ಈ ಚುನಾವಣೆ ದೇಶದ ಅಳಿವು ಉಳಿವಿನ ರಾಜಕೀಯ ಯುದ್ಧ
ಉಡುಪಿ: ಈ ಲೋಕಸಭಾ ಚುನಾವಣೆ ಯಾವುದೇ ಪಕ್ಷ ಅಥವಾ ವ್ಯಕ್ತಿಗಳು ನಡುವಿನ ಹೋರಾಟ ಅಲ್ಲ. ಇದು ನಮ್ಮ ದೇಶದ ಅಳಿವು - ಉಳಿವು ನಿರ್ಧರಿಬೇಕಾಗಿರುವ ರಾಜಕೀಯ ಯುದ್ಧ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಹೇಳಿದ್ದಾರೆ.
ಅವರು ಬುಧವಾರ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಗೆ ಮೊದಲು ನಡೆದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡು ಮೇಲೆ ಭ್ರಷ್ಟಾಚಾರದ ಹಗರಣಗಳನ್ನು ನಡೆಸುತ್ತಲೇ ಬಂದಿದೆ. ಕೇವಲ 6 ವರ್ಷದಲ್ಲಿ ಯುಪಿಎ ಸರ್ಕಾರ ರು. 18 ಲಕ್ಷ ಕೋಟಿ ಅವ್ಯವಹಾರ ಮಾಡಿದೆ. ಇದೀಗ ಭಾರತವನ್ನು ಭ್ರಷ್ಟಾಚಾರ ಮುಕ್ತಗೊಳಿಸಬೇಕಾದರೆ ಮೊದಲು ಭಾರತವನ್ನು ಕಾಂಗ್ರೆಸ್ ಮುಕ್ತಗೊಳಿಸಬೇಕಾಗಿದೆ ಎಂದವರು ಹೇಳಿದರು.
ಅಡಕೆ ಬೆಳೆ ಸಂಕಷ್ಟದಲ್ಲಿದೆ: ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಯಾವುದೇ ಜನಪರ ಕಾರ್ಯಗಳನ್ನು ಮಾಡದೇ ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಸರ್ಕಾರ ಜಾರಿ ತಂದ ಯೋಜನೆಗಳು ಬಡವರ ಪರವಾಗಿಲ್ಲ. ಕೇಂದ್ರ ಸರ್ಕಾರದ ಎಡಬಿಡಂಗಿ ನೀತಿಯಿಂದಾಗಿ ರಾಜ್ಯದ ಅಡಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಕಾಂಗ್ರೆಸ್ ಸರ್ಕಾರವನ್ನು ರಾಜ್ಯ, ದೇಶದಿಂದ ಕಿತ್ತೋಗೆಯಬೇಕಾಗಿದೆ ಎಂದರು.
ಮುತಾಲಿಕ್, ಹಿರೇಮಠ್ ಬಗ್ಗೆ ಮಾತನಾಡುವುದಿಲ್ಲ: ಬಿಎಸ್‌ವೈ
ಉಡುಪಿ: ಪ್ರಮೋದ್ ಮುತಾಲಿಕ್ ಬಗ್ಗೆ ಮಾತನಾಡುವುದಿಲ್ಲ, ಹಿರೇಮಠ್ ಬಗ್ಗೆ ಏನೂ ಹೇಳುವುದಿಲ್ಲ...!
ಇವು ಬುಧವಾರ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪತ್ರಕರ್ತರ ಎರಡು ಪ್ರಶ್ನೆಗಳಿಗೆ ನೀಡಿದ ಚುಟುಕು ಉತ್ತರಗಳು. ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರ ಬಗ್ಗೆ ಕೇಳಲಾದ ಪ್ರಶ್ನೆಗೂ, 'ಹೆಚ್ಚೇನು ಮಾತನಾಡುವುದಿಲ್ಲ, ಅವರು ನನ್ನ ಆತ್ಮೀಯ ಸ್ನೇಹಿತರು, ಶಿವಮೊಗ್ಗದಿಂದ ಬರುವಾಗ ಅವರ ಮನೆಗೆ ಹೋಗಿ ಭೇಟಿ ಮಾಡಿ ಬಂದಿದ್ದೇನೆ, ಬಿಜೆಪಿಗೆ ನಿಮ್ಮ ಬೆಂಬಲ ಇರಲಿ' ಎಂದು ವಿನಂತಿಸಿದ್ದೇನೆ ಎಂದರು.
ಬಿಜೆಪಿಗೆ ಹೆಚ್ಚು ಬಲ: ಬಿಜೆಪಿ ಸಾಧನೆಯನ್ನು ನೋಡಿ ಇತರ ಪಕ್ಷಗಳ ಅನೇಕ ಪ್ರಮುಖರು ಸೇರ್ಪಡೆಯಾಗುತ್ತಿದ್ದಾರೆ. ಉಡುಪಿಯ ಮಾಜಿ ಸಚಿವ ವಸಂತ ಸಾಲಿಯಾನ್ ಕೂಡ ಬಿಜೆಪಿ ಸೇರ್ಪಡೆಗೊಂಡು ಬಿಜೆಪಿಯನ್ನು ಇನ್ನಷ್ಟು ಬಲಯುತಗೊಳಿಸಿದ್ದಾರೆ ಎಂದರು.
ಹೆಚ್ಚು ಮತ: ಮಾಧ್ಯಮ ಸಮೀಕ್ಷೆಗಳೇ ಹೇಳಿರುವಂತೆ ದೇಶದಲ್ಲಿ ಬಿಜೆಪಿ ಈ ಬಾರಿ ಶೇ. 46ರಷ್ಟು ಹೆಚ್ಚುವರಿ ಮತಗಳನ್ನು ಪಡೆಯುತ್ತದೆ, ರಾಜ್ಯದಲ್ಲಿ 20ರಷ್ಟು ಸೀಟುಗಳನ್ನು ಗೆಲ್ಲುತ್ತದೆ, ನರೇಂದ್ರ ಮೋದಿ ನೂರಕ್ಕೆ ನೂರು ಪ್ರಧಾನಿಯಾಗುತ್ತಾರೆ ಎಂದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ವಸಂತ ಸಾಲಿಯಾನ್, ಜಿ.ಪಂ. ಅಧ್ಯಕ್ಷ ಉಪೇಂದ್ರ ನಾಯಕ್ ಇದ್ದರು.