ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಬಡವರಿಗೆ ಹೊಟ್ಟೆ ತುಂಬಾ ಊಟ 'ಕೈ' ಸಾಧನೆ: ಆಸ್ಕರ್

Srinivasa Murthy VN
Updated On : 27 Mar 2014, 10:30 am

ಉಡುಪಿ: ನಮ್ಮ ದೇಶದ ಒಂದು ಪಕ್ಷದ ನಾಯಕನ ಜೊತೆಗೆ ಊಟ ಮಾಡಲಿಕ್ಕೆ ರು. 2.50 ಲಕ್ಷ ನೀಡಬೇಕಂತೆ, ಇನ್ನೊಂದು ಪಕ್ಷದ ನಾಯಕನ ಜೊತೆಗೆ ಊಟ ಮಾಡಬೇಕಾದರೇ 20 ಸಾವಿರ ರು. ನೀಡಬೇಕಂತೆ, ಇವರೆಲ್ಲಾ ಕೇವಲ ಶ್ರೀಮಂತರಿಗೆ ಊಟದ ಬಗ್ಗೆ ಯೋಚಿಸುತ್ತಿದ್ದಾರೆ, ಆದರೆ ಕಾಂಗ್ರೆಸ್ ಪಕ್ಷವೊಂದೇ ಈ ದೇಶದ ಬಡವರೂ ಊಟ ಮಾಡಬೇಕು ಎಂದು ಯೋಚಿಸುತ್ತಿದೆ ಎಂದು ಕೇಂದ್ರ ಸಚಿವ ಆಸ್ಕರ್ ಅಭಿಪ್ರಾಯಪಟ್ಟರು.
 ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಷ್ಟು ವರ್ಷ ಕಾಂಗ್ರೆಸ್ ಸರ್ಕಾರದ ಸಾಧನೆ ಏನು ಎಂದು ಬೇರೆ ಪಕ್ಷಗಳ ನಾಯಕರು ಕೇಳುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ಬಡವರಿಗೆ ಹೊಟ್ಟೆ ತುಂಬಾ ಊಟ ನೀಡಿದ್ದೆ ಕಾಂಗ್ರೆಸ್ ಸರ್ಕಾರ ಸಾಧನೆ ಎಂದು ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಹೇಳಿದ್ದಾರೆ.
 ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಉಡುಪಿ ಮತ್ತು ಚಿಕ್ಕಮಗಳೂರುಗಳೆರಡರಲ್ಲೂ ರೈಲು ಮಾರ್ಗಗಳ ಅಭಿವೃದ್ಧಿಗೊಳಿಸಲಾಗಿದೆ. ಹೆದ್ದಾರಿ ಮೇಲ್ದರ್ಜೆಗೇರಿಸುವ ಯೋಜನೆ ಮಂಜೂರಾಗಿದೆ. ಅಡಕೆ, ಕಾಫಿ ಬೆಳೆಗಾರರಿಗೆ ಸಹಾಯ ನೀಡಲಾಗಿದೆ. ಮುಂದೆ ಈ ಪ್ರದೇಶದಲ್ಲಿ ಪರಿಸರ ಸಹ್ಯ ಪ್ರವಾಸೋದ್ಯಮಕ್ಕೆ ಒತ್ತು ಮತ್ತು ಪರಿಸರ ಸಹ್ಯ ಉದ್ದಿಮೆಗಳ ಸ್ಥಾಪನೆಯ ಮೂಲಕ ಇಲ್ಲಿನ ಜನರಿಗೆ ಉದ್ಯೋಗಾವಕಾಶ ಮತ್ತು ಅವರು ಆರ್ಥಿಕ ಜೀವನ ಮಟ್ಟ ಸುಧಾರಣೆಗೆ ಆದ್ಯತೆ ನೀಡುವುದಾಗಿ ಘೋಷಿಸಿದರು.
ಸಚಿವ ವಿನಯಕುಮಾರ್ ಸೊರಕೆ, ಶಾಸಕ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಸದಸ್ಯೆ ಮೋಟಮ್ಮ, ಚುನಾವಣಾ ಉಸ್ತುವಾರಿ ಎಂ. ಎನ್. ರಾಜೇಂದ್ರ ಕುಮಾರ್, ಕೆಪಿಸಿಸಿ ಕಾರ್ಯದರ್ಶಿ ಎಂ. ಎ. ಗಫೂರ್ ್ಮಾತನಾಡಿದರು. ಸಚಿವ ಅಭಯಚಂದ್ರ ಜೈನ್, ತರಿಕೆರೆ ಶಾಸಕರಾದ ಶ್ರೀನಿವಾಸ್, ಬೈಂದೂರು ಶಾಸಕ ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯೆ ಸಾವಿತ್ರಿ ಶಾಂತೇಗೌಡ, ಕೆಪಿಸಿಸಿ ಪ್ರ.ಕಾರ್ಯದರ್ಶಿಗಳಾದ ಕೆ.ಪಿ. ನಂಜುಂಡಿ ಮತ್ತು ಅಮರನಾಥ್, ಮಾಜಿ ಶಾಸಕರಾದ ಗೋಪಾಲ ಭಂಡಾರಿ, ಬಿ.ಎ. ಮೊಯ್ದಿನ್, ಬಸವರಾಜ್, ಕಾಂಗ್ರೆಸ್ ಕಿಸಾನ್ ಘಟಕದ ಸತೀಶ್ ಮೀಗಾ, ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ನರಸಿಂಹಮೂರ್ತಿ, ಚಿಕ್ಕಮಗಳೂರು ಚುನಾವಣಾ ಉಸ್ತುವಾರಿ ಮಹೇಶ್ ಇದ್ದರು.

ಗಾಂಧಿ ಬೇಕಾ, ಗೋಡ್ಸೆ ಬೇಕಾ? ಶಾಂತಿ ಬೇಕಾ, ಅಶಾಂತಿ ಬೇಕಾ?  ಜಾತ್ಯತೀತ ವಾದ ಬೇಕಾ, ಕೋಮುವಾದ ಬೇಕಾ?  ಬಡವರ ಅಭಿವೃದ್ಧಿ ಬೇಕಾ  ಬಂಡವಾಳಶಾಹಿಗಳ ಅಭಿವೃದ್ಧಿ ಬೇಕಾ? ಎಂಬ ಆಯ್ಕೆ ಮಾಡುವ ಚುನಾವಣೆ ಇದು.
-ವಿನಯಕುಮಾರ್ ಸೊರಕೆ, ಜಿಲ್ಲಾ ಉಸ್ತುವಾರಿ ಸಚಿವ

ಕಳೆದ ಲೋಕಸಭಾ ಚುನಾವಣೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅತೀ ಹೆಚ್ಚು ಮತ ಸಿಕ್ಕಿತ್ತು, ಈ ಬಾರಿಯೂ ಅತೀ ಹೆಚ್ಚು ಮತಗಳನ್ನು ನೀಡುತ್ತದೆ, ಇತರ ವಿಧಾನಸಭಾ ಕ್ಷೇತ್ರಗಳು ಇದನ್ನು ಸವಾಲಾಗಿ ಸ್ವೀಕರಿಸಬಹುದು.
-ಪ್ರಮೋದ್ ಮಧ್ವರಾಜ್ (ಉಡುಪಿ ಶಾಸಕ)

ಉಡುಪಿ ಚಿಕ್ಕಮಗಳೂರುನಲ್ಲಿ ಜಯಪ್ರಕಾಶ್ ಹೆಗ್ಡೆ ಮತ್ತು ಮಂಗಳೂರಿನಲ್ಲಿ ಜನಾರ್ದನ ಪೂಜಾರಿ ಗೆಲ್ಲುತ್ತಾರೆ. ಆದರೆ ಇವರಿಬ್ಬರಲ್ಲಿ ಅತೀ ಹೆಚ್ಚು ಅಂತರದಲ್ಲಿ ಯಾರೂ ಗೆಲ್ಲುತ್ತಾರೆ ಎನ್ನುವ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದೇನೆ ಮತ್ತು ಗೆದ್ದವರಿಗೆ ಸನ್ಮಾನ ಮಾಡುತ್ತೇನೆ.
-ಎಂ. ಎನ್. ರಾಜೇಂದ್ರ ಕುಮಾರ್, (ಕಾಂಗ್ರೆಸ್ ಚುನಾವಣಾ ಉಸ್ತುವಾರಿ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement