ಕುಮಟಾ: ನಗರದ ಬಸ್ತಿಪೇಟೆ ಸಮೀಪ ಇತ್ತೀಚೆಗೆ ಬೈಕ್ನಲ್ಲಿ ಬಂದು ಮಹಿಳೆಯ ಕೊರಳಿಗೆ ಕೈಹಾಕಿ ಮಂಗಳಸೂತ್ರ ಹರಿದು ಪರಾರಿಯಾಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸಾಗರದ ನೆಹರೂ ನಗರ ನಿವಾಸಿಗಳಾದ ವಿಶ್ವನಾಥ ಆರ್. ಜೋಗಳೇಕರ್ ಮತ್ತು ಪ್ರತಾಪ್ ಓಂಪ್ರಕಾಶ್ ಸಿಂಗ್ ಎಂದು ಗುರುತಿಸಲಾಗಿದೆ. ಜ. 19ರಂದು ಪೇಟೆಯಲ್ಲಿ ಕೆಲಸ ಮುಗಿಸಿಕೊಂಡು ಬಸ್ತಿಪೇಟೆ ಮಾರ್ಗವಾಗಿ ವಕ್ಕನಳ್ಳಿಯಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದ ಜಯಾ ವೆಂಕಟೇಶ ಗೌಡ ಅವರ ಮಂಗಳಸೂತ್ರವನ್ನು ಈ ಇಬ್ಬರೂ ವಕ್ಕನಳ್ಳಿ ಕ್ರಾಸ್ ಬಳಿ ಸೆಳೆದು ಪರಾರಿಯಾಗಿದ್ದರು. ಬೈಕ್ ಸವಾರ ಓಂಪ್ರಕಾಶ್ ಸಿಂಗ್ ಸಾಗರದ ನೆಹರೂ ನಗರದಲ್ಲಿ ಗೋಭಿ ಮಂಚೂರಿ ಅಂಗಡಿ ಇಟ್ಟುಕೊಂಡಿದ್ದು, ಕುಮಟಾದಲ್ಲಿ ಆತನ ಸಂಬಂಧಿಕರ ಮನೆ ಇದೆ. ಸಾಗರದಿಂದ ಆಗಾಗ್ಗೆ ಇಲ್ಲಿಗೆ ಬರುತ್ತಿದ್ದ. ಹಿಂಬದಿಯಲ್ಲಿ ಕುಳಿತಿದ್ದ ವಿಶ್ವನಾಥ ಮಹಿಳೆಯ ಸರ ಅಪಹರಿಸಿದ್ದ. ಈತನ ಮೇಲೆ ಸಾಗರದಲ್ಲಿ ಮನೆ ಕಳ್ಳತನದ ಆರೋಪವೂ ಇದೆ. ಸಿಪಿಐ ಶ್ರೀಕಾಂತ್ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.