ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಸವಲತ್ತು ಸಹಿತ ಶಿಕ್ಷಣ ನೀಡುವುದು ಸಮಾಜದ ಕರ್ತವ್ಯ: ಪೇಜಾವರಶ್ರೀ

Srinivasa Murthy VN
Updated On : 5 Jun 2014, 12:54 pm

ಉಡುಪಿ: ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಲ್ಲಿ ಭಾಷಾಜ್ಞಾನ, ತತ್ವಜ್ಞಾನ, ತಂತ್ರಜ್ಞಾನ ಮತ್ತು ಸಂಸ್ಕೃತ ಜ್ಞಾನ ಅತ್ಯವಶ್ಯಕವಾಗಿದೆ. ಈ ಅವಶ್ಯಕತಗಳೊಂದಿಗೆ ಭವಿಷ್ಯದ ಗುರಿ ಸಾಧಿಸುವುದಕ್ಕೆ ಎಲ್ಲ ಸವಲತ್ತುಗಳುಳ್ಳ ಶಿಕ್ಷಣ ಒದಗಿಸುವುದು ಸಮಾಜದ ಕರ್ತವ್ಯವಾಗಿದೆ ಎಂದು ಉಡುಪಿ ಶ್ರೀ ಪೇಜಾವರ ಮಠಾಧೀಶ ಶ್ರೀವಿಶ್ವೇಶ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಇಲ್ಲಿನ ಕುಂಜಾರುಗಿರಿ ಸಮೀಪ ಪಾಜಕ ಕ್ಷೇತ್ರದಲ್ಲಿ ಪೇಜಾವರ ಮಠದ ಪಾಜಕ ಪ್ರತಿಷ್ಠಾನ ವತಿಯಿಂದ ಪ್ರಾರಂಭಿಸಲಾದ ಕೇಂದ್ರೀಯ ಪಠ್ಯಕ್ರಮ ಶಿಕ್ಷಣದ ನೂತನ ವಿದ್ಯಾ ಸಂಸ್ಥೆ 'ಆನಂದ ತೀರ್ಥ ವಿದ್ಯಾಲಯ' ಉದ್ಘಾಟಿಸಿ ಅವರು ಮಾತನಾಡಿದರು.
ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಶುಭ ಹಾರೈಸಿದರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಪ್ರಾದೇಶಿಕ ಪ್ರಬಂಧಕ ಸುಧಾಕರ್, ಎನ್‌ಐಟಿಕೆ ನಿವೃತ್ತ ಡೀನ್ ಡಾ.ಬಿ.ಆರ್. ಸಾಮಗ, ಕುರ್ಕಾಲು ಗ್ರಾ.ಪಂ. ಅಧ್ಯಕ್ಷ ಭುವನೇಶ್ ಪೂಜಾರಿ ಪ್ರಧಾನ ಅತಿಥಿಗಳಾಗಿದ್ದರು.
ಪಾಜಕ ಪ್ರತಿಷ್ಠಾನ ಉಪಾಧ್ಯಕ್ಷ ನಾಗರಾಜ ಬಲ್ಲಾಳ್ ಸ್ವಾಗತಿಸಿದರು. ಉಪಾಧ್ಯಕ್ಷ ವಿ.ಆರ್. ಸಾಮಗ ವಂದಿಸಿದರು. ಕುಂಜಾರು ಗಿರಿಜಾ ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಸುಧಾಕರ ಶೆಟ್ಟಿ ನಿರೂಪಿಸಿದರು.

ಮಹಾಲಕ್ಷ್ಮಿ ಬ್ಯಾಂಕ್‌ಗೆ ರು. 2.17 ಕೋಟಿ ಲಾಭ
ಉಡುಪಿ: ಉಡುಪಿ ಮತ್ತು ದ.ಕ.ದಲ್ಲಿ 8 ಶಾಖೆಗಳ ಮೂಲಕ ಕಾರ್ಯ ನಿರ್ವಹಿಸುತ್ತಿರುವ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ 2013- 14ನೇ ಆರ್ಥಿಕ ವರ್ಷದಲ್ಲಿ ರು. 2.17 ಕೋಟಿ ನಿವ್ವಳ ಲಾಭ ಗಳಿಸಿದೆ. ಪಾಲುದಾರರಿಗೆ ಶೇ. 18 ಲಾಭಾಂಶ ನೀಡಲು ನಿರ್ಧರಿಸಲಾಗಿದೆ. ಈ ಸಾಲಿನಲ್ಲಿ ಬ್ಯಾಂಕಿನ ಠೇವಣಿ ಮೊತ್ತ ರು. 89.43 ಕೋಟಿಗೆ ತಲುಪಿದ್ದು, ರು. 55.89 ಕೋಟಿ ಮುಂಗಡ ನೀಡಲಾಗಿದೆ. ನಿವ್ವಳ ಅನುತ್ಪಾದಕ (ಎನ್‌ಪಿಎ) ಪ್ರಮಾಣವು ಶೂನ್ಯವಾಗಿರುತ್ತದೆ ಎಂದು ಬ್ಯಾಂಕ್ ಅಧ್ಯಕ್ಷ ಆನಂದ ಎನ್. ಪುತ್ರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement