ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಹೂಗಳಿಲ್ಲದೆ ಸೊರಗಿದೆ 'ಪುಷ್ಪ ಹರಾಜು ಕೇಂದ್ರ'

Srinivasa Murthy VN
Updated On : 5 Jun 2014, 12:54 pm

-ಸುಭಾಶ್ಚಂದ್ರ ಎಸ್. ವಾಗ್ಳೆ
ಉಡುಪಿ: ಸುಮಾರು ರು. 2.50 ಕೋಟಿ ವೆಚ್ಚದಲ್ಲಿ ಭವ್ಯ, ವಿಶಾಲ, ಸುಸಜ್ಜಿತ ಪುಷ್ಪ ಹರಾಜು ಕೇಂದ್ರ ಉಡುಪಿ ನಗರದ ಹೊರಭಾಗದಲ್ಲಿರುವ ದೊಡ್ಡಣಗುಡ್ಡೆಯಲ್ಲಿ ನಿರ್ಮಾಣವಾಗಿ 2 ವರ್ಷಗಳೇ ಕಳೆದಿವೆ, ಆದರೆ ಪುಷ್ಪ ಹರಾಜು ಮಾತ್ರ ನಡೆಯುತ್ತಿಲ್ಲ!
ಉಡುಪಿ ಜಿಲ್ಲೆಯ 'ಉಡುಪಿ ಮಲ್ಲಿಗೆ'ಗೆ ವಿಶ್ವಪ್ರಸಿದ್ಧ. ಇದೇ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 2007ರಲ್ಲಿ ಈ ಹರಾಜು ಕೇಂದ್ರ ಮಂಜೂರಾಗಿತ್ತು. ನಂತರ ಅನುದಾನ ಬಿಡುಗಡೆಯಾಗಿ ಕಟ್ಟಡ ನಿರ್ಮಾಣವಾಗುವುದಕ್ಕೆ 5 ವರ್ಷಗಳು ಬೇಕಾದವು.
ಎಲ್ಲವೂ ಯೋಚಿಸಿದಂತೆ ನಡೆದಿದ್ದರೆ 2 ವರ್ಷಗಳಿಂದ ಈ ಕೇಂದ್ರದಲ್ಲಿ ಮಲ್ಲಿಗೆ ಹೂವಿನ ಹರಾಜು ನಡೆಯಬೇಕಾಗಿತ್ತು. ಆದರೆ ಉಡುಪಿ ಮಲ್ಲಿಗೆ ಬೆಳೆಗಾರರು ಜಪ್ಪಯ್ಯ ಅಂದರೂ ಈ ಹರಾಜು ಕೇಂದ್ರಕ್ಕೆ ಬರುವುದಕ್ಕೆ ಸಿದ್ಧರಾಗುತ್ತಿಲ್ಲ.
ಇಲ್ಲಿ ಮಾತ್ರವಲ್ಲ: ಉಡುಪಿ ಜೊತೆಗೆ ರಾಜ್ಯದ ಉತ್ತರ ಕನ್ನಡ, ಬೆಳಗಾವಿ, ದಾವಣಗೆರೆ, ತುಮಕೂರು, ಮಡಿಕೇರಿಗಳಲ್ಲಿಯೂ ಪುಷ್ಪ ಹರಾಜು ಕೇಂದ್ರಗಳು ಮಂಜೂರಾಗಿವೆ.
 ಅವುಗಳ ಪೈಕಿ ತುಮಕೂರಿನಲ್ಲಿ ಮಾತ್ರ ಪುಷ್ಪ ಹರಾಜು ಕೇಂದ್ರ ಕಾರ್ಯಾರಂಭಿಸಿದೆ. ಉಡುಪಿ ಮತ್ತು ದಾವಣಗೆರೆಯಲ್ಲಿ ಹರಾಜು ಕೇಂದ್ರಗಳ ನಿರ್ಮಾಣವಾಗಿವೆ. ಉಳಿದ ಕಡೆಗಳಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಪ್ರಕಾರ ಈ 6 ಜಿಲ್ಲೆಗಳು ರಾಜ್ಯದ ಪುಷ್ಪೋದ್ಯಮಕ್ಕೆ ಭಾರಿ ಅವಕಾಶ ಇರುವ ಜಿಲ್ಲೆಗಳು. ಮಡಿಕೇರಿ, ದಾವಣಗೆರೆ, ತುಮಕೂರು ಜಿಲ್ಲೆಗಳು ಪುಷ್ಪೋದ್ಯಮಕ್ಕೆ ಪ್ರಶಸ್ತ ಜಿಲ್ಲೆಗಳು ಹೌದು. ಆದರೆ ಉಡುಪಿ ಜಿಲ್ಲೆಯಲ್ಲಿ ಮಲ್ಲಿಗೆ ಹೊರತುಪಡಿಸಿ ಬೇರೆ ಹೂವಿನ ಬೆಳೆ ಇಲ್ಲ ಎನ್ನುವಷ್ಟು ಕಡಿಮೆ ಇದೆ. ಆದರೂ ಅದ್ಯಾವ ಮಾಯೆಯಲ್ಲಿಯೋ ಉಡುಪಿ ಜಿಲ್ಲೆಗೂ ಈ ಕೇಂದ್ರ ಮಂಜೂರಾಯಿತು.
ಕೇಂದ್ರ ಯಾಕೆ ವಿಫಲವಾಯ್ತು?: ಮಲ್ಲಿಗೆ ಉಡುಪಿ ಜಿಲ್ಲೆಯಲ್ಲಿ ಅಬ್ಬಬ್ಬ ಎಂದರೆ, ಸುಮಾರು 250 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತದೆ. ಅದನ್ನು ಕೂಡ ಸಣ್ಣ ಪ್ರಮಾಣದಲ್ಲಿ 2-10 ಸೆಂಟ್ಸ್ ಭೂಮಿಯಲ್ಲಿ 10 - 50 ಗಿಡಗಳನ್ನು ನೆಟ್ಟು ಬೆಳೆಯುವವರೇ ಹೆಚ್ಚು.  ಬೆಳಗ್ಗೆ ಎದ್ದು ಈ ಗಿಡಗಳಲ್ಲಿ ಬೆಳೆಯುವ 1000 - 10,000ದಷ್ಟು ಹೂವು ಕೊಯ್ದು ಮಾಲೆ ಮಾಡಿದರೆ, ಅದನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವುದಕ್ಕೆ ಮಧ್ಯವರ್ತಿಗಳು ಮನೆ ಬಾಗಿಲಿಗೇ ಬರುತ್ತಾರೆ. ವಾರಕ್ಕೊಮ್ಮೆ ಹಣವನ್ನು ಮನೆ ಬಾಗಿಲಿಗೆ ತಂದು ಕೊಡುತ್ತಾರೆ. ಹಾಗಿರುವಾಗ, ರೈತರು ತಾವು ಬೆಳೆಯುವ ಇಷ್ಟು ಕಡಿಮೆ ಪ್ರಮಾಣದ ಹೂವನ್ನು ಹರಾಜು ಕೇಂದ್ರಕ್ಕೆ ತೆಗದುಕೊಂಡು ಹೋಗಿ ಹರಾಜು ಮಾಡುವುದು ಸಾಧ್ಯವೇ ಇಲ್ಲ, ಲಾಭದಾಯಕವೂ ಅಲ್ಲ ಎನ್ನುತ್ತಾರೆ ಬಂಟಕಲ್ಲಿನ ಹಿರಿಯ ಮಲ್ಲಿಗೆ ಕೃಷಿಕ ರಾಮಕೃಷ್ಣ ಶರ್ಮ.
ಜನಪ್ರತಿನಿಧಿಗಳ ಮೌನ: ರೈತರ ಉದ್ಧಾರಕ್ಕಾಗಿಯೇ ಜಾರಿಗೆ ತಂದ ಕೇಂದ್ರ ಸರ್ಕಾರ ಈ ಯೋಜನೆ ಈ ರೀತಿ ವ್ಯರ್ಥ ಆಗುತ್ತಿದೆ. ಈ ಹರಾಜು ಕೇಂದ್ರ ಕಾರ್ಯಾರಂಭಿಸುವುದಕ್ಕೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಅನೇಕ ಬಾರಿ ಪ್ರಯತ್ನಗಳನ್ನೇನೋ ಮಾಡಿದ್ದಾರೆ.
ಆದರೆ ಜಿಲ್ಲೆಯ ಜನಪ್ರತಿನಿಧಿಗಳಿಗೆ ಈ ಹರಾಜು ಕೇಂದ್ರದ ಬಗ್ಗೆ ಗೊಡವೆಯೇ ಇಲ್ಲ ಎನ್ನುವುದು ಮಾತ್ರ ವಿಷಾದದ ಸಂಗತಿ.
ಈ (ಮಲ್ಲಿಗೆ) ಪುಷ್ಪ ಹರಾಜು ಕೇಂದ್ರದಲ್ಲಿ ಸದ್ಯಕ್ಕಂತೂ (ಮಲ್ಲಿಗೆ ಕೃಷಿಕರು ಒಪ್ಪದೆ) ಮಲ್ಲಿಗೆ ಹರಾಜು ಆಗುವ ಲಕ್ಷಣಗಳಿಲ್ಲ. ಆದ್ದರಿಂದ ಈಗಾಗಲೇ 2 ವರ್ಷಗಳು ಕಳೆದುಹೋಗಿವೆ. ಇನ್ನೆಷ್ಟ ವರ್ಷ ಕಳೆಯುತ್ತವೆಯೋ ಗೊತ್ತಿಲ್ಲ.

ಮಲ್ಲಿಗೆ ಹರಾಜು ಆಗಲ್ಲರೀ...
ಮಲ್ಲಿಗೆ ಆಯುಷ್ಯ ಅರಳಿದ 4-5 ಗಂಟೆ ಮಾತ್ರ. ಬೆಳಗ್ಗೆ 8 ಗಂಟೆಯೊಳಗೆ ಕೊಯ್ದ ಮೇಲೆ ಮಧ್ಯಾಹ್ನ 12 ಗಂಟೆಯೊಳಗೆ ಗ್ರಾಹಕರ ಕೈಸೇರಬೇಕು. ಹರಾಜು ಕೇಂದ್ರಕ್ಕೆ ತೆಗೆದುಕೊಂಡು ಹೋಗಿ, ಹರಾಜು ಹಾಕಿ, ಹರಾಜು ಪಡೆದವರು ಅದನ್ನು ಮಾಲೆ ಮಾಡಿ ಮಾರುಕಟ್ಟೆಗೆ ಕಳುಹಿಸುವಷ್ಟರಲ್ಲಿ ಸಂಜೆಯಾಗಿರುತ್ತದೆ, ಹೂವು ಬಾಡಿ ಕೊಳೆಯುವುದಕ್ಕೆ ಆರಂಭವಾಗುತ್ತದೆ. ಆದ್ದರಿಂದ ಮಲ್ಲಿಗೆ ಹರಾಜು ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಹರಾಜು ಹಾಕುವುದು ಸಾಧ್ಯವಿಲ್ಲ.
-ರಾಮಕೃಷ್ಣ ಶರ್ಮ ಬಂಟಕಲ್ಲು, ಹಿರಿಯ ಮಲ್ಲಿಗೆ ಬೆಳೆಗಾರರು

ಬೇರೆ ಹೂವು ಬೆಳೆಸಿ ನೋಡಬಹುದು
ಮಲ್ಲಿಗೆ ಬೆಳೆಗಾರರು ಈಗಾಗಲೇ ಒಂದು ಸಾಂಪ್ರದಾಯಿಕ ಮಾರುಕಟ್ಟೆ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ, ಆದ್ದರಿಂದ ಒಂದೇ ಸಲಕ್ಕೆ ಅದನ್ನು ಬಿಟ್ಟು ಬರುವುದಕ್ಕೆ ಅವರಿಗೆ ಸಾಧ್ಯವಾಗದಿರಬಹುದು. ಮುಂದೆ ಲಾಭ ಇದೆ ಅಂತ ಅರಿವಾದರೆ ಅವರಾಗಿಯೇ ಬರುತ್ತಾರೆ. ಜಿಲ್ಲೆಯಲ್ಲಿ ಮಲ್ಲಿಗೆ ಮಾತ್ರವಲ್ಲ ಜರ್ಬೇರ, ಅಂಥೋರಿಯಂ, ಆರ್ಕಿಡ್, ಸೇವಂತಿಗೆ ಇತ್ಯಾದಿ ಹೂವುಗಳನ್ನು ಬೆಳೆಸುವುದಕ್ಕೂ ಅವಕಾಶ ಇದೆ. ಈ ಕೇಂದ್ರಕ್ಕೆ ಉಡುಪಿ ಮಾತ್ರವಲ್ಲ, ದ.ಕ., ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಹೂವಿನ ಬೆಳೆಗಾರರು ಬರುವುದಕ್ಕೆ ಅವಕಾಶ ಇದೆ.  
-ಡಾ. ಬಿ.ಪಿ.ಸತೀಶ್, ಉಪನಿರ್ದೇಶಕರು, ತೋಟಗಾರಿಕಾ ಇಲಾಖೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement