ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಜನಸ್ನೇಹಿಯ ಅವಾಂತರ

Mainashree
Updated On : 4 Apr 2013, 12:14 pm

"ಅಟಲ್‌ಜೀ ಜನಸ್ನೇಹಿ ಸೇವಾಕೇಂದ್ರ" ವು ಹಲವಾರು ಸೇವೆಗಳನ್ನು ಪಟ್ಟಿ ಮಾಡಿ, ಇಂತಹ ಪ್ರಮಾಣ ಪತ್ರಗಳು ಇಷ್ಟು ದಿನಕ್ಕೆ ದೊರೆಯುತ್ತದೆ ಎಂದು ಫಲಕ ಹಾಕಿದ್ದಾರೆ. ಅವುಗಳಲ್ಲಿ ಓ.ಬಿ.ಸಿ. ಮತ್ತು ಜಾತಿ ಆದಾಯ ಪ್ರಮಾಣ ಪತ್ರಗಳು 21 ದಿನಗಳ ಒಳಗಾಗಿ ದೊರೆಯುತ್ತದೆ ಎನ್ನುತ್ತಾರೆ. ಹೊಸ ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡಬೇಕಾಗಿರುವ ನಾನು ಮತ್ತು ನನ್ನಂತಹವರಿಗೆ ಎರಡು ತಿಂಗಳಾದರೂ ಓ.ಬಿ.ಸಿ. ಪ್ರಮಾಣ ಪತ್ರ ದೊರೆಯುತ್ತಿಲ್ಲ. ಆಗ, ಈಗ, ನೆಟ್ ಸಂಪರ್ಕ ಇಲ್ಲ, ವಿದ್ಯುತ್ ಇಲ್ಲ, ತಹಸೀಲ್ದಾರ್ ಇಲ್ಲ ಹೀಗೆ ಕಾರಣಗಳ ಸರಮಾಲೆಯನ್ನೇ ಹೇಳುತ್ತಾರೆ. ನನ್ನ ಹಳ್ಳಿಯಿಂದ ಪಾಂಡವಪುರ ತಾಲ್ಲೂಕಿನ ಚಿನಕುರಳಿಯ ನಾಡ ಕಚೇರಿಗೆ ಹದಿನೈದು ಕಿ.ಮಿ. ಇರಬಹುದು. ಇಂತಹ ಹತ್ತಾರು ನೆಪಗಳನ್ನು ಹೇಳುತ್ತಿದ್ದರೆ, ನಮ್ಮಂತಹ ಬಡವರು ಸಾರಿಗೆ ಖರ್ಚು ಎಷ್ಟು ಅಂತ ಮಾಡಲಾಗುತ್ತದೆ? ಹಣವಿಲ್ಲ ಎಂದು ಸೈಕಲ್ ಏರಿ ಪದೇ ಪದೆ ಹೊರಡುತ್ತಿದ್ದೇನೆ ಅದೇ ನೆಪ. ಇಷ್ಟೇ ಅಲ್ಲದೆ ಮೇ-ಜೂನ್ ತಿಂಗಳಿನಲ್ಲಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಸೇರಲು ಜಾತಿ ಆದಾಯ ದೃಢೀಕರಣ ಪತ್ರ ಬೇಕಾಗುತ್ತದೆ. ಅವರಿಗೂ ಅದೇ ತೊಂದರೆ. ಸಾಲದು ಎಂದು ಸರತಿ ಸಾಲಿನಲ್ಲಿ ಬಾರದೆ ಯದ್ವಾ-ತದ್ವಾ ನುಗ್ಗುವ ಗೂಂಡಾ ವರ್ತನೆಯ ಜನರನ್ನು ನಿಯಂತ್ರಿಸಲು ಒಬ್ಬ ಪೇದೆಯ ವ್ಯವಸ್ಥೆಯೂ ಇರುವುದಿಲ್ಲ. ಹೆಣ್ಣು ಮಕ್ಕಳಿಗೆ ಇದಂತೂ ಗೋಳಾಗಿ ಹೋಗಿದೆ. ನಾನು ಹೊಸ ರಾಜ್ಯಕ್ಕೆ ಹೊರಡಬೇಕು ಎರಡು ತಿಂಗಳಾದರೂ ಓ.ಬಿ.ಸಿ. ದೊರೆತಿಲ್ಲ. ಆದ್ದರಿಂದ ಸಂಬಂಧಪಟ್ಟವರು ನಮ್ಮಂತಹ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪ್ರಾಮಾಣಿಕ ಸೇವೆ ನೀಡಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ.
-ಪ್ರದೀಪ್. ಎನ್., ಚೆಲುವರಸನಕೊಪ್ಪಲು, ಪಾಂಡವಪುರ
ಆರೋಗ್ಯ ಆತಂಕ
ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ. ಆದರೆ ಇತ್ತೀಚಿನ ಘಟನೆಗಳು ಇದನ್ನು ಸುಳ್ಳಾಗಿಸುತ್ತಿವೆ. ಇದಕ್ಕೆ ಪೂರಕವಾದ ಅಭಿಷೇಕ್ ಸಾವಿನ ಪ್ರಕರಣ ನಿಜಕ್ಕೂ ಗಂಭೀರವಾಗಿ ಪರಿಗಣಿಸಬೇಕಿದೆ. ಈ ಹಿಂದೆಯೂ ಇಂತಹ ಹಲವಾರು ಘಟನೆಗಳು ನಡೆದಿದ್ದರೂ, ಸಂಬಂಧಿಸಿದವರ ಜಾಣಮೌನವನ್ನು ಪ್ರಶ್ನಿಸಬೇಕಾದ ಸಮಯವಿದು. ಸಾಮಾನ್ಯವಾಗಿ ಅರಿವಳಿಕೆ ನೀಡುವವರು, ಆ ಕ್ಷೇತ್ರದಲ್ಲಿ ಆಳವಾದ ಜ್ಞಾನ ಹಾಗೂ ಅನುಭವವನ್ನು ಹೊಂದಿರಬೇಕಾದದ್ದು ಅನಿವಾರ್ಯ. ಆದರೆ ಒಂದರ ಹಿಂದೆ ಮತ್ತೊಂದರಂತೆ ಹೀಗೆ ಸಾವುಗಳು ಘಟಿಸುತ್ತಿದ್ದರೆ, ವೈದ್ಯರ ವೃತ್ತಿಪರತೆಯನ್ನೇ ಪ್ರಶ್ನಿಸಬೇಕಲ್ಲವೇ? ಇದರ ಜೊತೆಗೆ ಎಷ್ಟೋ ಸರ್ಕಾರಿ ಆಸ್ಪತ್ರೆಯ ಹಿರಿಯ ಅಧಿಕಾರಿಗಳ ಸಹಾಯಹಸ್ತವೂ ಇದೆ ಎಂದಾಗ ದಿಗ್ಭ್ರಮೆಯುಂಟಾಗುತ್ತದೆ. ಇದಲ್ಲದೇ, ಸರ್ಕಾರಿ ಸಂಬಳ ಸಾಲದೆಂದು ಖಾಸಗಿ ಆಸ್ಪತ್ರೆಯಲ್ಲಿ ತುಂಡು ಕಾರ್ಯ ಮಾಡಿ, ಹಣ ಗಳಿಸುವವರಿಗೂ ನಮ್ಮಲ್ಲಿ ಕೊರತೆ ಇಲ್ಲ. ಇದನ್ನೆಲ್ಲಾ ನಿಯಂತ್ರಣ ಮಾಡುವ ಇಚ್ಛಾಶಕ್ತಿ ನಮ್ಮ ಆಡಳಿತ ಯಂತ್ರಕ್ಕಿಲ್ಲದೇ ಇರುವುದು ನಮ್ಮ ದೌರ್ಭಾಗ್ಯ. ಹಣಕ್ಕಾಗಿ ದೇಹದ ಅಂಗಾಂಗಗಳನ್ನು ಕದಿಯುವ, ಹಣಕ್ಕಾಗಿ ಮಕ್ಕಳನ್ನೇ (ನವಜಾತ ಶಿಶು) ಮಾರುವ, ಹಣಕ್ಕಾಗಿ ಸತ್ತ ಹೆಣವನ್ನು ಐಸಿಯು (ತುರ್ತು ನಿಗಾ ಘಟಕ)ದಲ್ಲಿ ಇಡುವ; ಒಟ್ಟಾರೆ ವೈದ್ಯ ವೃತ್ತಿ ಧರ್ಮಕ್ಕೆ ಮಾರಕವಾಗುತ್ತಿರುವ ಇಂದಿನ ಬಹುಪಾಲು ವೈದ್ಯರು ಜೀವಭಕ್ಷಕರಾಗಿರುವುದು ತೀರಾ ಕಳವಳದ ವಿಷಯ. ಸಂಬಂಧಿಸಿದವರು ಇನ್ನಾದರೂ ಎಚ್ಚೆತ್ತುಕೊಳ್ಳಲಿ.
-ಮಾಗಡಿ ಶ್ರೀನಿವಾಸ್, ರಾಮನಗರ
ಸಮಯೋಚಿತ ಲೇಖನ
ತಾ.2.4.2013ರ ಪತ್ರಿಕೆ ಪತ್ರ ವಿಭಾಗದಲ್ಲಿ ಪ್ರಕಟವಾದ 'ಮತದಾರರನ್ನು ಮೂರ್ಖರೆಂದು ಭಾವಿಸಬೇಡಿ' ಎಂಬ ಲೇಖನ ಸಮಯೋಚಿತವಾಗಿದೆ. ಲೇಖನದಲ್ಲಿರುವ ವಿಷಯ ಪ್ರಸ್ತುತವಾಗಿದ್ದರೂ ಅದನ್ನು ಜಾರಿಗೆ ತರುವ ಎದೆಗಾರಿಕೆ ಯಾವ ಚುನಾವಣಾಧಿಕಾರಿಗಿದೆ ಎಂಬುದೇ ಪ್ರಶ್ನೆ? ಈಗಿನ ರಾಜಕೀಯ ಧುರೀಣರು ಯಾವ ಪಕ್ಷದವರೇ ಆಗಿರಲಿ ಯಾರು ಶುದ್ಧಹಸ್ತರು ಎಂಬುದನ್ನು ತಿಳಿಯುವುದು ಕಷ್ಟಸಾಧ್ಯ. ಬರಹದಲ್ಲಿ ತಿಳಿಸಿರುವಂತೆ ಪ್ರಮಾಣ ಪತ್ರ ಕಡ್ಡಾಯ ಮಾಡಿದರೆ ಯಾವುದೇ ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾಗುವುದರಲ್ಲಿ ಸಂದೇಹವಿರುವುದಿಲ್ಲ. ಆದರೂ ನಿರ್ಧಾರದಿಂದ ರಾಜಕೀಯದಲ್ಲಿ ಅಪರಾಧೀಕರಣ ಕಡಿಮೆಯಾಗುವುದರಲ್ಲಿ ಸಂಶಯವೇ ಬೇಡ.
-ಅನಂತರಾವ್ ವಾಪಟ್, ವಿದ್ಯಾರಣ್ಯಪುರ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement