ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Mainashree
Updated On : 2 Apr 2013, 10:23 am

ಏ.2ರ 'ತಪ್ಪಾಯ್ತು ತಿದ್ಕೋತೀವಿ'ಯಲ್ಲಿ ರಾಜೀವ ಪಟವರ್ಧನ್ ಅವರು ನಮ್ಮ ಅಂತರ್ಜಾಲದ ಆವೃತ್ತಿಯ ಬಗ್ಗೆ ಪ್ರಸ್ತಾಪಿಸಿದ್ದರು. ಇತ್ತೀಚೆಗೆ ನಮ್ಮ ವೆಬ್‌ಸೈಟ್ ಮತ್ತು ಇ-ಪೇಪರ್‌ಗಳ ಮಾದರಿಯನ್ನು ಕೊಂಚ ಬದಲಾಯಿಸಿದ್ದೆವು. ಅಂದಿನಿಂದ ಕೆಲವರು ನಮ್ಮ ಇ-ಪೇಪರ್ ಓದುವಾಗ ಕೆಲವು ಸಮಸ್ಯೆ ಎದುರಿಸುತ್ತಿದ್ದಾರೆ. ಜಾಹೀರಾತುಗಳನ್ನು ಓದಲಾಗದಿರುವುದು ಹಳೆಯ ಸಮಸ್ಯೆ. ಆದರೆ ನಮಗೆ ಮುಖ್ಯವಾಗಿ ಓದುಗರು ಸುದ್ದಿಗಳನ್ನು ಸರಿಯಾಗಿ ಓದುವಂತಾಗಬೇಕು. ಪ್ರಯತ್ನ ಜಾರಿಯಲ್ಲಿದೆ.
'ಪಾದಚಾರಿ ಸಾವು' ಸುದ್ದಿಯಲ್ಲಿ 'ಆಂಧ್ರ ಮೂಲದ' ಎಂಬ ಬಳಕೆ ಕುರಿತು ತಕರಾರು ವ್ಯಕ್ತಪಡಿಸಿ, 'ಆಂಧ್ರದ ಮೂಲದ' ಎಂದು ಬರೆಯಬೇಕಿತ್ತು ಎಂದಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ. 'ಆಂಧ್ರ ಮೂಲದ' ಎಂಬುದಕ್ಕೂ 'ಆಂಧ್ರದ ಮೂಲದ' ಎಂಬುದಕ್ಕೂ ಯಾವ ವ್ಯತ್ಯಾಸವೂ ಇಲ್ಲ. 'ವ್ಯಕ್ತಿ ತರಕಾರಿಯನ್ನು ತರುತ್ತಿದ್ದನು' ಮತ್ತು 'ವ್ಯಕ್ತಿ ತರಕಾರಿ ತರುತ್ತಿದ್ದನು' ಎಂಬುದಕ್ಕೂ ಯಾವ ವ್ಯತ್ಯಾಸವೂ ಇಲ್ಲ.
ತುಂಬ ಸರಿಯಾಗಿ ಬರೆಯಲೇ ಬೇಕು ಎಂದಿದ್ದರೆ, 'ಆಂಧ್ರಪ್ರದೇಶ ಮೂಲದ' ಅಥವಾ 'ಆಂಧ್ರಪ್ರದೇಶ ರಾಜ್ಯ ಮೂಲದ' ಎಂದು ಬರೆಯಬೇಕು ಎಂದೂ ವಾದಿಸಬಹುದು. ಆದರೆ ಪತ್ರಿಕಾ ಭಾಷೆ ಸ್ವಲ್ಪ ಬೇರೆಯೇ ಇರುತ್ತದೆ. ಹಾಗಂತ ಅರ್ಥ ವ್ಯತ್ಯಾಸ ಆಗಬಾರದು. ಅರ್ಥ ವ್ಯತ್ಯಾಸವಾಗದಂತೆ ಅತ್ಯಂತ ಕಡಿಮೆ ಶಬ್ದಗಳನ್ನು ಬಳಸಿ ಬರೆಯುವುದು ಪತ್ರಕರ್ತರಿಗಿರುವ ಸವಾಲು.
'ಸೂರಿಗಾಗಿ ಕಣಕ್ಕಿಳಿದ ಜೋಪಡಿ ನಿವಾಸಿ' ಎಂಬ ಸುದ್ದಿಯಲ್ಲಿ 'ಮನೆಮನೆಗೆ ಸುತ್ತಾಡಿ' ಎಂದು ಬಳಸಿರುವುದು ಉದ್ದೇಶಪೂರ್ವಕವಲ್ಲ. 'ಮನೆಮನೆಗೆ ತೆರಳಿ' ಎಂಬುದು ಸೂಕ್ತವಾದ ಬಳಕೆ. 'ಭೇಟಿ' ಎಂಬುದನ್ನು ಸಹಜವಾಗಿ ಮುಖ್ಯವ್ಯಕ್ತಿಗಳಿಗೆ ಬಳಸಲಾಗುತ್ತದೆ. 'ಭೇಟಿ' ಎಂದು ಬಳಸಿಲ್ಲ ಎಂದಾಕ್ಷಣ ಅದು ಅಗೌರವ ಎಂದು ಭಾವಿಸುವ ಅಗತ್ಯವಿಲ್ಲ.
ರಾಜೀವ ಪಟವರ್ಧನ್ ಅವರು ಇನ್ನೊಂದು ಪತ್ರದಲ್ಲಿ ಫೆ.28ರಂದು 'ಕರ್ಣಾಟಕ ಬ್ಯಾಂಕ್‌' ಎಂದಿದೆ. ಅದು 'ಕರ್ನಾಟಕ ಬ್ಯಾಂಕ್‌' ಆಗಬೇಕಿತ್ತು ಎಂದಿದ್ದಾರೆ. ಆದರೆ 'ಕರ್ಣಾಟಕ ಬ್ಯಾಂಕ್‌' ಎಂಬುದೇ ಸರಿ. ಬ್ಯಾಂಕ್‌ನವರು ಕೂಡ ಹಾಗೆಯೇ ಬಳಸುವುದು. ನಮ್ಮ ನಕಾಶೆ ಕಿವಿಯ ಆಕಾರದಲ್ಲಿರುವುದರಿಂದ 'ಕರ್ಣ' ಎಂಬರ್ಥದಲ್ಲಿ 'ಕರ್ಣಾಟಕ' ಎಂಬುದೇ ಸರಿಯಾದ ಬಳಕೆ ಎಂದು ವಾದಿಸುವವರೂ ಇದ್ದಾರೆ. 'ಕರ್ಣಾಟಕ ಬ್ಯಾಂಕ್‌'ನವರು ಅದನ್ನು ಜಾರಿ ಮಾಡಿದ್ದಾರೆ.
ನಾಗರಾಜ ಗಾಣಿಗ ಅವರು ಬರೆಯುತ್ತಾರೆ- 'ಫೆ.27ರಂದು ಪತ್ರಿಕೆಯಲ್ಲಿ (ಬೆಂಗಳೂರು ಆವೃತ್ತಿ ಪುಟ 6) 'ಕಾರ್ಲ್‌ಟನ್ ಟವರ್‌' ಬಗ್ಗೆ ವರದಿಯಾಗಿದೆ. 'ಹಳೆ ಮದ್ರಾಸ್ ರಸ್ತೆಯಲ್ಲಿರುವ ಕಾರ್ಲ್‌ಟನ್ ಟವರ್ ಯಾರಿಗೆ ಗೊತ್ತಿಲ್ಲ?' ಎಂದಿದ್ದೀರಿ.'
'ಬೆಂಕಿ ಅನಾಹುತಕ್ಕೊಳಗಾದ 'ಕಾರ್ಲ್‌ಟನ್ ಟವರ್‌' ಇರುವುದು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲೋ? ಅಥವಾ ಹಳೆ ಮದ್ರಾಸ್ ರಸ್ತೆಯಲ್ಲೋ?' ಎಂದಿದ್ದಾರೆ.
ಬೆಂಕಿ ಅನಾಹುತಕ್ಕೆ ತುತ್ತಾದ 'ಕಾರ್ಲ್‌ಟನ್ ಟವರ್‌' ಇರುವುದು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ.

- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement