ಪ್ರಧಾನಿ ಪ್ರತಿಕ್ರಿಯೆ ಬೇಕು
ಆಳುವ ಸಂಯುಕ್ತ ಪ್ರಗತಿಪರ ಕೂಟದ ಅತಿ ದೊಡ್ಡ ಹಗರಣಗಳಲ್ಲಿ ಒಂದಾದ ಎರಡನೇ ತಲೆಮಾರಿನ ತರಂಗಾಂತರ ಗುಚ್ಛಗಳ ಹಂಚಿಕೆಯ ಟೆಲಿಕಾಮ್ ಪ್ರಕರಣದಲ್ಲಿನ ಅವ್ಯವಹಾರಗಳ ಆರೋಪ ಕುರಿತು ಸಂಸತ್ತಿನ ಉಭಯ ಸದನಗಳ ಸಂಯುಕ್ತ ತನಿಖಾ ಸಮಿತಿಯ ಸಾಕ್ಷ್ಯ ಸಂಗ್ರಹದ ಕೆಲಸ ಮುಗಿದ ಮೇಲೆ, ಪ್ರಧಾನಿ ಮನಮೋಹನ ಸಿಂಗ್ ಅವರು ಸಮಿತಿಯ ಮುಂದೆ ಸಾಕ್ಷ್ಯ ಹೇಳಲು ಮುಂದೆ ಬರಬೇಕೆಂದು ಬಿಜೆಪಿಯ ಮಾಜಿ ವಿತ್ತ ಮಂತ್ರಿ ಯಶವಂತ ಸಿನ್ಹಾ ಪ್ರಧಾನಿಗೆ ಬರೆದಿರುವ ಪತ್ರ ಸಾಮಯಿಕವಾಗಿದೆ, ತರ್ಕಬದ್ಧವೂ ಆಗಿದೆ.
ಸಮಿತಿಯ ಮುಂದೆ ಅಗತ್ಯವೆನಿಸಿದರೆ ಹಾಜರಾಗುವುದಾಗಿ ಹಿಂದೆ ಪ್ರಧಾನಿ ಹೇಳಿದ್ದೂ ನಿಜ. ಆದರೆ ಅನಂತರದ ದಿನಗಳಲ್ಲಿ ಆಳುವ ಕೂಟ ಹಾಗೂ ಸರ್ಕಾರದ ಪ್ರತಿನಿಧಿಗಳು ಪ್ರಧಾನಿಯ ಹಾಜರಿ ಅನಗತ್ಯವೆಂದೂ, ಸರ್ಕಾರದ ಪರವಾಗಿ ಕೈಗೊಂಡಿರುವ ಕ್ರಮಗಳನ್ನು ವಿವರಿಸಲು ಸರ್ಕಾರದ ಕರ್ಮಚಾರಿಗಳಿದ್ದಾರೆಂದೂ ಹೇಳಿದ್ದಾರೆ.
ಸದನ ಸಮಿತಿಯ ಮುಂದೆ ವಿವರಣೆಯನ್ನು ಮೌಖಿಕವಾಗಿ ನೀಡಲು ಹಗರಣದಲ್ಲಿನ ಆರೋಪ ಹೊತ್ತಿರುವ ಡಿಎಂಕೆಯ ಮಾಜಿ ಮಂತ್ರಿ ಎ. ರಾಜಾ ಅವರಿಗೂ ಅವಕಾಶವನ್ನು ನೀಡಲಿಲ್ಲ. ಆದರೆ ರಾಜಾ ಅವರು, ಸಮಿತಿಯ ಅವಗಾಹನೆಗೆಂದು ಅದರ ಅಧ್ಯಕ್ಷ ಚಾಕೋ ಅವರಿಗೆ ಒಂದು ಸುದೀರ್ಘವಾದ ಪತ್ರವನ್ನು ಬರೆದು, ಅದರಲ್ಲಿ ವೈಯಕ್ತಿಕವಾಗಿ ಪ್ರಧಾನಿ ಮನಮೋಹನ ಸಿಂಗ್ ಹಾಗೂ ಪ್ರಧಾನಿ ಕಾರ್ಯಾಲಯದ ಹಲವು ಕ್ರಮಗಳನ್ನು ಪ್ರಸ್ತಾಪಿಸಿರುವುದು ನಿಜ.
ಮಾಜಿ ಸಚಿವ ಎ. ರಾಜಾ ಅವರು ತರಂಗಾಂತರ ಗುಚ್ಛಗಳ ಹಂಚಿಕೆಯ ವ್ಯವಹಾರದಲ್ಲಿ, ಸರ್ಕಾರದ ಸಂಬಂಧಪಟ್ಟ ಇಲಾಖೆ ಪ್ರಕಟಿಸಿದ ಎಲ್ಲ ಆದೇಶಗಳೂ ಪ್ರಧಾನಿಯ ಗಮನಕ್ಕೆ ಬಂದಿತ್ತು. ಅದನ್ನು ಅವರು ಅನುಮೋದಿಸಿಯೂ ಇದ್ದರು ಎಂದು ಹೇಳಿರುವುದು ಗಮನಾರ್ಹ.
ಈಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ವಿತ್ತ ಮಂತ್ರಿಯಾಗಿದ್ದಾಗ ಪ್ರಧಾನಿ ಕಾರ್ಯಾಲಯದಿಂದ ಬಂದಿದ್ದ ಒಂದು ಪತ್ರವನ್ನು ಹೊರಗೆ ತೆಗೆದು, ಅದಕ್ಕೆ ವಿತ್ತ ಮಂತ್ರಾಲಯದ ಟಿಪ್ಪಣಿಯನ್ನು ಸೇರಿಸಿ ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಿಕೊಟ್ಟಿದ್ದು, ಅದರಲ್ಲಿ ಹಿಂದೆ (ಈಗಿನ ಅವಧಿ ಅಲ್ಲ) ವಿತ್ತಮಂತ್ರಿಯಾಗಿದ್ದಾಗ ಚಿದಂಬರಮ್ ವಹಿಸಿದ ಪಾತ್ರದ ಉಲ್ಲೇಖವೂ ಇದೆ. ಈ ವಿಚಾರದಲ್ಲಿ ಪ್ರಧಾನಿ ಮನಮೋಹನ ಸಿಂಗ್ ಆಗಲೇ ಪ್ರಣಬ್ ಮುಖರ್ಜಿ ಅವರ ಜತೆಯಲ್ಲಿ ವಿಚಾರ ವಿನಿಮಯ ನಡೆಸಿದ್ದರು. ಅದೊಂದು ದೊಡ್ಡ ವಿವಾದದ ಸ್ವರೂಪವನ್ನೇ ತಳೆದು ಸಾಕಷ್ಟು ಕಹಿ ವಾತಾವರಣವನ್ನು ಮೂಡಿಸಿತ್ತು. ಈಗ ಇಂತಹ ವಿಚಾರಗಳಿಗೆ ರಾಷ್ಟ್ರಪತಿ ವಿವರಣೆ ನೀಡುವಂತಿಲ್ಲ. ಪ್ರಧಾನಿಯೇ ಆ ವಿವರಣೆಯನ್ನು ಕೊಡಬೇಕು.
ಇದೆಲ್ಲವನ್ನೂ ಗಮನಿಸಿ, ಸಂಸದೀಯ ಸಮಿತಿಯ ಸದಸ್ಯರಾದ ಯಶವಂತ ಸಿನ್ಹಾ ಅವರು ಪ್ರಧಾನಿ ಸಮಿತಿಗೆ ಸೂಕ್ತ ರೀತಿಯ ವಿವರಣೆ ನೀಡಬೇಕೆಂದು ಕೇಳಿರುವುದು ಸರಿಯಾಗಿಯೇ ಇದೆ. ಆದರೆ ಪ್ರಧಾನಿಯವರನ್ನು ಸಮಿತಿಯ ಮುಂದೆ ಕರೆಯುವುದು ಸಮಿತಿಗೆ ಬಿಟ್ಟ ವಿಚಾರ. ಯಶವಂತ ಸಿನ್ಹಾ ಅವರಿಗೆ ಪ್ರಧಾನಿಗೆ ಪತ್ರ ಬರೆಯುವ ಅಧಿಕಾರವೇ ಇಲ್ಲವೆಂದು ಸಮಿತಿಯ ಅಧ್ಯಕ್ಷ ಚಾಕೋ ಹೇಳಿದ್ದಾರೆ. ಅದನ್ನೇ ಪ್ರಧಾನಿಯೂ ಹೇಳಿದ್ದಾರೆ. ಬುಧವಾರ ದೆಹಲಿಯಲ್ಲಿ ವಾಣಿಜ್ಯೋದ್ಯಮಿಗಳ ಕೂಟದಲ್ಲಿ ಭಾಷಣ ಮಾಡಿದ ಪ್ರಧಾನಿ ಈ ಪ್ರಕರಣದ ಪ್ರಸ್ತಾಪವನ್ನು ಎತ್ತದೇ ಹೋದರೂ, ಬೇರೊಂದು ಸನ್ನಿವೇಶದಲ್ಲಿ ಯಶವಂತ ಸಿನ್ಹಾ ಅವರ ಒತ್ತಾಯವನ್ನು ತಿರಸ್ಕರಿಸಿದ್ದಾರೆ. ಹಾಗಿದ್ರೆ ಸಂಸದೀಯ ಸಮಿತಿ ಪ್ರಧಾನಿಯ ವಿವರಣೆಯನ್ನು ಪಡೆಯದೇ ತನ್ನ ವರದಿಯನ್ನು ಸಿದ್ಧಪಡಿಸಬೇಕೇನು? ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಸಮಿತಿಯ ಮುಂದೆ ಹಾಜರಾಗುವುದು ಅನಗತ್ಯ ಎನಿಸಿದರೆ, ಮಾಜಿ ಸಚಿವ ಎ. ರಾಜಾ ಪ್ರಸ್ತಾಪಿಸಿದ ಅಂಶಗಳಿಗೆ ತಮ್ಮ ಪ್ರತಿಕ್ರಿಯೆಯನ್ನು ಒಂದು ಪತ್ರದ ಮೂಲಕ ದಾಖಲಿಸಬೇಕಾದ ಅಗತ್ಯವಿದೆ. ಆ ಪ್ರತಿಕ್ರಿಯೆ ಇಲ್ಲದ ಸಂಸದೀಯ ಸಮಿತಿಯ ವರದಿಯನ್ನು ಯಾರೂ ಗಂಭೀರವಾಗಿ ಪರಿಶೀಲಿಸುವುದಿಲ್ಲ. ಅದೂ ಬೊಫೋರ್ಸ್ ವರದಿಯ ಹಾದಿಯನ್ನೇ ಹಿಡಿಯುವ ಸಂಭವವಿದೆ.