯಿತು. ಮೀನುಗಾರರಿಗೆ, ಕೃಷಿಕರಿಗೆ ಈ ಹಬ್ಬ ವಿಶೇಷ ಮಹತ್ವ ಇದೆ. ನಾಗನಿಗೆ ಹೊಯ್ದ ತನು ಸಮುದ್ರ ಸೇರಿದರೆ ಮುಂದಿನ ಋತುವಿನಲ್ಲಿ ಒಳ್ಳೆಯ ಮೀನಿನ ಫಸಲು ಸಿಗುತ್ತದೆ ಎನ್ನುವ ನಂಬಿಕೆ ಮೀನುಗಾರರದ್ದು. ಗದ್ದೆಯಲ್ಲಿ ಒಳ್ಳೆಯ ಬೆಳೆಯಾಗುತ್ತದೆ ಎನ್ನುವ ನಂಬಿಕೆ ರೈತರದ್ದು.
ಕರಾವಳಿಯಲ್ಲಿ ಪಂಚಮಿಯಂದು ಮಳೆ ಬಂದೇ ಬರುತ್ತದೆ ಎನ್ನುವ ನಂಬಿಕೆ ವಾಡಿಕೆ ಇದೆ. ಅದರಂತೆ ಶುಕ್ರವಾರ ನಾಗನಿಗೆ ತನು ಎರೆಯುವುದಕ್ಕೂ ಆಗದಷ್ಟು ಮಳೆಯಾಗಿದೆ.
ಮಳೆಯ ನಡುವೆಯೇ ಭಕ್ತರು ತನು ಎರೆದಿದ್ದಾರೆ. ಆದ್ದರಿಂದ ಈ ಬಾರಿ ಮಳೆಯ ನೀರಿನೊಂದಿಗೆ ಸೇರುವ ತನು ಹೊಳೆ, ನದಿ ಸೇರಿ ಖಂಡಿತವಾಗಿಯೂ ಸಮುದ್ರ ಸೇರಿಯೇ ಸೇರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement