ಕಮಲ ಧ್ವಜ ಎತ್ತಿದ ಮಾಜಿ ಸಚಿವ ವಸಂತ ಸಾಲ್ಯಾನ್
ಉಡುಪಿ: ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿ, ಅಲ್ಲಿಂದಲೂ ಹೊರಬಿದ್ದ ಮಾಜಿ ಸಚಿವ ವಸಂತ ಸಾಲ್ಯಾನ್ ಅವರ ಮುಂದಿನ ನಡೆ ಎತ್ತ ಎಂಬ ಬಗ್ಗೆ ಭಾರೀ ಕುತೂಹಲಕ್ಕೆ ಬುಧವಾರ ಪೂರ್ಣವಿರಾಮ ಬಿದ್ದಿದೆ. ಅವರು ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ವಿದ್ಯುಕ್ತವಾಗಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಂದ ಕಮಲ ಚಿಹ್ನೆಯ ಧ್ವಜ ಸ್ವೀಕರಿಸಿದರು. ಉಡುಪಿಯಲ್ಲಿ ಬಿಲ್ಲವ ಸಮುದಾಯದ ಮತದಾರರ ಪ್ರಾಬಲ್ಯ ಇರುವುದರಿಂದ ಅವರನ್ನು ಸೆಳೆಯುವುದಕ್ಕಾಗಿ ಬಿಜೆಪಿ ಬಿಲ್ಲವ ಸಮುದಾಯದ ವಸಂತ ಸಾಲ್ಯಾನ್ ಅವರನ್ನು ಸೆಳೆದುಕೊಂಡಿದೆ. ಇಲ್ಲಿ ಅಭ್ಯರ್ಥಿ ಶೋಭಾ ಅವರನ್ನು ಹೇಗಾದರೂ ಮಾಡಿ ಗೆಲ್ಲಿಸಬೇಕು ಎಂದು ಹೊರಟಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಖುದ್ದು ವಸಂತ ಸಾಲ್ಯಾನ್ ಅವರು ಬಿಜೆಪಿ ಸೇರುವುದಕ್ಕೆ ಮಧ್ಯಸ್ಥಿಕೆ ವಹಿಸಿದ್ದರು. ಮತ್ತು ಅವರೇ ಪಕ್ಷಕ್ಕೆ ಸೇರಿಸಿಕೊಂಡರು.