ಮತ್ತೆ ಬಂತು ಐಪಿಎಲ್
ಮತ್ತೆ ಬಂದಿದೆ ಜಾಗತಿಕ ಕ್ರೀಡಾ ಜಗತ್ತಿನ ಮಹಾನ್ ಆವಿಷ್ಕಾರವೆನಿಸಿದ ಇಂಡಿಯಾ ಪ್ರೀಮಿಯರ್ ಲೀಗ್. ಮಂಗಳವಾರ ರಾತ್ರಿ ಕೋಲ್ಕತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿನ ಐಪಿಎಲ್-6 ಉದ್ಘಾಟನಾ ಮಹೋತ್ಸವ ಅಸಾಧಾರಣವಾಗಿತ್ತು. ಹೌದು. ಆ ಪಂದ್ಯಾಟಗಳ ವೈಶಿಷ್ಟ್ಯವೇ ಅದು. ಹಣದ ಸುರಿಮಳೆ. ಆದರೆ ಯಾರಿಗೆ? ಈಗ ಆರಂಭವಾಗಿರುವುದು ಆರನೆಯ ಐಪಿಎಲ್ ಕ್ರೀಡಾ ಕೂಟ. ಇದುವರೆಗೂ ಈ ಟೂರ್ನಿಯಲ್ಲಿ ಪಾಲುಗೊಳ್ಳುವ ತಂಡಗಳ ಯಜಮಾನರು ಸುಮಾರು 142 ಶತಕೋಟಿ ಡಾಲರ್ಗಳ ಬಂಡವಾಳವನ್ನು ಹೂಡಿದ್ದಾರೆಂದು ಅಂದಾಜು. ಕ್ರಿಕೆಟ್ ಪ್ರೇಮಿಗಳ ಹೃದಯವನ್ನು ಗೆದ್ದ ಆಟಗಾರರಿಗೆ ನಿಜವಾಗಲೂ ಸುಗ್ಗಿಯೋ ಸುಗ್ಗಿ. ಟಿವಿ ಪ್ರಸಾರದ ಗುತ್ತಿಗೆ ಹಿಡಿದವರ ಗಳಿಕೆಯೂ ಅಪಾರ. ಪಂದ್ಯಗಳು ನಡೆಯುವ ಸ್ಟೇಡಿಯಂಗಳಲ್ಲಿ ಜಮಾಯಿಸಿ, ಪ್ರತಿಯೊಂದು ಪಂದ್ಯವನ್ನೂ ಚಿರಸ್ಮರಣೀಯವಾಗಿ ಮಾಡುವ ಭಾರತೀಯ ಪ್ರೇಕ್ಷಕ ಸಮುದಾಯಗಳೂ ದೊಡ್ಡ ಪ್ರಮಾಣದಲ್ಲೇ ಹಣ ವೆಚ್ಚ ಮಾಡುತ್ತಾರೆ. ಸ್ಟೇಡಿಯಂ ಒಳಗೆ - ಹೊರಗೆ, ಪಂದ್ಯದ ಅನಂತರದ ಮೋಜಿನ ಪಾರ್ಟಿಗಳ ವೈಖರಿಯ ಆಸಕ್ತರಿಗೆ ಎಲ್ಲ ಮಾಧ್ಯಮಗಳಲ್ಲೂ ಬೇಕಾದಷ್ಟು ಪ್ರಚಾರ ಲಭ್ಯ. ಆದರೆ ಇದುವರೆಗೆ ತಂಡದ ಯಜಮಾನರಿಗೆ ಒಂದು ಪೈಸೆ ಲಾಭವೂ ಬಂದಿಲ್ಲವಂತೆ ನಿಜವೇ?