ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ವಿವಿಧೆಡೆ ನಾಗರ ಪಂಚಮಿ ಸಂಭ್ರಮ

Srinivasa Murthy VN
Updated On : 2 Aug 2014, 1:12 am

ಮಡಿಕೇರಿ: ವಿಶೇಷ ಪೂಜೆ, ಪಾರ್ಥನೆ
ಮಡಿಕೇರಿ: ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನದ ನಾಗರಪಂಚಮಿ ಹಬ್ಬವನ್ನು ಜಿಲ್ಲಾದ್ಯಂತ ಮಹಿಳೆಯರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ನಾಗರಕಲ್ಲಿಗೆ ಮತ್ತು ಸುಬ್ರಹ್ಮಣ್ಯ ದೇವರಿಗೆ ಭಕ್ತಿ ಭಾವದಿಂದ ಮಹಿಳೆಯರು  ಪೂಜೆ, ಪ್ರಾರ್ಥನೆ ಸಲ್ಲಿಸುವ ಮೂಲಕ ಪಂಚಮಿ ಹಾಗೂ ಒಡಹುಟ್ಟಿದವರ ಹಬ್ಬವನ್ನು ಅರ್ಥಪೂರ್ಣಗೊಳಿಸಿದರು.
ಮಡಿಕೇರಿಯಲ್ಲಿ ಅನೇಕರು ಕುಟುಂಬ ಸಮೇತರಾಗಿ ನಾಗರ ಕಲ್ಲಿಗೆ ಹಾಲು ನೀರಿನಿಂದ ತನಿ ಎರೆದರು. ಅಕ್ಕಿಹಿಟ್ಟು, ಕಡಲೆಕಾಳು ಸೇರಿಸಿದ ಮಿಶ್ರಣವನ್ನಿಟ್ಟು ವಿಶೇಷ ಪೂಜೆ ಸಲ್ಲಿಸಿದರು. ನೈವೇದ್ಯಕ್ಕೆ ಎಳ್ಳು ಮತ್ತು ಬೆಲ್ಲ ಸೇರಿಸಿ ಮಾಡುವ ಸಿಹಿ ತಿಂಡಿ ಚಗಳಿ, ಅಕ್ಕಿ ಬೆಲ್ಲ ಸೇರಿಸಿ ಮಾಡುವ ಸಿಹಿ ತಿನಿಸಾದ ತಂಬಿಟ್ಟು, ಕಾಯಿ ಕಡುಬು, ಉದ್ದಿನ ಕಡುಬನ್ನು ತಯಾರಿಸಿ ನೈವೇದ್ಯ ಮಾಡಿ ಹಂಚುವ ಮೂಲಕ ನಾಗರ ಪಂಚಮಿ ಸಂಭ್ರಮವನ್ನು ಹಂಚಿಕೊಂಡರು.
ಮಡಿಕೇರಿಯ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯ, ಕೋಟೆ ಮಾರಿಯಮ್ಮ ದೇವಾಲಯ, ದಂಡಿನ ಮಾರಿಯಮ್ಮ ಹಾಗೂ ಬ್ರಾಹ್ಮಣರ ಬೀದಿಯ ಅಶ್ವತ್ಥ ಕಟ್ಟೆಗೆ ಮುಂಜಾನೆಯಿಂದಲೇ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಹುತ್ತ ಮತ್ತು ನಾಗ ಕಲ್ಲಿಗೆ ಕ್ಷೀರಾಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
ಎಲ್ಲಾ ಸುಬ್ರಹ್ಮಣ್ಯ ದೇವಾಲಯಗಳಲ್ಲೂ ವಿಶೇಷ ಪೂಜೆ ನಡೆಯಿತು.

ಸೋ.ಪೇಟೆ: ಪೂಜೆ, ಅಭಿಷೇಕ
ಸೋಮವಾರಪೇಟೆ: ನಾಗರ ಪಂಚಮಿಯ ಅಂಗವಾಗಿ ನಗರ ಸೇರಿದಂತೆ ಸುತ್ತಮುತ್ತಲ ದೇವಾಲಯ, ನಾಗಬನಗಳಲ್ಲಿ ಭಕ್ತಾಧಿಗಳು ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದ್ದು ಕಂಡು ಬಂತು.
ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನವಾದ ಶುಕ್ರವಾರ ನಾಗರ ಪಂಚಮಿ ಆಚರಣೆಗಾಗಿ ನಾಗ ದೈವಗಳ ಆರಾಧಿಸಿದರು.
ನಗರದ ಕಕ್ಕೆಹೊಳೆ ಸಮೀಪದ ಶ್ರೀ ಮುತ್ತಪ್ಪ, ಅಯ್ಯಪ್ಪಸ್ವಾಮಿ ದೇವಾಲಯ ಆವರಣದಲ್ಲಿನ ನಾಗರಾಜ ಹಾಗೂ ನಾಗಕನ್ಯೆ ವಿಗ್ರಹಗಳಿಗೆ ದೇವಾಲಯದ ಪ್ರಧಾನ ಅರ್ಚಕ  ಮಣಿಕಂಠನ್ ನಂಬೂಧರಿ ಪೌರೋಹಿತ್ಯದಲ್ಲಿ ಪೂಜೆ ನಡೆಯಿತು.
ಈ ಸಂದರ್ಭ ನಾಗ ದೈವಗಳಿಗೆ ಸಿಯಾಳ, ಚಂದನ, ಹರಿದ್ವರ್ಣ, ಹಾಲು, ಮೊಸರು ಸೇರಿದಂತೆ ವಿವಿಧ ಅಭಿಷೇಕಗಳು ನಡೆಯಿತು.
ನಗರದ ಸೋಮೇಶ್ವರ ದೇವಾಲಯ, ಕಟ್ಟೆಬಸವೇಶ್ವರ ದೇವಾಲಯ, ಆನೆಕೆರೆ ಬಳಿ ಇರುವ ನಾಗ ವಿಗ್ರಹಗಳಿಗೆ ಸೇರಿದಂತೆ ನಗರದ ಹೊರ ವಲಯದಲ್ಲಿರುವ ದೇವಾಲಯಗಳಲ್ಲಿಯೂ ವಿಶೇಷ ಪೂಜೆಗಳು ನೆರವೇರಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement