ಗೋಕರ್ಣ ಕಾಣಿಕೆ ಡಬ್ಬಿ ದೋಚಿದ್ದವನ ಸೆರೆ
ಗೋಕರ್ಣ: ಇಲ್ಲಿನ ಮಹಾಬಲೇಶ್ವರ ಮಂದಿರದಲ್ಲಿ ಎರಡು ವರ್ಷ ಹಿಂದೆ ನಡೆಸಲಾದ ಕಾಣಿಕೆ ಡಬ್ಬಿ ದರೋಡೆಯ ಒಬ್ಬ ಆರೋಪಿಯನ್ನು ರಾಜ್ಯ ಸಿಒಡಿ ತಂಡ ಬಂಧಿಸಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲವರಿದ್ದಾರೆಂಬ ಮಾಹಿತಿಯಿದ್ದು, ಅಧಿಕಾರಿಗಳು ದೃಢಪಡಿಸಿಲ್ಲ.
2012 ಆಗಸ್ಟ್ 24ರ ರಾತ್ರಿ ಮಹಾಬಲೇಶ್ವರ ದೇಗುಲದ ಒಳಪ್ರಾಕಾರದ ದಕ್ಷಿಣ ದ್ವಾರದ ಸರಳುಗಳನ್ನು ಬಗ್ಗಿಸಿ ನಂದಿ ಗೃಹ ಪ್ರವೇಶಿಸಿ, ಎರಡು ದೊಡ್ಡ ಕಾಣಿಕೆ ಹಂಡೆಗಳಲ್ಲಿದ್ದ ಹಣ ಹಾಗೂ ಚಿನ್ನಾಭರಣ ಅಪಹರಿಸಿದ್ದರು. ಆದರೆ, ನಾಣ್ಯಗಳನ್ನು ಬಿಟ್ಟುಹೋಗಿದ್ದರು. ಮಂದಿರದ ಹೊರ ಪ್ರಾಕಾರದ ದಕ್ಷಿಣ, ಪಶ್ಚಿಮ ಮಹಾದ್ವಾರಗಳ ಬೀಗ ಒಡೆಯದೇ ಈ ಕೃತ್ಯ ಎಸಗಿದ್ದರು. ಘಟನೆಗೆ ಸಂಬಂಧಿಸಿ ಸ್ಥಳೀಯ 42 ಜನರನ್ನು ವಿಚಾರಿಸಿದರೂ ಪೊಲೀಸರಿಗೆ ಸುಳಿವು ಸಿಕ್ಕಿರಲಿಲ್ಲ. ಮಾರ್ಚ್ ತಿಂಗಳಲ್ಲಿ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಒಡಿಗೆ ಹಸ್ತಾಂತರಿಸಿತ್ತು.